ಮಂಡ್ಯ ಸಂಸದ ಸ್ಥಾನಕ್ಕೆ ‘ಸಿನಿಮಾ’ದವರು ಬೇಡ

| Published : Oct 09 2023, 12:45 AM IST

ಸಾರಾಂಶ

ಮಂಡ್ಯ ಸಂಸದ ಸ್ಥಾನಕ್ಕೆ ‘ಸಿನಿಮಾ’ದವರು ಬೇಡ, ಕಾಂಗ್ರೆಸ್ ಕಾರ್ಯಕರ್ತರೆಲ್ಲರ ಒಕ್ಕೊರಲ ಆಗ್ರಹ, ಸ್ಥಳೀಯರಿಗೆ ಪ್ರಾಮುಖ್ಯತೆ ನೀಡುವಂತೆ ಮನವಿ
- ಕಾಂಗ್ರೆಸ್ ಕಾರ್ಯಕರ್ತರೆಲ್ಲರ ಒಕ್ಕೊರಲ ಆಗ್ರಹ - ಸ್ಥಳೀಯರಿಗೆ ಪ್ರಾಮುಖ್ಯತೆ ನೀಡುವಂತೆ ಮನವಿ ಮಂಡ್ಯ ಮಂಜುನಾಥ ಕನ್ನಡಪ್ರಭ ವಾರ್ತೆ ಮಂಡ್ಯ ಲೋಕಸಭಾ ಚುನಾವಣೆ ಜ್ವರ ಈಗ ಶುರುವಾಗಿದೆ. ಅಭ್ಯರ್ಥಿ ಯಾರಾಗಬೇಕೆಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. ಸ್ಥಳೀಯರನ್ನೇ ಗುರುತಿಸಿ ಟಿಕೆಟ್ ಕೊಡಿ. ಆದರೆ, ಸಿನಿಮಾ ಕಲಾವಿದರನ್ನು ಮಾತ್ರ ಕ್ಷೇತ್ರಕ್ಕೆ ಕರೆತರಬೇಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಒಕ್ಕೊರಲಿನಿಂದ ಆಗ್ರಹ ಪಡಿಸಿದ್ದಾರೆ. ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಲೋಕಸಭೆ ಚುನಾವಣೆ ವೀಕ್ಷಕ ಕೆ.ಸುಧಾಕರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರಿಂದ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು. ಸಿನಿಮಾದವರು ಸ್ಥಳೀಯವಾಗಿ ನೆಲೆಸಿರುವುದಿಲ್ಲ. ಸಾಮಾನ್ಯ ಜನರು ಅವರನ್ನು ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ಅವರು ಜನರ ಕೈಗೆ ಸಿಗುವುದೂ ಇಲ್ಲ. ಪಕ್ಷ ಸಂಘಟನೆಗೂ ಇದರಿಂದ ತೊಡಕಾಗಲಿದೆ. ೨೫ ವರ್ಷಗಳಿಂದ ಹಲವು ಸಿನಿಮಾ ಕಲಾವಿದರನ್ನು ನೋಡಾಗಿದೆ. ಹಾಗಾಗಿ ಸಿನಿಮಾದವರನ್ನು ಕ್ಷೇತ್ರಕ್ಕೆ ಮತ್ತೆ ಕರೆತರುವುದು ಬೇಡ. ಅವರಿಂದ ಅಭಿವೃದ್ಧಿಯನ್ನೂ ನಿರೀಕ್ಷಿಸಲಾಗುವುದಿಲ್ಲ. ಪಕ್ಷ ಸಂಘಟನೆಯನ್ನೂ ಮಾಡಲಾಗದು ಎಂಬುದನ್ನು ಕಾಂಗ್ರೆಸ್ ನಾಯಕರ ಗಮನಕ್ಕೆ ತಂದರು ಎಂದು ತಿಳಿದುಬಂದಿದೆ. ಸ್ಟಾರ್ ನಟ ಅಥವಾ ನಟಿಯನ್ನು ತಂದರೆ ಅವರಿಗಿರುವ ಜನಪ್ರಿಯತೆ ಮೇಲೆ ಸುಲಭವಾಗಿ ಗೆಲ್ಲಬಹುದೆಂಬ ಲೆಕ್ಕಾಚಾರದೊಂದಿಗೆ ಮತ್ತೊಂದು ಹೊಸ ಮುಖವನ್ನು ಕರೆತರುವುದು ಬೇಡ. ಕಲಾವಿದರನ್ನು ಬಲವಂತವಾಗಿ ಮಂಡ್ಯ ಕ್ಷೇತ್ರದ ಮೇಲೆ ಹೇರಬೇಡಿ. ಇದು ಹೈಕಮಾಂಡ್ ತೀರ್ಮಾನ, ನಾವೇನೂ ಮಾಡಲಾಗದು ಎಂದೂ ಹೇಳುವುದು ಬೇಡ. ಈಗಲೇ ಸಿನಿಮಾ ಕಲಾವಿದರನ್ನು ಹೊರತುಪಡಿಸಿ ಪಕ್ಷಕ್ಕಾಗಿ ದುಡಿದವರನ್ನು, ವರ್ಚಸ್ವಿ ನಾಯಕರನ್ನು ಗುರುತಿಸಿ ಟಿಕೆಟ್ ನೀಡಬೇಕೆಂದು ವಿವಿಧ ಮೋರ್ಚಾ ಅಧ್ಯಕ್ಷರು, ತಾಲೂಕು ಘಟಕದ ಅಧ್ಯಕ್ಷರು ತಿಳಿಸಿದರು ಎನ್ನಲಾಗಿದೆ. ಸ್ಥಳೀಯರಿಗೆ ಪ್ರಾಮುಖ್ಯತೆ ಕೊಡಿ: ಲೋಕಸಭೆ ಸ್ಥಾನಕ್ಕೆ ಟಿಕೆಟ್ ನೀಡುವಾಗ ಸ್ಥಳೀಯರನ್ನು ಪರಿಗಣಿಸುವುದು ಒಳ್ಳೆಯದು. ಅವರು ಸದಾ ಕಾಲ ಕ್ಷೇತ್ರದೊಳಗೆ ನೆಲೆಸಿರುತ್ತಾರೆ. ಜನರ ಕೈಗೆ ಸುಲಭವಾಗಿ ಸಿಗುತ್ತಾರೆ. ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವುದಕ್ಕೆ ಮತ್ತು ಪಕ್ಷ ಸಂಘಟನೆಗೂ ಹೆಚ್ಚಿನ ಅನುಕೂಲವಾಗಲಿದೆ. ಸ್ಥಳೀಯ ನಾಯಕರು, ಮುಖಂಡರಿಗೆ ಕ್ಷೇತ್ರದೊಳಗಿನ ಸಮಸ್ಯೆಗಳ ಅರಿವಿರುತ್ತದೆ. ಅದನ್ನು ತಿಳಿದುಕೊಂಡು ಕೆಲಸ ಮಾಡುತ್ತಾರೆ. ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುವರು. ಹಾಗಾಗಿ ಟಿಕೆಟ್ ನೀಡುವ ವೇಳೆ ಸ್ಥಳೀಯರಿಗೆ ಪ್ರಾಮುಖ್ಯತೆ ನೀಡುವಂತೆ ಕೋರಿದ್ದಾರೆ ಎಂದು ಹೇಳಲಾಗಿದೆ. ಹಣವಂತರಿಗೂ ಮಣೆ ಹಾಕಬೇಡಿ: ಸಾಕಷ್ಟು ಹಣ ಸಂಪಾದನೆ ಮಾಡಿಕೊಂಡು ರಾಜಕೀಯಕ್ಕೆ ಬರಲು ಉತ್ಸಾಹದಲ್ಲಿರುವವರಿಗೂ ಮಣೆ ಹಾಕಬೇಡಿ. ಹೊರಗಿನಿಂದ ಯಾರನ್ನೋ ಕರೆತಂದು ಅಭ್ಯರ್ಥಿ ಮಾಡುವುದರಿಂದ ಕ್ಷೇತ್ರ ಪ್ರಗತಿ ಕಾಣುವುದಿಲ್ಲ. ಸಮಸ್ಯೆಗಳಿಗೆ ಪರಿಹಾರವೂ ದೊರಕುವುದಿಲ್ಲ. ಸ್ಥಳೀಯವಾಗಿ ಅನೇಕ ಮಂದಿ ಆಕಾಂಕ್ಷಿಗಳಿದ್ದಾರೆ. ಅವರಿಗೇ ಶಕ್ತಿ ತುಂಬುವ ಕೆಲಸ ಮಾಡೋಣ. ಒಗ್ಗಟ್ಟಿನಿಂದ ಅವರ ಗೆಲುವಿಗೆ ಶ್ರಮಿಸೋಣ. ಹೊರಗಿನಿಂದ ವ್ಯಕ್ತಿಯನ್ನು ಕರೆತಂದರೆ ಅವರಿಗೆ ಕ್ಷೇತ್ರದ ಬಗ್ಗೆ ಪರಿಚಯವಿರುವುದಿಲ್ಲ. ಅವರೂ ಜನರ ಕೈಗೆ ಸುಲಭವಾಗಿ ಸಿಗಲಾರರು. ಸಮಸ್ಯೆಗಳಿಗೆ ಸ್ಪಂದಿಸುವುದೂ ಕಷ್ಟವಾಗಲಿದೆ. ಆದ ಕಾರಣ ಹಣವುಳ್ಳವರನ್ನು ಕರೆತಂದು ಅಭ್ಯರ್ಥಿ ಮಾಡದಿರುವಂತೆ ಪಕ್ಷದ ನಾಯಕರನ್ನು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಬಾಕ್ಸ್‌.... ಅಭ್ಯರ್ಥಿಯಾಗಲು ಇವರು ಆಕಾಂಕ್ಷಿಗಳು..! ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗುವುದಕ್ಕೆ ಸ್ಥಳೀಯ ಮುಖಂಡರು, ಮಾಜಿ ಶಾಸಕರು ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಹಿಂದುಳಿದ ವರ್ಗದವರೊಬ್ಬರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ನೀಡಬೇಕೆಂಬ ಕೂಗು ಪಕ್ಷದ ವಲಯದೊಳಗೆ ಕೇಳಿ ಬಂದಿದ್ದು ಆ ವರ್ಗದಿಂದ ದಡದಪುರ ಶಿವಣ್ಣ ಅವರ ಹೆಸರನ್ನು ಸೂಚಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದ ಅಭ್ಯರ್ಥಿಯಾಗಲು ಮುಂದಾಗಿದ್ದ ಡಾ.ಎಚ್.ಎನ್. ರವೀಂದ್ರ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ಉತ್ಸಾಹ ತೋರಿದ್ದಾರೆ ಎನ್ನಲಾಗಿದೆ. ಕೆ.ಆರ್‌.ಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರು ನನ್ನ ಹಿರಿತನವನ್ನು ಪರಿಗಣಿಸಿ ತಮಗೇ ಟಿಕೆಟ್ ನೀಡುವಂತೆಯೂ ಕೋರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸೇರಿರುವ ಕೆ.ಕೆ. ರಾಧಾಕೃಷ್ಣ ಅವರೂ ಕೂಡ ಸಂಸದ ಸ್ಥಾನದ ಟಿಕೆಟ್ ಮೇಲೆ ಕಣ್ಣಿಟ್ಟು ಹೋರಾಟ ನಡೆಸಿದ್ದಾರೆ ಎನ್ನಲಾಗಿದೆ. ಶೀಘ್ರವೇ ಅಭ್ಯರ್ಥಿ ಹೆಸರು ಘೋಷಿಸಿ ಲೋಕಸಭೆ ಚುನಾವಣೆ ಮುಂದಿನ ವರ್ಷ ಏಪ್ರಿಲ್- ಮೇಗೆ ನಡೆದರೂ ಈಗಲೇ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕು. ಆರು ತಿಂಗಳು ಮುಂಚಿತವಾಗಿ ಅಭ್ಯರ್ಥಿ ಘೋಷಣೆ ಮಾಡುವುದರಿಂದ ಅವರು ಕ್ಷೇತ್ರದ ಎಂಟು ತಾಲೂಕುಗಳನ್ನು ಸುತ್ತಿ ಪ್ರಚಾರ ನಡೆಸುವುದಕ್ಕೆ ಅನುಕೂಲವಾಗಲಿದೆ. ಮತದಾರರನ್ನು ಭೇಟಿಯಾಗುವುದಕ್ಕೆ ಹೆಚ್ಚು ಸಮಯಾವಕಾಶ ದೊರಕಲಿದೆ. ಪೂರ್ವ ತಯಾರಿ ಹಾಗೂ ವ್ಯವಸ್ಥಿತ ಕಾರ್ಯತಂತ್ರದೊಂದಿಗೆ ಚುನಾವಣೆ ನಡೆಸಿದರೆ ಗೆಲುವು ಸುಲಭವಾಗಲಿದೆ ಎಂಬ ಅಭಿಪ್ರಾಯವನ್ನೂ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ. ಕೊನೇ ಘಳಿಗೆಯಲ್ಲಿ ಅಭ್ಯರ್ಥಿ ಘೋಷಣೆ ಮಾಡಿದರೆ ಅದರಿಂದ ಪ್ರಚಾರ ಕಷ್ಟವಾಗಲಿದೆ. ಕಾರ್ಯಕರ್ತರಲ್ಲೂ ಗೊಂದಲ ಮನೆ ಮಾಡುತ್ತದೆ. ಆ ಸಮಯದಲ್ಲಿ ಉಂಟಾಗಬಹುದಾದ ಭಿನ್ನಮತ, ತಿಕ್ಕಾಟಗಳನ್ನು ದೂರ ಮಾಡುವುದಕ್ಕೆ ಸಮಯವೂ ಸಿಗುವುದಿಲ್ಲ. ಅದಕ್ಕಾಗಿ ಈಗಲೇ ಅಭ್ಯರ್ಥಿ ಹೆಸರು ಘೋಷಿಸಿದರೆ ಉತ್ತಮ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸಿದ ವೇಳೆ ಹೊರಗಿನಿಂದ ಯಾರೋ ಅಭ್ಯರ್ಥಿಯನ್ನು ಕರೆತರುವ ಬದಲು ಸ್ಥಳೀಯವಾಗಿರುವವರಿಗೇ ಟಿಕೆಟ್ ನೀಡಿದರೆ ಅವರು ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರನ್ನು ಒಟ್ಟುಗೂಡಿಸಿಕೊಂಡು ಮುನ್ನಡೆಯಲು ಸಾಧ್ಯವಾಗಲಿದೆ. ಇದರಿಂದ ಪಕ್ಷದೊಳಗೆ ಒಗ್ಗಟ್ಟು ಮೂಡಿ ಎಲ್ಲರೂ ಒಂದಾಗಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವರು ಎಂಬ ಮಾತುಗಳು ಕೇಳಿಬಂದಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.