ಬಿಜೆಪಿ ಸಭೆಯಲ್ಲಿ ಕೈ ಕಾರ್ಯಕರ್ತೆಯರ ದಾಂಧಲೆ: ಚುನಾವಣಾಧಿಕಾರಿಗೆ ದೂರು

| Published : Apr 16 2024, 02:04 AM IST / Updated: Apr 16 2024, 04:37 AM IST

ಸಾರಾಂಶ

ಬಿಜೆಪಿಯಿಂದ ಆಯೋಜಿಸಿದ್ದ ಸಭೆಗೆ ತೆರಳಿ ದಾಂಧಲೆ ನಡೆಸಿ ಹಿರಿಯ ನಾಗರಿಕರು ಮತ್ತು ಮಹಿಳೆಯರ ಮೇಲೆ ಹಲ್ಲೆ ನಡೆಸಿ, ನಿಂದಿಸಿದ ಆರೋಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ಸ್ಥಳೀಯ ಬಿಜೆಪಿ ಮುಖಂಡರು ದೂರು ನೀಡಿದ್ದಾರೆ.

 ಬೆಂಗಳೂರು :  ಬಿಜೆಪಿಯಿಂದ ಆಯೋಜಿಸಿದ್ದ ಸಭೆಗೆ ತೆರಳಿ ದಾಂಧಲೆ ನಡೆಸಿ ಹಿರಿಯ ನಾಗರಿಕರು ಮತ್ತು ಮಹಿಳೆಯರ ಮೇಲೆ ಹಲ್ಲೆ ನಡೆಸಿ, ನಿಂದಿಸಿದ ಆರೋಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ಸ್ಥಳೀಯ ಬಿಜೆಪಿ ಮುಖಂಡರು ದೂರು ನೀಡಿದ್ದಾರೆ.

ಏ.13ರಂದು ಸಹಕಾರ ಸಂಘಗಳ ಸದಸ್ಯರೊಂದಿಗೆ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಬಿಜೆಪಿ ಚುನಾವಣಾ ಕಚೇರಿಯಲ್ಲಿ ಸಭೆ ಆಯೋಜಿಸಿದ್ದರು. ಈ ಸಭೆಗೆ ಗುರು ರಾಘವೇಂದ್ರ ಬ್ಯಾಂಕ್ ಠೇವಣಿದಾರರ ಹೆಸರಿನಲ್ಲಿ ಕಾಂಗ್ರೆಸ್‌ ಪಕ್ಷದ ಲಕ್ಷ್ಮಿ ಮಂಜುಳಾ ಮತ್ತು ಅವರ ಸಂಗಡಿಗರು ಆಗಮಿಸಿ ದಾಂಧಲೆ ನಡೆಸಿದ್ದಾರೆ. ಜಾಲತಾಣಗಳಲ್ಲಿ ಸಂಸದರ ಬಗ್ಗೆ ಕೆಟ್ಟದಾಗಿ ಬಿಂಬಿಸಲು ನಾಗರಿಕರನ್ನು ತಳ್ಳಿ ನೂಕುನುಗ್ಗಲು ಉಂಟು ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ದೌರ್ಜನ್ಯ ಎಸಗಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ದಾಂಧಲೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಹಾಜರಿದ್ದ ಪೊಲೀಸರು ಕೂಡ ದಾಂಧಲೆಯನ್ನು ತಡೆಯದೆ ನಿರ್ಲಕ್ಷ್ಯ ತೋರಿದ್ದಾರೆ. ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಂ.ಆರ್.ವೆಂಕಟೇಶ್ ಸೇರಿದಂತೆ ಇನ್ನಿತರ ಬಿಜೆಪಿ ಮುಖಂಡರು ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.