ಸಾರಾಂಶ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಪಕ್ಷ ಸಂಘಟನೆ ವೇಗ ಕಳೆದುಕೊಂಡಿರುವುದರಿಂದ ಶಾಸಕರ ಅಭಿಪ್ರಾಯ ಪಡೆದು ಅಧ್ಯಕ್ಷರ ನೇಮಕ ವಿಚಾರದ ಬಗ್ಗೆ ತೀರ್ಮಾನ ಕೈಗೊಳ್ಳಬೇಕು’ ಎಂದು ಸತೀಶ್ ಜಾರಕಿಹೊಳಿ ಪ್ರತಿಪಾದಿಸಿದ್ದಾರೆ.
ಬೆಂಗಳೂರು : ‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆದರೆ, ಈ ಬಗ್ಗೆ ಪಕ್ಷದಲ್ಲಿ ಗೊಂದಲವಿದೆ. ಇದನ್ನು ಹೈಕಮಾಂಡ್ ಪರಿಹರಿಸಬೇಕು. ಪಕ್ಷ ಸಂಘಟನೆ ವೇಗ ಕಳೆದುಕೊಂಡಿರುವುದರಿಂದ ಶಾಸಕರ ಅಭಿಪ್ರಾಯ ಪಡೆದು ಅಧ್ಯಕ್ಷರ ನೇಮಕ ವಿಚಾರದ ಬಗ್ಗೆ ತೀರ್ಮಾನ ಕೈಗೊಳ್ಳಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಪಾದಿಸಿದ್ದಾರೆ.
ಆದರೆ ಇದರ ಜತೆತೇ ‘ಅಹಿಂದ ಸಮಾಜಕ್ಕೆ ಸೇರಿದ ನಾನು ಕೆಪಿಸಿಸಿ ಅಧ್ಯಕ್ಷನಾಗಬೇಕು ಎಂದು ಕೆಲ ಶಾಸಕರು ಹೇಳುತ್ತಿದ್ದಾರೆ’ ಎಂದು ತಿಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸತೀಶ್ ಯತ್ನ ನಡೆಸುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಸತೀಶ್ ಹೇಳೋದೇನು?:
ಸುದ್ದಿಗಾರರಿಗೆ ಬುಧವಾರ ವಿವರಣೆ ನೀಡಿರುವ ಸತೀಶ್ ಜಾರಕಿಹೊಳಿ ಅವರು, ‘ನೇರವಾಗಿ ಕೆಪಿಸಿಸಿ ಅಧ್ಯಕ್ಷರು ಬದಲಾಗಬೇಕು ಎಂದು ಹೇಳುತ್ತಿಲ್ಲ ಮತ್ತು ತಾವು ಈ ಹುದ್ದೆಗೆ ಆಕಾಂಕ್ಷಿ ಎಂದೂ ನೇರವಾಗಿ ಹೇಳುತ್ತಿಲ್ಲ. ಆದರೆ, ಕೆಪಿಸಿಸಿಗೆ ಪೂರ್ಣಾವಧಿ ಅಧ್ಯಕ್ಷರ ನೇಮಕವಾಗಬೇಕು ಎಂಬುದು ನನ್ನ ಅನಿಸಿಕೆ. ಈ ಹಿಂದೆ ಲೋಕಸಭಾ ಚುನಾವಣೆ ನಂತರ ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸುವುದಾಗಿ ವರಿಷ್ಠರು ಹೇಳಿದ್ದರು. ಇದರಿಂದಾಗಿ ಪಕ್ಷದೊಳಗೆ ಗೊಂದಲ ನಿರ್ಮಾಣವಾಗಿದೆ. ಇದನ್ನು ನಿವಾರಿಸಲು ಹೈಕಮಾಂಡ್ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಿಸಲಾಗುತ್ತದೆಯೇ ಅಥವಾ ಹಾಲಿ ಇರುವವರನ್ನೇ ಮುಂದುವರೆಸಲಾಗುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸುತ್ತಾರೆ.
ಜತೆಗೆ, ‘ಕೆಪಿಸಿಸಿ ಅಧ್ಯಕ್ಷ ಯಾರನ್ನೇ ಮಾಡಿದರೂ ಮತಗಳಿಕೆ ಹೆಚ್ಚಿಸುವ, ಜನಪ್ರಿಯತೆ ಇರುವ ನಾಯಕರನ್ನು ನೇಮಿಸಬೇಕು’ ಎಂದು ಒತ್ತಾಯಿಸುತ್ತಾರೆ.
ಅಲ್ಲದೆ, ಪ್ರಸ್ತುತ ಪಕ್ಷ ಸಂಘಟನೆ ವೇಗ ಕಳೆದುಕೊಳ್ಳುತ್ತಿದೆ ಎನ್ನುವ ಅವರು, ಇದಕ್ಕೆ ನಾನು ಸೇರಿ ಪಕ್ಷ ಸಂಘಟನೆ ಹೊಣೆ ಹೊತ್ತಿದ್ದವರು ಸಚಿವರಾಗಿ ಕಾರ್ಯದೊತ್ತಡ ಅನುಭವಿಸುತ್ತಿರುವುದು ಕಾರಣವಿರಬಹುದು ಎಂದೂ ಹೇಳುವ ಮೂಲಕ ಒಬ್ಬರಿಗೆ ಒಂದು ಹುದ್ದೆ ಸಿದ್ದಾಂತ ಪಾಲನೆಯಾಗಬೇಕು ಎಂದೂ ಸೂಚ್ಯವಾಗಿ ತಿಳಿಸುತ್ತಾರೆ.
ಅಲ್ಲದೆ, ಪ್ರಸ್ತುತ ಪಕ್ಷ ಸಂಘಟನೆ ವೇಗ ಕಳೆದುಕೊಳ್ಳುತ್ತಿದೆ ಎನ್ನುವ ಅವರು, ಇದಕ್ಕೆ ನಾನು ಸೇರಿ ಪಕ್ಷ ಸಂಘಟನೆ ಹೊಣೆ ಹೊತ್ತಿದ್ದವರು ಸಚಿವರಾಗಿ ಕಾರ್ಯದೊತ್ತಡ ಅನುಭವಿಸುತ್ತಿರುವುದು ಕಾರಣವಿರಬಹುದು ಎಂದೂ ಹೇಳುವ ಮೂಲಕ ಒಬ್ಬರಿಗೆ ಒಂದು ಹುದ್ದೆ ಸಿದ್ದಾಂತ ಪಾಲನೆಯಾಗಬೇಕು ಎಂದೂ ಸೂಚ್ಯವಾಗಿ ತಿಳಿಸುತ್ತಾರೆ.
ಅಹಿಂದ ಶಾಸಕರ ಒತ್ತಡ:
ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ್ದ ಸುರ್ಜೇವಾಲಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚಿಸಿದ್ದನ್ನು ಒಪ್ಪಿಕೊಳ್ಳುವ ಸತೀಶ್ ಜಾರಕಿಹೊಳಿ ಅವರು, ‘ಕೆಪಿಸಿಸಿ ಹುದ್ದೆ ತಮಗೆ ನೀಡಿ ಎಂದು ಕೇಳಿಲ್ಲ’ ಎಂದೇನೋ ಹೇಳುತ್ತಾರೆ. ಇದೇ ಓಘದಲ್ಲಿ, ‘ಅಹಿಂದ ಸಮಾಜಕ್ಕೆ ಸೇರಿದ ನಾನು ಕೆಪಿಸಿಸಿ ಅಧ್ಯಕ್ಷ ಆಗಬೇಕು ಎಂದು ಕೆಲ ಶಾಸಕರು ಹೇಳುತ್ತಿದ್ದಾರೆ. ಜಿಲ್ಲಾ ಪ್ರವಾಸದ ವೇಳೆ ನನ್ನ ಮೇಲೂ ಒತ್ತಡ ಹಾಕುತ್ತಿದ್ದಾರೆ. ಆದರೆ, ಈ ಬಗ್ಗೆ ನಾನು ಪಕ್ಷದ ನಾಯಕರೊಂದಿಗೆ ಚರ್ಚಿಸಿಲ್ಲ’ ಎನ್ನುವ ಮೂಲಕ ತಮಗಿರುವ ಆಸಕ್ತಿಯ ಸುಳಿವು ನೀಡುತ್ತಾರೆ.
ಡಿಕೆಶಿ ಬದಲಿಸಿ ಎನ್ನಲ್ಲ:
ಹಾಲಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರೇ ಮುಂದುವರಿದರೆ ಅದರಲ್ಲಿ ತಪ್ಪಿಲ್ಲ. ಎನ್ನುವ ಸತೀಶ್ ಜಾರಕಿಹೊಳಿ ಅವರು, ಒಂದೇ ಹುದ್ದೆ ಎಂಬ ಸಿದ್ಧಾಂತದಲ್ಲಿ ಕೆಲವೊಮ್ಮೆ ಬದಲಾವಣೆಯಾಗಬಹುದು ಎಂದೂ ಹೇಳುತ್ತಾರೆ.
ಸಾಮರ್ಥ್ಯವಿದ್ದರೆ ಒಬ್ಬರಿಗೆ ಎರಡಲ್ಲ, ಮೂರು ಹುದ್ದೆಯನ್ನೂ ನೀಡಬಹುದು. ಅದರಲ್ಲಿ ಯಾವುದೇ ತಕರಾರಿಲ್ಲ. ಎಲ್ಲ ವಿಚಾರಗಳಿಗೂ ಹೈಕಮಾಂಡ್ ನಿರ್ಧಾರ ಅಂತಿಮವಾಗಿರಲಿದೆ. ಆದರೆ, ಜನರಲ್ಲಿ ಮತ್ತು ಪಕ್ಷದೊಳಗೆ ಮೂಡುವ ಗೊಂದಲಗಳ ನಿವಾರಣೆಯಾಗಬೇಕಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಬೇಕಾದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಶಾಸಕರ ಸಭೆ ನಡೆಸಿ ಚರ್ಚೆ ನಡೆಸಬೇಕು ಎಂದೂ ಅವರು ಆಗ್ರಹಿಸುತ್ತಾರೆ.
ಪಕ್ಷ ಸಂಘಟನೆ ವೇಗ ಕಡಿಮೆಯಾಗಿದೆ:
ಪಕ್ಷ ಸಂಘಟನೆಗೆ ಸಂಬಂಧಿಸಿ 2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇದ್ದಂತಹ ವೇಗ ಈಗ ಕಡಿಮೆಯಾಗಿದೆ. ನಾನೂ ಸೇರಿ ಸಚಿವ ಸ್ಥಾನ ಪಡೆದವರು ನಂತರ ಪಕ್ಷ ಸಂಘಟನೆ ಕಡೆಗೆ ಸರಿಯಾಗಿ ಗಮನ ಕೊಡದ ಕಾರಣ ಹೀಗಾಗಿದೆ. ನಮ್ಮ ಖಾತೆಗಳನ್ನು ನಿಭಾಯಿಸುವಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿರುವುದರಿಂದ ಪಕ್ಷದ ಚಟುವಟಿಕೆಗಳತ್ತ ಗಮನಹರಿಸಲು ಸಾಧ್ಯವಾಗದೇ ಇರುವುದೂ ಇದಕ್ಕೆ ಕಾರಣವಿರಬಹುದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಮಾಸಾಂತ್ಯಕ್ಕೆ ದೆಹಲಿ ಪ್ರವಾಸ
ಈ ತಿಂಗಳ ಅಂತ್ಯಕ್ಕೆ ದೆಹಲಿ ಪ್ರವಾಸ ಕೈಗೊಳ್ಳಲಿದ್ದೇನೆ. ಆದರೆ, ಪಕ್ಷದ ಅಧ್ಯಕ್ಷ ಸ್ಥಾನ ಸೇರಿ ಯಾವುದೇ ರಾಜಕೀಯ ವಿಚಾರಗಳಿಗಾಗಿ ದೆಹಲಿಗೆ ಹೋಗುತ್ತಿಲ್ಲ. ಬದಲಿಗೆ ದೆಹಲಿಯಲ್ಲಿ ನೂತನ ಕರ್ನಾಟಕ ಭವನ ನಿರ್ಮಾಣಗೊಂಡಿದ್ದು, ಅದರ ಉದ್ಘಾಟನೆಗೆ ಹೋಗುತ್ತಿದ್ದೇನೆ. ಆ ಸಂದರ್ಭದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಅವಕಾಶ ಸಿಕ್ಕರೆ ಭೇಟಿಯಾಗುತ್ತೇನೆ ಎಂದು ಮಾಹಿತಿ ನೀಡಿದರು.
ಭಿಕ್ಷೆ ಪದ ಬಳಕೆಯನ್ನು ದೊಡ್ಡದು
ಮಾಡೋ ಅಗತ್ಯವಿಲ್ಲ: ಜಾರಕಿಹೊಳಿ
ಕಾರ್ಯಕರ್ತ ಬೆಂಬಲವಿದ್ದರೆ ಯಾರ ಭಿಕ್ಷೆಯೂ ಬೇಡ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾವ ಅರ್ಥದಲ್ಲಿ ಅವರು ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಕಾರ್ಯಕರ್ತರಿಂದಲೇ ಎಲ್ಲರೂ ಶಾಸಕರಾಗಿರುವುದು, ಶಾಸಕರಿಂದ ಸರ್ಕಾರ ರಚನೆಯಾಗಿದೆ ಹಾಗೂ ಸರ್ಕಾರದಿಂದ ನಾವು ಸಚಿವರಾಗಿದ್ದೇವೆ. ಇನ್ನು, ಡಿ.ಕೆ.ಶಿವಕುಮಾರ್ ಮಾತಿನ ಭರದಲ್ಲಿ ಭಿಕ್ಷೆ ಎಂಬ ಪದ ಬಳಕೆ ಮಾಡಿರಬೇಕು. ಅದನ್ನು ದೊಡ್ಡದು ಮಾಡುವ ಅವಶ್ಯಕತೆಯಿಲ್ಲ ಎಂದರು.
ನಾನು ಕೆಪಿಸಿಸಿ ಅಧ್ಯಕ್ಷ ಆಗಲಿ
ಎಂದು ಹಲವರ ಕೂಗು: ಸತೀಶ್
- ಜಿಲ್ಲಾ ಪ್ರವಾಸದ ವೇಳೆ ಕೆಲ ಶಾಸಕರು ಒತ್ತಡ ಹೇರುತ್ತಿದ್ದಾರೆ
- ಕೆಪಿಸಿಸಿಗೆ ಪೂರ್ಣಾವಧಿ ಅಧ್ಯಕ್ಷರ ನೇಮಕ ನನ್ನ ಅಭಿಲಾಷೆ
- ಡಿಕೆಶಿ ಬದಲಿಸಿ ಎನ್ನುತ್ತಿಲ್ಲ, ಪಕ್ಷದಲ್ಲಿನ ಗೊಂದಲ ನಿವಾರಿಸಿ
- ಶಾಸಕರ ಅಭಿಪ್ರಾಯ ಕೇಳಿ ಈ ಕುರಿತು ತೀರ್ಮಾನ ಕೈಗೊಳ್ಳಿ
ಹೈಕಮಾಂಡ್ ತೀರ್ಮಾನವೇ ಅಂತಿಮ
ಹೊಸ ಕೆಪಿಸಿಸಿ ಅಧ್ಯಕ್ಷರ ನೇಮಕದ ಬಗ್ಗೆ ಹೈಕಮಾಂಡ್ ನವರು ಏನು ತೀರ್ಮಾನ ಮಾಡ್ತಾರೋ ಅದೇ ಅದೇ ಆಗುತ್ತದೆ. ಇನ್ನು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿಯವರು ಹೇಳಿಕೆ ನಿಡಿರುವ ಬಗ್ಗೆ ಅವರನ್ನೇ ಕೇಳಬೇಕು. ನಾನು ಈ ಬಗ್ಗೆ ಪ್ರತಿಕ್ರಿಯಿಸಲ್ಲ.
- ಸಿದ್ದರಾಮಯ್ಯ, ಮುಖ್ಯಮಂತ್ರಿ