ಕೋಟ ಪೂಜಾರಿ ಅವರಿಂದ ತೆರವಾಗಿದ್ದ ಸ್ಥಾನ : ಎಂಎಲ್ಸಿ ಉಪ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

| Published : Oct 25 2024, 12:52 AM IST / Updated: Oct 25 2024, 04:30 AM IST

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯಾಡಳಿತಗಳಿಂದ ನಡೆದ ವಿಧಾನ ಪರಿಷತ್‌ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್‌ ಕುಮಾರ್‌ ಪುತ್ತೂರು ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.

 ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯಾಡಳಿತಗಳಿಂದ ನಡೆದ ವಿಧಾನ ಪರಿಷತ್‌ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್‌ ಕುಮಾರ್‌ ಪುತ್ತೂರು ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾಗಿದ್ದ ಸ್ಥಾನವನ್ನು ಬಿಜೆಪಿ ತನ್ನ ಬಳಿ ಉಳಿಸಿಕೊಂಡಂತಾಗಿದೆ.

ಕ್ಷೇತ್ರದಿಂದ ಈ ಹಿಂದೆ ಗೆದ್ದಿದ್ದ ಕೋಟ ಪೂಜಾರಿ ಅವರು ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾದ ಈ ಸ್ಥಾನಕ್ಕೆ ಅ.21ರಂದು ಚುನಾವಣೆ ನಡೆದಿದ್ದು, ಮಂಗಳೂರಿನ ಅಲೋಶಿಯಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಮತ ಎಣಿಕೆ ನಡೆಯಿತು.

ಬಿಜೆಪಿ ಅಭ್ಯರ್ಥಿ ಕಿಶೋರ್‌ ಕುಮಾರ್‌ ಪರವಾಗಿ 3,655, ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿಗೆ 1,958, ಎಸ್‌ಡಿಪಿಐನ ಅನ್ವರ್‌ ಸಾದತ್‌ ಬಜತ್ತೂರು 195 ಹಾಗೂ ಪಕ್ಷೇತರ ಅಭ್ಯರ್ಥಿ ದಿನಕರ್‌ ಉಳ್ಳಾಲ್‌ಗೆ 9 ಮತಗಳು ದೊರಕಿತು. ಒಟ್ಟು 90 ಮತಗಳು ಅಸಿಂಧುವಾಗಿದೆ. ಈ ಮೂಕ ಬಿಜೆಪಿಯ ಕಿಶೋರ್‌ ಕುಮಾರ್‌ ಅವರು 1,697 ಮತಗಳ ಅಂತರದಿಂದ ಗೆಲುವು ಪಡೆದರು.

ಗೆಲುವಿನ ಅಂತರ ಜಾಸ್ತಿ: 2021ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ 3,672 ಮತ ಪಡೆದರೆ, ಕಾಂಗ್ರೆಸ್‌ನ ಮಂಜುನಾಥ ಭಂಡಾರಿ 2,079 ಮತ ಗಳಿಸಿದ್ದರು. ಎಸ್‌ಡಿಪಿಐನ ಶಫಿ ಬೆ‍ಳ್ಳಾರೆ 204 ಮತ ಗಳಿಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಕೋಟ ಅವರ ಗೆಲುವಿನ ಅಂತರ 1,593 ಆಗಿತ್ತು. ಈ ಬಾರಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಅಭ್ಯರ್ಥಿ ಕಿಶೋರ್‌ರ ಗೆಲುವಿನ ಅಂತರ 1,697 ಆಗಿದೆ. ಆದರೆ ಕಳೆದ ಬಾರಿಯ ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ ಮತ (3,672)ಗಳು, ಈ ಬಾರಿಯ ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ ಮತ(3,655)ಗಳನ್ನು ಹೋಲಿಸಿದರೆ, ಈ ಬಾರಿ ಬಿಜೆಪಿ ಅಭ್ಯರ್ಥಿ ಕಿಶೋರ್‌ ಕುಮಾರ್‌ಗೆ ಕೋಟ ಶ್ರೀನಿವಾಸ ಪೂಜಾರಿ ಅವರಿಗಿಂತ 17 ಮತ ಕಡಿಮೆ ಬಿದ್ದಂತಾಗಿದೆ.

ಕಾಂಗ್ರೆಸ್‌ಗೂ ಕಡಿಮೆ ಮತ: ಕಾಂಗ್ರೆಸ್‌ನಲ್ಲಿ ಕಳೆದ ಬಾರಿ ಮಂಜುನಾಥ ಭಂಡಾರಿಗೆ ಪ್ರಥಮ ಪ್ರಾಶಸ್ತ್ಯದಲ್ಲಿ 2,079 ಮತ ಸಿಕ್ಕಿತ್ತು. ಈ ಬಾರಿ ಕಾಂಗ್ರೆಸ್‌ನ ರಾಜು ಪೂಜಾರಿಗೆ 1,958 ಮತ ಲಭಿಸಿದೆ. ಅಂದರೆ ರಾಜು ಪೂಜಾರಿಗೆ 121 ಮತ ಕಡಿಮೆ ಬಿದ್ದಿದೆ. ಕಳೆದ ಬಾರಿ ಎಸ್‌ಡಿಪಿಐಗೆ 204 ಮತ ಸಿಕ್ಕಿದರೆ, ಈ ಬಾರಿ ಎಸ್‌ಡಿಪಿಐ ಅಭ್ಯರ್ಥಿಗೆ 195 ಮತ ಲಭಿಸಿದೆ. ಕಳೆದ ಬಾರಿಗಿಂತ ಈ ಬಾರಿ 9 ಮತ ಕಡಿಮೆಯಾಗಿದೆ.

ಈ ಬಾರಿಯೂ ಜಿ.ಪಂ, ತಾ.ಪಂ ಮತ ಖೋತಾ: ಕಳೆದ ಪರಿಷತ್‌ ಚುನಾವಣೆಯಲ್ಲಿ ನಾಮನಿರ್ದೇಶಿತ 150 ಮಂದಿ ಸದಸ್ಯರ ಮತಗಳು ಪರಿಗಣನೆಯಾಗಿತ್ತು. ಈ ಬಾರಿ ಸ್ಥಳೀಯಾಡಳಿತಗಳಲ್ಲಿ ನಾಮನಿರ್ದೇಶಿತ ಸದಸ್ಯರು ಇದ್ದರೂ ಅವರಿಗೆ ಮತದಾನಕ್ಕೆ ಅವಕಾಶ ಇರಲಿಲ್ಲ.

ಬಿಜೆಪಿ ವಿಜಯೋತ್ಸವ ಮೆರವಣಿಗೆ: ಅಭ್ಯರ್ಥಿಯ ಗೆಲುವಿನ ಹುರುಪಿನಲ್ಲಿ ಬಿಜೆಪಿ ಬೆಂಬಲಿಗರು ಮತ ಎಣಿಕೆ ಕೇಂದ್ರದ ಹೊರಗೆ ತೆರೆದ ವಾಹನದಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಿದರು. ಕೊಡಿಯಾಲ್‌ಲಬೈಲ್‌ನ ಪಕ್ಷದ ಕಚೇರಿ ವರೆಗೆ ಮೆರವಣಿಗೆ ನಡೆಸಿ ಅಲ್ಲಿ ವೇದಿಕೆಯಲ್ಲಿ ವಿಜಯೋತ್ಸವ ಆಚರಿಸಿದರು.

ಪರಿಷತ್‌ ಚುನಾವಣೆಯಲ್ಲಿ ನನ್ನ ಗೆಲುವನ್ನು ಕಾರ್ಯಕರ್ತರಿಗೆ ಅರ್ಪಿಸುತ್ತೇನೆ. ಎರಡು ಜಿಲ್ಲೆಗಳ ಸಂಸದರು, ಬಿಜೆಪಿ ಶಾಸಕರು, ಸ್ಥಳೀಯಾಡಳಿತಗಳ ಬೆಂಬಲಿತರು, ಪಕ್ಷದ ಮುಖಂಡರು ತಂಡವಾಗಿ ಕೆಲಸ ಮಾಡಿದ ಕಾರಣ ನನ್ನ ಗೆಲುವು ಸಾಧ್ಯವಾಗಿದೆ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತ ಸ್ಪರ್ಧಿಸಿದರೂ ಗೆಲುವು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಂತಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರು, ಸಂಸದರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತೇನೆ.

- ಕಿಶೋರ್‌ ಕುಮಾರ್‌, ಎಂಎಲ್ಸಿ

ಫಲಿತಾಂಶ ಪೂರ್ಣ ವಿವರ

ಕಿಶೋರ್‌ ಕುಮಾರ್‌(ಬಿಜೆಪಿ)-3,655 ಮತ

ರಾಜು ಪೂಜಾರಿ(ಕಾಂಗ್ರೆಸ್‌)-1,958 ಮತ

ಅನ್ವರ್‌ ಸಾದತ್‌(ಎಸ್‌ಡಿಪಿಐ)- 195 ಮತ

ದಿನಕರ್‌ ಉಳ್ಳಾಲ್‌(ಪಕ್ಷೇತರ)- 9 ಮತ

ಕಿಶೋರ್‌ ಕುಮಾರ್‌ ಗೆಲುವಿನ ಅಂತರ-1,697 ಮತ

ಒಟ್ಟು ಚಲಾವಣೆಯಾದ ಮತ- 5,907

ಅಧಿಕೃತ ಮತ-5,817

ಅಸಿಂಧು ಮತ- 90