ಮೇಕೆದಾಟು ಯೋಜನೆ ವಿಚಾರ : ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌ ಜಟಾಪಟಿ

| N/A | Published : Jul 06 2025, 01:48 AM IST / Updated: Jul 06 2025, 07:17 AM IST

DK Suresh and HD Kumaraswamy

ಸಾರಾಂಶ

ಮೇಕೆದಾಟು ಯೋಜನೆ ವಿಚಾರವಾಗಿ ಅನುಮತಿಗಾಗಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ಜಟಾಪಟಿ ಏರ್ಪಟ್ಟಿದೆ.

 ಮೈಸೂರು :  ‘ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿ ಇದ್ದರೆ ತಮಿಳುನಾಡಿನ ತಮ್ಮ ಮೈತ್ರಿ ಪಕ್ಷವನ್ನು ಮೇಕೆದಾಟು ಯೋಜನೆಗೆ ಒಪ್ಪಿಸಲಿ. ನಾನು ಐದೇ ನಿಮಿಷದಲ್ಲಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಒಪ್ಪಿಗೆ ಕೊಡಿಸುತ್ತೇನೆ. ನನ್ನ ಹಳೆಯ ಮಾತಿಗೆ ನಾನು ಈಗಲೂ ಬದ್ಧ’ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್‌ನವರಿಗೆ ತಮಿಳುನಾಡಿನ ಡಿಎಂಕೆ ಸರ್ಕಾರವನ್ನು ಒಪ್ಪಿಸುವ ಶಕ್ತಿ ಇಲ್ಲ. ಅವರನ್ನು ಧಿಕ್ಕರಿಸುವ ಶಕ್ತಿಯೂ ಇಲ್ಲ. ತಮಿಳುನಾಡು ಸರ್ಕಾರದ ವಿರೋಧ ಧಿಕ್ಕರಿಸಿ ಮೇಕೆದಾಟು ಯೋಜನೆ ಮಾಡಿದರೆ ಅದು ಆಗುತ್ತದೆ. ಇಲ್ಲದಿದ್ದರೆ ಮೇಕೆದಾಟು ಯೋಜನೆ ಕಾಂಗ್ರೆಸ್ ಕೈಯಲ್ಲಿ ಸಾಧ್ಯವಿಲ್ಲ ಎಂದರು.

ತಮಿಳುನಾಡು ಸರ್ಕಾರವನ್ನು ಒಪ್ಪಿಸದೆ ಮೇಕೆದಾಟು ಯೋಜನೆಗೆ ಕಚೇರಿ ತೆರೆದರೆ ಏನು ಪ್ರಯೋಜನ? ಮೇಕೆದಾಟು ಯೋಜನೆ ಮಾಡುತ್ತೇವೆ ಎಂದು ಹೇಳಿದವರು ಕಾಂಗ್ರೆಸ್‌ನವರು, ನಾನಲ್ಲ. ಯೋಜನೆ ಮಾಡ್ತೇವೆ ಎಂದು ಹೇಳಿದವರು ಮಾಡಬೇಕು ತಾನೆ? ಎರಡೂವರೆ ವರ್ಷದಿಂದ ಸುಮ್ಮನೆ ಸಮಯ ಹಾಳು ಮಾಡುತ್ತಿದ್ದಾರೆ ಅಷ್ಟೆ. ಸುಮ್ಮನೆ ನನ್ನ ಮೇಲೆ ಜವಾಬ್ದಾರಿ ಹೊರಿಸಿದರೆ ನಾನು ಹೇಗೆ ಮಾಡಲು ಸಾಧ್ಯ ಎಂದು ಅವರು ಕಿಡಿಕಾರಿದರು.

ಹೊರಿಸಿದರೆ ಹೇಗೆ?

ಮೇಕೆದಾಟು ಯೋಜನೆ ಮಾಡುತ್ತೇವೆ ಎಂದು ಹೇಳಿದವರು ಕಾಂಗ್ರೆಸ್‌ನವರು, ನಾನಲ್ಲ. ಯೋಜನೆ ಮಾಡ್ತೇವೆ ಎಂದು ಹೇಳಿದವರು ಮಾಡಬೇಕು ತಾನೆ? ಸುಮ್ಮನೆ ನನ್ನ ಮೇಲೆ ಜವಾಬ್ದಾರಿ ಹೊರಿಸಿದರೆ ಹೇಗೆ?

- ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

ಗೆದ್ದರೆ ಹತ್ತೇ ನಿಮಿಷಗಳಲ್ಲಿ ಅನುಮತಿ ಕೊಡಿಸುತ್ತೇನೆ ಎಂದಿದ್ದು ಎಚ್‌ಡಿಕೆ: ಡಿಕೆಸು

 ಹೊಸಕೋಟೆ :   ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತಮ್ಮನ್ನು ಗೆಲ್ಲಿಸಿದರೆ ಹತ್ತೇ ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದ್ದವರು ಎಚ್‌.ಡಿ.ಕುಮಾರಸ್ವಾಮಿ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್‌ ತಿರುಗೇಟು ನೀಡಿದ್ದಾರೆ. 

ಎಚ್‌.ಡಿ.ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಮೇಕೆದಾಟು ರಾಜ್ಯದ ಅಭಿವೃದ್ಧಿಯ ವಿಷಯ. ಹೀಗಾಗಿ, ಈಗ ಮೇಕೆದಾಟು ಯೋಜನೆಗೆ ಕೇಂದ್ರದಿಂದ ಅನುಮತಿಯನ್ನು ಅವರೇ ಕೊಡಿಸಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರೂ ಆಗಿರುವ ಸುರೇಶ್‌ ಹೇಳಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೇಂದ್ರ ಸಚಿವ ಕುಮಾರಸ್ವಾಮಿಯವರ ಮೇಕೆದಾಟು ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿಯವರು ರಾಜ್ಯದಲ್ಲಿ ಈ ಹಿಂದೆ ಮುಖ್ಯಮಂತ್ರಿ ಆಗಿದ್ದವರು. ಕಳೆದ ಚುನಾವಣೆ ಸಂದರ್ಭದಲ್ಲಿ ನನ್ನನ್ನು ಗೆಲ್ಲಿಸಿದರೆ ಹತ್ತು ನಿಮಿಷದಲ್ಲಿ ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದವರು. 

ಈಗ ಅವರು ಗೆದ್ದು ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಈಗ ಮೇಕೆದಾಟು ಅಣೆಕಟ್ಟೆಗೆ ಕೇಂದ್ರದಿಂದ ಅನುಮತಿಯನ್ನು ಅವರೇ ಕೊಡಿಸಬೇಕು ಎಂದರು.

Read more Articles on