ಕಾಂಗ್ರೆಸ್‌ಗೆ ಶಾಕ್: ಏಕನಾಥ್ ಶಿಂಧೆ ಸೇನೆಗೆ ಸೇರಿದ ಮಿಲಿಂದ್‌ ದೇವ್ರಾ!

| Published : Jan 15 2024, 01:48 AM IST / Updated: Jan 15 2024, 11:16 AM IST

ಕಾಂಗ್ರೆಸ್‌ಗೆ ಶಾಕ್: ಏಕನಾಥ್ ಶಿಂಧೆ ಸೇನೆಗೆ ಸೇರಿದ ಮಿಲಿಂದ್‌ ದೇವ್ರಾ!
Share this Article
  • FB
  • TW
  • Linkdin
  • Email

ಸಾರಾಂಶ

ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಮಿಲಿಂದ್‌ ದೇವ್ರಾ ಭಾನುವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ.

ಮುಂಬೈ: ಭಾರತ್‌ ಜೋಡೊ ನ್ಯಾಯ ಯಾತ್ರೆ ಆರಂಭದ ದಿನವೇ ಕಾಂಗ್ರೆಸ್‌ಗೆ ಮಹಾರಾಷ್ಟ್ರದಲ್ಲಿ ದೊಡ್ಡ ಆಘಾತವಾಗಿದೆ. ಹಿಂದಿನ ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಮಿಲಿಂದ್‌ ದೇವ್ರಾ ಭಾನುವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. 

ಇದರೊಂದಿಗೆ ಕಾಂಗ್ರೆಸ್‌ ಜೊತೆಗಿನ ದೇವ್ರಾ ಕುಟುಂಬದ 55 ವರ್ಷಗಳ ನಂಟು ಕಡಿತವಾದಂತಾಗಿದೆ.ಈ ನಡುವೆ ಕಾಂಗ್ರೆಸ್‌ ಯಾತ್ರೆ ಸಂದರ್ಭದಲ್ಲೇ ನಡೆದ ಈ ಬೆಳವಣಿಗೆಯನ್ನು ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪ್ರಶ್ನೆ ಮಾಡಿವೆ. 

‘ಬಿಜೆಪಿಯಲ್ಲಿ ಸ್ವಂತ ಪ್ರತಿಭೆಗಳು ಇಲ್ಲವೇ?’ ಎಂದು ಎನ್‌ಸಿಪಿ ಪ್ರಶ್ನಿಸಿದ್ದರೆ, ‘ರಾಜೀನಾಮೆ ಸಮಯವನ್ನು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.ವಿದಾಯ:ಕಳೆದ ಐದೂವರೆ ದಶಕಗಳಿಂದ ಕಾಂಗ್ರೆಸ್‌ನ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ದೇವ್ರಾ ಕುಟುಂಬದ ಕುಡಿ ಮಿಲಿಂದ್ ದೇವ್ರಾ ಭಾನುವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು. 

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ನನ್ನ ರಾಜಕೀಯ ಜೀವನದ ಮಹತ್ವಪೂರ್ಣ ಅಧ್ಯಾಯಕ್ಕೆ ಇಂದು ತೆರೆ ಬೀಳುತ್ತಿದೆ. ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಈ ಮೂಲಕ ಪಕ್ಷದೊಂದಿಗಿನ ನಮ್ಮ ಕುಟುಂಬ 55 ವರ್ಷಗಳ ನಂಟಿಗೆ ತೆರೆ ಬಿದ್ದಿದೆ. 

ಇಷ್ಟು ವರ್ಷ ನಮ್ಮನ್ನು ಬೆಂಬಲಿಸಿದ ನಾಯಕರು, ಕಾರ್ಯಕರ್ತರಿಗೆ ಧನ್ಯವಾದಗಳು. ಇನ್ನು ಅಭಿವೃದ್ಧಿ ಪಥದತ್ತ ಸಾಗುವೆ’ ಎಂದು ತಿಳಿಸಿದ್ದಾರೆ. ಇದಾದ ಬಳಿಕ ಭಾನುವಾರ ಸಂಜೆ ಮುಂಬೈನಲ್ಲಿ ಏಕನಾಥ್‌ ಶಿಂಧೆ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಶಿಂಧೆ ಬಣದ ಶಿವಸೇನೆ ಸೇರ್ಪಡೆಯಾದರು.

ಕಾಂಗ್ರೆಸ್‌ ಬದಲಾಗಿದೆ- ಮಿಲಿಂದ್‌ ಕಿಡಿ: ಶಿವಸೇನೆ ಸೇರ್ಪಡೆಯಾದ ಬಳಿಕ ಮಾತನಾಡಿದ ಮಿಲಿಂದ್, ‘ಹಲವಾರು ಜನರು, 55 ವರ್ಷಗಳ ನಂಟು ಕಡಿದುಕೊಂಡಿದ್ದೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ನನ್ನ ಉತ್ತರ ಇಷ್ಟೇ. ಅತ್ಯಂತ ಸವಾಲಿನ ದಿನಗಳಲ್ಲಿ ಕೂಡಾ ನಾನು ಪಕ್ಷದ ಜೊತೆಗಿದ್ದೆ. ದುರದೃಷ್ಟವಶಾತ್‌, ಇಂದಿನ ಕಾಂಗ್ರೆಸ್‌ 1968 ಮತ್ತು 2004ರಕ್ಕಿಂತ ಪೂರ್ಣ ವಿಭಿನ್ನ. 

ಕಾಂಗ್ರೆಸ್‌ ಮತ್ತು ಶಿವಸೇನೆಯ ಉದ್ಧವ್‌ ಬಣಗಳು ನನ್ನ ಹಾಗೂ ಏಕನಾಥ್‌ ಶಿಂಧೆ ಅವರ ಹಿರಿಮೆ ಮತ್ತು ಸಾಮರ್ಥ್ಯದ ಕುರಿತ ರಚನಾತ್ಮಕ ಸಲಹೆಗಳಿಗೆ ಮನ್ನಣೆ ನೀಡಿದ್ದರೆ ನಾವು ಇಂದು ಇಲ್ಲಿ ಇರಬೇಕಾದ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಹೀಗಾಗಿ ನಾನು ಹಾಗೂ ಶಿಂಧೆ ಮಹತ್ವದ ತೀರ್ಮಾನ ಕೈಗೊಳ್ಳಬೇಕಾಗಿ ಬಂತು’ ಎಂದರು.

ಅಲ್ಲದೆ, ಕಾಂಗ್ರೆಸ್‌ನಲ್ಲಿ ಉದ್ಯಮಿಗಳ ವಿರುದ್ಧ ನಿಲುವು ತಾಳಲಾಗಿದೆ. ಉದ್ಯಮಿಗಳನ್ನು ದೇಶದ್ರೋಹಿ ಎಂದು ಕರೆದಿದೆ ಎಂದು ರಾಹುಲ್‌ ಗಾಂಧಿ ಹೆಸರೆತ್ತದೇ ವಾಗ್ದಾಳಿ ನಡೆಸಿದರು.

ರಾಜೀನಾಮೆ ಏಕೆ?:
ಮಿಲಿಂದ್‌ ದೇವ್ರಾ ಅವರ ತಂದೆ ಮುರಳಿ ದೇವೋರಾ ಹಲವು ಬಾರಿ ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರ ಬಳಿಕ ಮಿಲಿಂದ್‌ 2014, 2019ರಲ್ಲಿ ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. 

ಆಗ ಮಿಲಿಂದ್‌ರನ್ನು ಸೋಲಿಸಿದ್ದ ಅವಿಭಜಿತ ಶಿವಸೇನೆಯ ಅರವಿಂದ್‌ ಸಾವಂತ್‌ ಹಾಲಿ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಬಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಈ ಬಾರಿಯೂ ತಾನೇ ಸ್ಪರ್ಧಿಸುವುದಾಗಿ ಉದ್ಧವ್‌ ಬಣ ಈಗಾಗಲೇ ಘೋಷಿಸಿದೆ. ಇದನ್ನು ಮಹಾ ಅಘಾಡಿ ಮೈತ್ರಿಕೂಟದ ಭಾಗವಾದ ಕಾಂಗ್ರೆಸ್‌ ಕೂಡಾ ಪರೋಕ್ಷವಾಗಿ ಒಪ್ಪಿಕೊಂಡಿದೆ. 

ಹೀಗಾಗಿ ಈ ಬಾರಿ ಮಿಲಿಂದ್‌ಗೆ ಸ್ಪರ್ಧಿಸಲು ಕ್ಷೇತ್ರವಿರಲಿಲ್ಲ. ಈ ಬಗ್ಗೆ ಹಲವು ಬಾರಿ ರಾಹುಲ್‌ ಜೊತೆ ನೇರವಾಗಿ ಮಾತುಕತೆ ನಡೆಸಲು ಮುಂದಾಗಿದ್ದರೂ ಮಾತುಕತೆಗೆ ರಾಹುಲ್‌ ಮುಂದಾಗಿರಲಿಲ್ಲ. ಇದಕ್ಕೆ ಬೇಸತ್ತು ಮಿಲಿಂದ್‌ ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಮಿಲಿಂದ್‌ ನಡೆ ಬಗ್ಗೆ ಕಾಂಗ್ರೆಸ್‌ ಟೀಕೆ: ಮಿಲಿಂದ್‌ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌, ‘ಶುಕ್ರವಾರವಷ್ಟೇ ನನಗೆ ಮೊಬೈಲ್‌ ಸಂದೇಶ ಕಳುಹಿಸಿದ್ದ ಮಿಲಿಂದ್‌ ರಾಹುಲ್‌ ಜೊತೆ ಮಾತುಕತೆ ನಡೆಸಬೇಕು ಎಂಬ ಬೇಡಿಕೆ ಇಟ್ಟಿದ್ದರು. 

ಈ ವೇಳೆ ನಾನು ನೀವು ಪಕ್ಷ ಬಿಡಲು ಸಿದ್ದರಾಗಿದ್ದೀರಾ ಎಂದು ಪ್ರಶ್ನಿಸಿದ್ದೆ. ಅದಕ್ಕವರು ನಿಮ್ಮೊಂದಿಗೆ ಮಾತನಾಡಲು ಸಾಧ್ಯವೇ ಎಂದು ಮರು ಪ್ರಶ್ನೆ ಹಾಕಿದ್ದರು. ಅವರ ಕೋರಿಕೆಯಂತೆ ಶುಕ್ರವಾರ ಮಧ್ಯಾಹ್ನ ಮಾತುಕತೆ ಕೂಡಾ ನಡೆಸಿದ್ದೆ. 

ಈ ವೇಳೆ ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ಕುರಿತು ಅವರು ಕಳವಳ ಹೊಂದಿದ್ದು ಈ ಬಗ್ಗೆ ರಾಹುಲ್‌ ಜೊತೆ ಚರ್ಚಿಸುವ ಬಯಕೆ ವ್ಯಕ್ತಪಡಿಸಿದ್ದರು. ಆದರೆ ಇಂದು ನೋಡಿದರೆ ಅವರು ರಾಜೀನಾಮೆ ನೀಡಿದ್ದಾರೆ.

 ಇದನ್ನು ನೋಡಿದರೆ ನಿನ್ನೆಯ ಘಟನೆಗಳೆಲ್ಲಾ ಬರೀ ಸುಳ್ಳು. ಅವರು ಅದಾಗಲೇ ಪಕ್ಷಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದರು ಎಂಬುದನ್ನು ಖಚಿತಪಡಿಸುತ್ತದೆ. ಜೊತೆಗೆ ರಾಜೀನಾಮೆ ಸಮಯವನ್ನು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎಂಬುದು ಕೂಡಾ ಸ್ಪಷ್ಟವಾಗುತ್ತದೆ’ ಎಂದಿದ್ದಾರೆ.