ಲೋಕಸಭಾ ಕದನ: ಮಂಡ್ಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಸ್ಪರ್ಧೆ ಸಾಧ್ಯವೇ..?

| Published : Jan 15 2024, 01:48 AM IST / Updated: Jan 15 2024, 11:28 AM IST

ಲೋಕಸಭಾ ಕದನ: ಮಂಡ್ಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಸ್ಪರ್ಧೆ ಸಾಧ್ಯವೇ..?
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆಯ ವದಂತಿ, ರಾಮನಗರ ಜಿಲ್ಲೆ ಮೇಲಿನ ಹಿಡಿತ ಕೈತಪ್ಪುವ ಭೀತಿ, ಪುತ್ರನ ಸೋಲಿನಿಂದ ಮಂಡ್ಯ ಬಗ್ಗೆ ಭರವಸೆ ಇದ್ದಂತಿಲ್ಲ. 

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆಯ ವದಂತಿಯನ್ನು ಜೆಡಿಎಸ್‌ನ ಒಂದು ಗುಂಪು ವ್ಯವಸ್ಥಿತವಾಗಿ ಹಬ್ಬಿಸುತ್ತಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್ ಅವರ ಸೋಲಿನ ನಂತರವೂ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಮಂಡ್ಯದಿಂದ ಸ್ಪರ್ಧಿಸುವ ಹರಸಾಹಸಕ್ಕೆ ಮುಂದಾಗುವರೇ ಎನ್ನುವುದು ಪ್ರಶ್ನೆಯಾಗಿದೆ.

೨೦೧೯ರ ಲೋಕಸಭಾ ಚುನಾವಣೆ ವೇಳೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು, ಎಂಟು ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರೇ ಅಧಿಕಾರದಲ್ಲಿದ್ದರೂ ನಿಖಿಲ್‌ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಈಗ ಕಾಂಗ್ರೆಸ್ ಆಡಳಿತ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಇರುವುದರಿಂದ ಗೆಲುವು ಸುಲಭವೇ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ- ಜೆಡಿಎಸ್ ಮೈತ್ರಿಯ ಕಾರಣಕ್ಕಾಗಿ ಎರಡು ಪಕ್ಷಗಳ ಮತಗಳು ಕ್ರೋಢೀಕರಣವಾಗಿ ಗೆಲುವು ಸುಲಭವೆಂಬುದು ಮೇಲ್ನೋಟದ ವಿಶ್ಲೇಷಣೆಯಾದರೂ ವಾಸ್ತವವಾಗಿ ಕಳೆದ ಏಳು ತಿಂಗಳ ಹಿಂದೆಯಷ್ಟೇ ಬಿಜೆಪಿ- ಜೆಡಿಎಸ್ ನಡುವಿನ ಜಿದ್ದಾಜಿದ್ದಿ ಈ ಚುನಾವಣೆಯಲ್ಲಿ ಮರುಕಳಿಸದಿರಲು ಹೇಗೆ ಸಾಧ್ಯ?,

ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಸ್ಪರ್ಧಿಸಿದರೆ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಒಪ್ಪಲು ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ಬಿಜೆಪಿಯಿಂದ ಕಣಕ್ಕಿಳಿದರೂ ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ಬೆಂಬಲಿಸುವ ಸಾಧ್ಯತೆಗಳು ಕಡಿಮೆಯಿದ್ದು ಎರಡೂ ಪಕ್ಷಗಳಿಗೆ ಹೊಂದಾಣಿಕೆಯಾಗುವ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಈ ಎಲ್ಲ ಸೂಕ್ಷ್ಮ ಬೆಳವಣಿಗೆಗಳ ನಡುವೆ ಜೆಡಿಎಸ್‌ನಲ್ಲೇ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಮತ್ತು ಡಿ.ಸಿ.ತಮ್ಮಣ್ಣ ಚುನಾವಣೆಗೆ ಉತ್ಸುಕರಾದಂತೆ ಕಂಡುಬಂದಿದ್ದು, ಇಬ್ಬರಲ್ಲಿ ಒಬ್ಬರನ್ನು ಕಣಕ್ಕಿಳಿಸಬೇಕೆನ್ನುವುದು ಜೆಡಿಎಸ್‌ನ ಕೆಲವರ ವಾದವಾದರೆ ಮತ್ತೊಂದು ಗುಂಪು ಕುಮಾರಸ್ವಾಮಿ ಅವರನ್ನೇ ಕರೆತಂದು ಕಾಂಗ್ರೆಸ್ ವಿರುದ್ಧ ಸಮರ ಸಾರುವ ರಣೋತ್ಸಾಹದಲ್ಲಿದ್ದಂತಿದೆ.

ರಾಷ್ಟ್ರ ರಾಜಕಾರಣದ ಬಗ್ಗೆ ಒಲವಿಲ್ಲದಿದ್ದರೂ ಸದ್ಯದ ಸ್ಥಿತಿಯಲ್ಲಿ ಜೆಡಿಎಸ್ ದಯನೀಯ ಸ್ಥಿತಿಯಲ್ಲಿರುವ ಕಾರಣದಿಂದಾಗಿ ಕೇಂದ್ರ ಮಂತ್ರಿಯಾಗಿ ಪಕ್ಷವನ್ನು ಬಲಗೊಳಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆಂಬ ಮಾತುಗಳು ಒಂದೆಡೆಯಾದರೆ, ಕುಮಾರಸ್ವಾಮಿ ರಾಷ್ಟ್ರ ರಾಜಕಾರಣಕ್ಕೆ ಹೋದರೆ ರಾಜ್ಯದಲ್ಲಿ ಹಿಡಿತ ತಪ್ಪಲಿದೆ ಎಂಬ ವಾದಗಳೂ ಕೇಳಿಬರುತ್ತಿವೆ.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪುತ್ರನ ಸೋಲಿನಿಂದಾಗಿ ಮಂಡ್ಯದ ಬಗ್ಗೆ ಭರವಸೆ ಕಳೆದುಕೊಂಡಿರುವ ಕುಮಾರಸ್ವಾಮಿ ಅವರು ರಾಜಕೀಯವಾಗಿ ಅಪಾಯದಲ್ಲಿರುವ ಸಂದರ್ಭದಲ್ಲಿ ಮಂಡ್ಯದಿಂದ ಸ್ಪರ್ಧಿಸುವ ಪ್ರಯೋಗಕ್ಕೆ ಮುಂದಾಗುತ್ತಾರೆಯೇ ಎನ್ನುವುದು ಪ್ರಶ್ನೆಯಾಗಿದೆ.

ಪ್ರಮುಖವಾಗಿ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಪುತ್ರ ನಿಖಿಲ್‌ನನ್ನು ಗೆಲ್ಲಿಸಿಕೊಳ್ಳಲಾಗದೆ ರಾಮನಗರ ಜಿಲ್ಲೆಯಲ್ಲೇ ಇನ್ನೂ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಹೊತ್ತಿನಲ್ಲೇ ಆ ಕ್ಷೇತ್ರವನ್ನು ಬಿಟ್ಟು ಮಂಡ್ಯದ ಕಡೆಗೆ ಬರುವುದಕ್ಕೆ ಸಾಧ್ಯವಿದೆಯೇ?. ಹೀಗೆ ಮಾಡುವುದರಿಂದ ರಾಮನಗರ ಜಿಲ್ಲೆಯ ರಾಜಕೀಯ ಹಿಡಿತ ಕೈತಪ್ಪುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದುವರೆಗೂ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ, ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ ಕ್ಷೇತ್ರ ಸೇರಿದಂತೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವ ಖಚಿತತೆಯನ್ನು ವ್ಯಕ್ತಪಡಿಸಿಲ್ಲ. ಜೊತೆಗೆ ಜ.೧೬ರ ನಂತರ ಜೆಡಿಎಸ್-ಬಿಜೆಪಿ ವರಿಷ್ಠರು ಸೀಟು ಹಂಚಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. 

ಆದರೆ, ಮಂಡ್ಯದಲ್ಲಿ ಜೆಡಿಎಸ್‌ನ ಹಲವು ಮುಖಂಡರು ಕುಮಾರಸ್ವಾಮಿ ಅವರನ್ನು ಲೋಕಸಭಾ ಸದಸ್ಯರನ್ನಾಗಿಸುವ ಮೂಲಕ ಜಿಲ್ಲೆಯಲ್ಲಿ ರಾಜಕೀಯ ನೆಲೆ ಕಂಡುಕೊಳ್ಳುವ ಮತ್ತು ಕಾಂಗ್ರೆಸ್ ದರ್ಬಾರ್‌ಗೆ ನೀಡುವ ಉತ್ಸಾಹದಲ್ಲಿದ್ದಾರೆ. 

೮ ಸಾವಿರ ಕೋಟಿ ರು. ಅನುದಾನ ಜಿಲ್ಲೆಗೆ ಬರಲೇ ಇಲ್ಲ: ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಪುತ್ರ ನಿಖಿಲ್‌ಗೆ ಮಂಡ್ಯ ಕ್ಷೇತ್ರದಲ್ಲಿ ರಾಜಕೀಯ ನೆಲೆ ದೊರಕಿಸಲು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. 

ಆ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್‌ನಲ್ಲಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ೮ ಸಾವಿರ ಕೋಟಿ ರು. ಅನುದಾನ ಘೋಷಿಸಿ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದರು. 

ಚುನಾವಣೆಯಲ್ಲಿ ನಿಖಿಲ್ ಸೋಲಿನ ಬಳಿಕ ಹಲವು ತಿಂಗಳ ಕಾಲ ಸಮ್ಮಿಶ್ರ ಸರ್ಕಾರ ಜಾರಿಯಲ್ಲಿದ್ದರೂ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳು ಜಾರಿಗೆ ಬರಲೇ ಇಲ್ಲ. ಅನುದಾನ ತಡೆಹಿಡಿದರೆಂಬ ಆರೋಪಕ್ಕೆ ಎಚ್‌ಡಿಕೆ ಗುರಿಯಾಗಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.

೨೦೨೩ರ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ನವರು ಈ ಅಸ್ತ್ರವನ್ನು ಜೆಡಿಎಸ್ ವಿರುದ್ಧ ಪ್ರಯೋಗಿಸಿ ಯಶಸ್ವಿಯಾಗಿದ್ದರು. ಈ ಸಂಗತಿ ಜನಮಾನಸದಿಂದ ದೂರವಾಗದಿರುವ ಸಂದರ್ಭದಲ್ಲಿ ಮಂಡ್ಯ ಕಡೆ ಕುಮಾರಸ್ವಾಮಿ ಸ್ಪರ್ಧೆಗೆ ಒಲವು ತೋರುವರೇ ಎನ್ನುವುದು ಕುತೂಹಲ ಮೂಡಿಸಿದೆ.

ಇದಲ್ಲದೆ ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲೂ ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆಗಿಳಿಯುವರೆಂದೇ ನಂಬಲಾಗಿತ್ತು. ಚುನಾವಣೆ ಘೋಷಣೆಯಾದ ವೇಳೆ ಬ್ಯಾಂಕ್ ಖಾತೆಯನ್ನೂ ತೆರೆದಿದ್ದರು. 

ಅಂತಿಮ ಘಳಿಗೆಯಲ್ಲಿ ಮಂಡ್ಯ ಕ್ಷೇತ್ರ ಪ್ರವೇಶದಿಂದ ಹಿಂದಕ್ಕೆ ಸರಿದು ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರರಿಗೆ ಟಿಕೆಟ್ ನೀಡಿದ್ದನ್ನು ನೆನೆಯಬಹುದು.