ರಾಹುಲ್‌ ಯಾತ್ರೆ 2.0: ಮಣಿಪುರದಿಂದ ಭಾರತ್‌ ಜೋಡೋ ನ್ಯಾಯ್‌ ಆರಂಭ

| Published : Jan 15 2024, 01:46 AM IST / Updated: Jan 15 2024, 11:40 AM IST

ರಾಹುಲ್‌ ಯಾತ್ರೆ 2.0: ಮಣಿಪುರದಿಂದ ಭಾರತ್‌ ಜೋಡೋ ನ್ಯಾಯ್‌ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ್‌ ಜೋಡೋ ಯಾತ್ರೆ ರೀತಿಯ ಮತ್ತೊಂದು ಯಾತ್ರೆ ಭಾರತ್‌ ನ್ಯಾಯ್‌ ಜೋಡೋ ಯಾತ್ರೆ ಭಾನುವಾರ ಶುರುವಾಗಿದೆ. ಯಾತ್ರೆ ಮಣಿಪುರದಲ್ಲಿ ಆರಂಭವಾಗಿ ಮುಂಬೈನಲ್ಲಿ ಕೊನೆಗೊಳ್ಳುತ್ತದೆ.

ಥೌಬಾಲ್‌ (ಮಣಿಪುರ): ಲೋಕಸಭಾ ಚುನಾವಣೆಗೂ ಮುನ್ನ ಪಕ್ಷಕ್ಕೆ ಹೊಸ ಶಕ್ತಿ ತುಂಬುವ ನಿಟ್ಟಿನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿರುವ 66 ದಿನಗಳ ‘ಭಾರತ್‌ ಜೋಡೋ ನ್ಯಾಯ ಯಾತ್ರೆ’ಗೆ ಭಾನುವಾರ ಮಣಿಪುರದ ಥೌಬಾಲ್‌ನಲ್ಲಿ ಚಾಲನೆ ಸಿಕ್ಕಿದೆ. 

ಪಾದಯಾತ್ರೆ ಹಾಗೂ ಬಸ್‌ ಯಾತ್ರೆಯ ಮಿಶ್ರಣವಾಗಿರುವ ಈ ಯಾತ್ರೆಗೆ ರಾಹುಲ್‌ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಔಪಚಾರಿಕ ಚಾಲನೆ ನೀಡಿ, ಇಬ್ಬರೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ,

ರಾಜಧಾನಿ ಇಂಫಾಲ್‌ ಸಮೀಪದ ಥೌಬಾಲ್‌ನಲ್ಲಿ ಯಾತ್ರೆ ಆರಂಭಿಸಿ ಮಾತನಾಡಿದ ರಾಹುಲ್‌ ಗಾಂಧಿ, ‘ಕಳೆದ ಕೆಲ ಸಮಯದಿಂದ ರಾಜ್ಯದಲ್ಲಿ ನಡೆದ ಹಿಂಸಾಚಾರದ ಪರಿಣಾಮ ಲಕ್ಷಾಂತರ ಜನರು ಭಾರೀ ನಷ್ಟ ಅನುಭವಿಸಿದ್ದಾರೆ. 

ಆದರೆ ನಿಮ್ಮ ನಿಮ್ಮ ಕಣ್ಣೀರು ಒರೆಸಲು, ನಿಮ್ಮ ಕೈಹಿಡಿದು ಸಂತೈಸಲು ಮತ್ತು ನಿಮ್ಮನ್ನು ಆಲಿಗಿಸಿ ಧೈರ್ಯ ಹೇಳಲು ಪ್ರಧಾನಿ ಇಲ್ಲಿಗೆ ಬಂದಿಲ್ಲ. ಬಹುಶಃ ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪಾಲಿಗೆ ಮಣಿಪುರ ಭಾರತದ ಭಾಗ ಅಲ್ಲದೇ ಇರಬಹುದು, ನಿಮ್ಮ ನೋವು ಅವರ ನೋವು ಆಗಿಲ್ಲದಿರಬಹುದು’ ಎಂದು ಟೀಕಿಸಿದರು.

ಜೊತೆಗೆ, ‘ಮಣಿಪುರದ ಜನತೆ ಅನುಭವಿಸಿರುವ ನೋವು, ನೀವು ಅನುಭವಿಸಿರುವ ಸಂಕಷ್ಟ ಮತ್ತು ದುಃಖವನ್ನು ನಾವು ಅರ್ಥ ಮಾಡಿಕೊಳ್ಳಬಲ್ಲೆವು. ಯಾವ ಶಾಂತಿ, ಸೌಹಾರ್ದತೆ ಮತ್ತು ಪ್ರೀತಿಗಾಗಿ ಈ ರಾಜ್ಯವನ್ನು ಗುರುತಿಸಲಾಗುತ್ತಿತ್ತೋ ಅದನ್ನು ನಾವು ಈ ರಾಜ್ಯಕ್ಕೆ ಮರಳಿಸುತ್ತೇವೆ’ ಎಂದು ನೆರೆದ ಮಣಿಪುರ ಜನತೆಗೆ ಇದೇ ವೇಳೆ ರಾಹುಲ್‌ ಭರವಸೆ ನೀಡಿದರು.

ಖರ್ಗೆ ಕಿಡಿ: ಇದಕ್ಕೂ ಮೊದಲು ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಪ್ರಧಾನಿಗಳು ಇಲ್ಲಿಗೆ ಕೇವಲ ಮತ ಕೇಳಲು ಮಾತ್ರ ಬರುತ್ತಾರೆಯೇ ಹೊರತು ಇಲ್ಲಿಯ ಜನ ನೋವು ಆಲಿಸಲು ಅಲ್ಲ. ಮೋದಿಗೆ ಸಮುದ್ರದಲ್ಲಿ ಸಂಚರಿಸಲು, ಸಮುದ್ರದಲ್ಲಿ ಮುಳುಗು ಹಾಕಲು ಸಮಯವಿದೆ. ಆದರೆ ಮಣಿಪುರಕ್ಕೆ ಬರಲು ಸಮಯವಿಲ್ಲ’ ಎಂದು ಕಿಡಿಕಾರಿದರು.

ಜೊತೆಗೆ, ‘ಸಮುದ್ರದ ದಂಡೆಯಲ್ಲಿ ಕುಳಿತು ಅವರು (ಮೋದಿ) ರಾಮ್‌ ರಾಮ್‌ ಎಂದು ಜಪ ಮಾಡುತ್ತಲೇ ಇರುತ್ತಾರೆ. ಆದರೆ ಜನರ ಬೆನ್ನಿಗೆ ಚೂರಿ ಹಾಕುತ್ತಾರೆ. ‘ಮೂಹ್‌ ಮೇ ರಾಮ್‌. ಬಗಲ್‌ ಮೇ ಚೂರಿ’ ಎಂದು ಹರಿಹಾಯ್ದರು.

ರಾಮಸ್ಮರಣೆಯನ್ನು ಮತ ಕೇಳವುದಕ್ಕೋಸ್ಕರ ಮಾಡಬಾರದು. ಬಿಜೆಪಿ ಧರ್ಮ ಮತ್ತು ರಾಜಕೀಯವನ್ನು ಬೆರೆಸುವ ಮೂಲಕ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತದೆ’ ಎಂದು ಕಿಡಿಕಾರಿದರು.

ಅಲ್ಲದೆ, ‘ಕಾಂಗ್ರೆಸ್‌ ಎಂದೆಂದಿಗೂ ಸಾಮಾಜಿಕ ನ್ಯಾಯ, ಜಾತ್ಯತೀತ ಮತ್ತು ಸಮಾನತೆ ಪರವಾಗಿದೆ. ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ನ್ಯಾಯ್‌ ಯಾತ್ರೆಯನ್ನು ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವ ಸಲುವಾಗಿ ಹಾಗೂ ಬಲಪಂಥೀಯ ಶಕ್ತಿಗಳ ವಿರುದ್ಧದ ಹೋರಾಟಕ್ಕೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಈ ವೇಳೆ ದೇಶದ ಪ್ರಮುಖ ಕಾಂಗ್ರೆಸ್‌ ನಾಯಕರು ಹಾಜರಿದ್ದರು.

ಮೋದಿ ದೃಷ್ಟಿಯಲ್ಲಿ ಮಣಿಪುರ ಭಾರತದ್ದಲ್ಲ: ಮಣಿಪುರ ಹಿಂಸಾಚಾರದಿಂದ ಲಕ್ಷಾಂತರ ಜನರು ನಷ್ಟ ಅನುಭವಿಸಿದ್ದಾರೆ. ಅವರ ಕಣ್ಣೀರು ಒರೆಸಲು, ಕೈ ಹಿಡಿದು ಸಂತೈಸಲು, ಆಲಿಂಗಿಸಿ ಧೈರ್ಯ ಹೇಳಲು ಪ್ರಧಾನಿ ಇಲ್ಲಿಗೆ ಬಂದಿಲ್ಲ. ಬಹುಶಃ ಮೋದಿ, ಬಿಜೆಪಿ, ಆರೆಸ್ಸೆಸ್‌ ಪಾಲಿಗೆ ಮಣಿಪುರ ಭಾರತದ ಭಾಗ ಅಲ್ಲದೇ ಇರಬಹುದು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದರು.

ಮೋದಿ ಬರೋದು ಮತಕ್ಕಾಗಿ ಮಾತ್ರ: ಪ್ರಧಾನಿ ಮೋದಿಗೆ ಸಮುದ್ರದಲ್ಲಿ ಸಂಚರಿಸಲು, ಸಮುದ್ರದಲ್ಲಿ ಮುಳುಗು ಹಾಕಲು ಸಮಯವಿದೆ. ಆದರೆ ಮಣಿಪುರಕ್ಕೆ ಬರಲು ಸಮಯವಿಲ್ಲ. ಅವರು ಮತ ಕೇಳಲು ಬರುತ್ತಾರೆಯೇ ಹೊರತು ಜನರ ನೋವು ಆಲಿಸಲು ಅಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು.

ಯಾತ್ರೆ ವಿಳಂಬ: ಭಾರತ್‌ ಜೋಡೋ ನ್ಯಾಯ ಯಾತ್ರೆ ಆರಂಭವು ವಿಳಂಬವಾಗಿ ಆರಂಭವಾಯಿತು. ದಿಲ್ಲಿಯ ವಿಷಮ ಹವಾಮಾನ ಕಾರಣ ದಿಲ್ಲಿಯಿಂದ ರಾಹುಲ್, ಖರ್ಗೆ ಹಾಗೂ ಕಾಂಗ್ರೆಸ್‌ ನಾಯಕರ ವಿಮಾನ ವಿಳಂಬವಾಗಿ ಹಾರಿತು. ಹೀಗಾಗಿ ಯಾತ್ರಾರಂಭ ತಡವಾಯಿತು.

ಹೀಗಿರಲಿದೆ ಯಾತ್ರೆ: ಈ ಹಿಂದೆ ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಶ್ರೀನಗರದವರೆಗೆ ಭಾರತ್‌ ಜೋಡೋ ಯಾತ್ರೆ ಕೈಗೊಂಡಿದ್ದ ರಾಹುಲ್‌ ಇದೀಗ ದೇಶದ ಪೂರ್ವ ಭಾಗದಿಂದ ಪಶ್ಚಿಮದ ಕಡೆಗೆ ಯಾತ್ರೆ ಹೊರಟಿದ್ದಾರೆ. 

ಆದರೆ ದುರ್ಗಮ ಪ್ರದೇಶಗಳ ಇರುವ ಕಾರಣ ಇದು ಪಾದಯಾತ್ರೆ ಮತ್ತು ಬಸ್‌ ಯಾತ್ರೆ ಎರಡನ್ನೂ ಒಳಗೊಂಡಿರಲಿದೆ.67 ದಿನಗಳ ಅವಧಿಯಲ್ಲಿ 110 ಜಿಲ್ಲೆಗಳ, 337 ವಿಧಾನಸಭಾ ಕ್ಷೇತ್ರ, 100 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ 6713 ಕಿ.ಮೀ ವ್ಯಾಪ್ತಿ ಕ್ರಮಿಸಿ ಮಾ.20ಕ್ಕೆ ಮುಂಬೈನಲ್ಲಿ ಅಂತ್ಯಗೊಳ್ಳಲಿದೆ.

ರಾಹುಲ್‌ ಮತ್ತೊಬ್ಬ ಆಪ್ತ ಕಾಂಗ್ರೆಸ್‌ ಪಕ್ಷಕ್ಕೆ ಗುಡ್‌ಬೈ:  ದೇವೋರಾ ಶಿಂಧೆ ಪಕ್ಷಕ್ಕೆ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಕೇಂದ್ರದ ಮಾಜಿ ಸಚಿವ ಮಿಲಿಂದ್‌ ದೇವ್ರಾ ಭಾನುವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ರಾಹುಲ್‌ ಆಪ್ತ ಬಳಗದ ಮತ್ತೊಬ್ಬ ನಾಯಕ ಕಾಂಗ್ರೆಸ್‌ ತೊರೆದಂತಾಗಿದೆ.