ಅಮಿತ್‌ ಶಾ ಬಳಿ 3 ಕಷ್ಟದ ಕ್ಷೇತ್ರ ಕೇಳಿದ ವಿ ಸೋಮಣ್ಣ!

| Published : Jan 14 2024, 01:35 AM IST / Updated: Jan 14 2024, 11:27 AM IST

Somanna_Amith Shah

ಸಾರಾಂಶ

ವಿಧಾನಸಭೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ಮಾಜಿ ಸಚಿವ ವಿ. ಸೋಮಣ್ಣ ಶನಿವಾರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ರಾಜ್ಯಸಭೆಗೆ ಕಳಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಆದೇಶಕ್ಕೆ ತಲೆಬಾಗಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದರೂ ಸ್ವಪಕ್ಷೀಯರಿಂದಲೇ ಸೋಲು ಅನುಭವಿಸಬೇಕಾಯಿತು ಎಂದು ವರಿಷ್ಠರಿಗೆ ದೂರು ನೀಡಿರುವ ಮಾಜಿ ಸಚಿವ ವಿ.ಸೋಮಣ್ಣ ಅವರು ಅದಕ್ಕೆ ಪ್ರತಿಯಾಗಿ ತಮಗೆ ರಾಜ್ಯಸಭಾ ಸದಸ್ಯ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಅಲ್ಲದೆ, ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಪಕ್ಷ ಗೆಲ್ಲಲು ಕಷ್ಟವಾಗಬಹುದು ಎನ್ನುವಂಥ ಮೂರು ಕ್ಷೇತ್ರಗಳ ಉಸ್ತುವಾರಿಯನ್ನು ತಮಗೆ ವಹಿಸಿ ಎಂದೂ ಅವರು ವರಿಷ್ಠರಿಗೆ ಮನವಿ ಮಾಡಿದ್ದಾರೆ.

‘ಯಾವುದೇ ಕಾರಣಕ್ಕೂ ನಿಮ್ಮನ್ನು ಬಿಟ್ಟು ಕೊಡುವುದಿಲ್ಲ. ಪಕ್ಷಕ್ಕೆ ನಿಮ್ಮ ಅಗತ್ಯವಿದೆ. ಏನೇ ಇದ್ದರೂ ನಾನೇ ಶೀಘ್ರ ರಾಜ್ಯಕ್ಕೆ ಬಂದು ಸಮಸ್ಯೆ ಬಗೆಹರಿಸುವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮಣ್ಣ ಅವರಿಗೆ ಭರವಸೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಅಸಮಾಧಾನಗೊಂಡು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ಸೋಮಣ್ಣ ಅವರು ಶನಿವಾರ ದೆಹಲಿಯಲ್ಲಿ ಕೇಂದ್ರ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಗಳಿಸಲು ಪಕ್ಷ ಸಂಘಟನೆ ಮತ್ತು ಕಾರ್ಯತಂತ್ರ ಕುರಿತು ಚರ್ಚಿಸಿದ ಸೋಮಣ್ಣ ಅವರು ಪಕ್ಷದಲ್ಲಿ ಎಲ್ಲರೂ ಸಂಘಟನೆಯಾಗಿ ಹೋಗಬೇಕು ಮತ್ತು ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಆಂತರಿಕ ಬಿಕ್ಕಟ್ಟಿನಿಂದ ಪಕ್ಷದ ಸೋಲುವಂತಾಯಿತು ಎಂಬುದನ್ನು ವಿವರಿಸಿದರು.ನನ್ನ ಸೋಲಿಗೆ ಸ್ವಪಕ್ಷೀಯರೇ ಕಾರಣ. 

ಆದರೆ ಆ ಸೋಲಿಗೆ ಕಾರಣರಾದವರ ವಿರುದ್ಧ ಇದುವರೆಗೆ ಯಾವುದೇ ಕ್ರಮ ಆಗಿಲ್ಲ ಎಂದು ರಾಷ್ಟ್ರೀಯ ನಾಯಕರ ಬಳಿ ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.ರಾಜ್ಯದಲ್ಲಿ ಮತದಾರರು ಬಿಜೆಪಿ ಪರ ಒಲವು ಹೊಂದಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಹೋದರೆ ಪಕ್ಷಕ್ಕೆ ಲಾಭ ಖಚಿತ. 

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಅಗತ್ಯವಿದೆ ಎನ್ನುವುದನ್ನು ಹೇಳಿದರು ಎನ್ನಲಾಗಿದೆ.ಪ್ರಧಾನಿ ನರೇಂದ್ರ ಮೋದಿ ನಾಯಕತ್ವ, ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆ, ಮನೆ ತಲುಪಿಸುವ ಕಾರ್ಯ ಭರದಿಂದ ಸಾಗಬೇಕು. ಇದರ ಕಾರ್ಯಕ್ಷಮತೆ ಕುರಿತು ಪರಿಶೀಲನಾ ಸಮಿತಿ ರಚಿಸಬೇಕು ಎಂಬ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ ಅವರು, ಅಮಿತ್ ಶಾ ಮತ್ತು ನಡ್ಡಾ ಅವರನ್ನು ಭೇಟಿ ಮಾಡಿದ್ದೇನೆ. ಮಾತುಕತೆ ತುಂಬಾ ಚೆನ್ನಾಗಿ ನಡೆದಿದೆ. ನಾನು ಮುಖ್ಯವಾಹಿನಿಯಲ್ಲಿ ಇರಬೇಕು ಎಂಬ ಮಾತನ್ನು ವರಿಷ್ಠರು ಹೇಳಿದ್ದಾರೆ ಎಂದರು.

ಇದೇ ವೇಳೆ ನನಗೆ ರಾಜ್ಯಸಭೆ ಪ್ರವೇಶ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿದ್ದೇನೆ. ಅಲ್ಲದೆ, ರಾಜ್ಯದ ಯಾವುದಾದರೂ ಕಷ್ಟ ಎನ್ನುವಂಥ ಮೂರು ಲೋಕಸಭಾ ಕ್ಷೇತ್ರಗಳ ಜವಾಬ್ದಾರಿ ಕೊಡಿ. ಕೆಲಸ ಮಾಡಿ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.

ವರಿಷ್ಠರೊಂದಿಗೆ ನಾನು ಕೆಲವೊಂದು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಎಲ್ಲ ಮಾತುಕತೆಯ ಬಗ್ಗೆ ನಾನು ಈಗ ಬಹಿರಂಗವಾಗಿ ಹೇಳಲು ಆಗಲ್ಲ. ಅಮಿತ್ ಶಾ ಅವರ ಭೇಟಿ ಬಹಳ ಸಮಾಧಾನ ತಂದಿದೆ. 

ನಿಮ್ಮ ಸೇವೆಯನ್ನು ಬಳಸಿಕೊಳ್ಳುವುದಾಗಿ ವರಿಷ್ಠರು ಹೇಳಿದ್ದಾರೆ ಎಂದು ತಿಳಿಸಿದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸೋಮಣ್ಣ ಅವರು, ಲೋಕಸಭಾ ಚುನಾವಣೆ ಸ್ಪರ್ಧೆಯ ಬಗ್ಗೆ ಹೈಕಮಾಂಡ್ ತೀರ್ಮಾನದಂತೆ ನಡೆಯುವೆ ಎಂದರು.

ಗೊಂದಲ ಬಗೆಹರಿಸಲು ಅಮಿತ್‌ ಶಾ ಶೀಘ್ರ ರಾಜ್ಯಕ್ಕೆ? 
ಶೀಘ್ರದಲ್ಲೇ ರಾಜ್ಯಕ್ಕೆ ಭೇಟಿ ನೀಡಿ ರಾಜ್ಯ ಬಿಜೆಪಿಯ ಸಣ್ಣಪುಟ್ಟ ಗೊಂದಲಗಳು ಹಾಗೂ ಸಮಸ್ಯೆಯನ್ನು ಬಗೆಹರಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಾಜಿ ಸಚಿವ ಸೋಮಣ್ಣಗೆ ತಿಳಿಸಿದ್ದಾರೆ ಎನ್ನಲಾಗಿದೆ.