ಮಂಡ್ಯ ಲೋಕಸಭೆ: ವೈತ್ರಿಯಿಂದ ಯಾರೇ ಸ್ಪರ್ಧೆ ಮಾಡಿದ್ರೂ ಅವರ ಗೆಲುವಿಗೆ ಶ್ರಮ: ಡಿ.ಸಿ.ತಮ್ಮಣ್ಣ

| Published : Jan 14 2024, 01:33 AM IST / Updated: Jan 15 2024, 11:40 AM IST

ಮಂಡ್ಯ ಲೋಕಸಭೆ: ವೈತ್ರಿಯಿಂದ ಯಾರೇ ಸ್ಪರ್ಧೆ ಮಾಡಿದ್ರೂ ಅವರ ಗೆಲುವಿಗೆ ಶ್ರಮ: ಡಿ.ಸಿ.ತಮ್ಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ. ಮುಂದಿನ ವಾರ ಜೆಡಿಎಸ್ ಮಾಜಿ ಶಾಸಕರ ಸಭೆ ಕರೆಯುವಂತೆ ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಲಾಗಿದೆ. ಸಭೆಯಲ್ಲಿ ಎಚ್.ಡಿ.ದೇವೇಗೌಡ ಕುಟುಂಬದವರ ಸ್ಪರ್ಧೆಗೆ ನಮ್ಮ ಮೊದಲ ಹಕ್ಕೊತ್ತಾಯವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಅಥವಾ ಸಂಸದೆ ಸುಮಲತಾ ಸೇರಿದಂತೆ ಯಾರೇ ಸ್ಪರ್ಧೆ ಮಾಡಿದರೂ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಶನಿವಾರ ಹೇಳಿದರು.

ಪಟ್ಟಣದ ಲೀಲಾವತಿ ಬಡಾವಣೆಯ ತಮ್ಮ ನಿವಾಸದಲ್ಲಿ ಪಿ.ಕಾರ್ಡ್ ಬ್ಯಾಂಕ್‌ನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಕೃಷ್ಣಪ್ಪ ಅವರನ್ನು ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ. ಮಂಡ್ಯ ಕ್ಷೇತ್ರದಿಂದ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಎರಡು ಪಕ್ಷಗಳ ವರಿಷ್ಠರು ಚರ್ಚಿಸಿ ಅಭ್ಯರ್ಥಿ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಮಂಡ್ಯ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ ನಾವು ಸ್ವಾಗತಿಸುತ್ತೇವೆ. ಒಂದು ವೇಳೆ ಬಿಜೆಪಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟು ಸುಮಲತಾ ಅವರನ್ನು ಕಣಕ್ಕಿಳಿಸಿದರೆ ಅವರ ಗೆಲುವಿಗೂ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.

ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಲು ನಾನು ಸೇರಿದಂತೆ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಒಳಗೊಂಡಂತೆ ಹಲವರ ಹೆಸರು ಮುಂಚೂಣಿಯಲ್ಲಿವೆ. ಆದರೆ, ಸ್ಪರ್ಧೆ ಬಗ್ಗೆ ಇನ್ನೂ ಅಂತ್ಯ ನಿರ್ಧಾರವಾಗಿಲ್ಲ ಎಂದರು.

ಮುಂದಿನ ವಾರದಲ್ಲಿ ಜೆಡಿಎಸ್ ಪಕ್ಷದ ಶಾಸಕರು ಮಾಜಿ ಶಾಸಕರ ಸಭೆ ಕರೆಯುವಂತೆ ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಲಾಗಿದೆ. ಸಭೆಯಲ್ಲಿ ಎಚ್.ಡಿ.ದೇವೇಗೌಡ ಕುಟುಂಬದವರ ಸ್ಪರ್ಧೆಗೆ ನಮ್ಮ ಮೊದಲ ಹಕ್ಕೊತ್ತಾಯವಾಗಿದೆ ಎಂದರು.

ರಾಜಕಾರಣದಲ್ಲಿ ಯಾರು ಶತ್ರುಗಳು ಮಿತ್ರರಲ್ಲ. ಪರಿಸ್ಥಿತಿ ತಕ್ಕಂತೆ ರಾಜಕಾರಣ ಬದಲಾಗುತ್ತದೆ. ಆದರೆ, ಈ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆಯಾದರೆ ನಾಡು ಮತ್ತು ದೇಶದ ಅಭಿವೃದ್ಧಿಗೆ ದೃಷ್ಟಿಯಿಂದ ನಾವು ಬದಲಾಗುವುದು ಅನಿವಾರ್ಯವಾಗಿದೆ ಎಂದರು.

ಇದೇ ವೇಳೆ ಬಿದರಹಳ್ಳಿ ಬಿ.ಎಸ್.ಮಧು, ಮಡೇನಹಳ್ಳಿ ಸಿದ್ದರಾಮ, ಕುದರಗುಂಡಿ ಸಿದ್ದೇಗೌಡ, ಮಾದಾಪುರ ದೊಡ್ಡಿಯ ಕೃಷ್ಣಪ್ಪ, ಕದಲೂರು ಎನ್.ಸವಿತಾ ಅವರುಗಳು ಕಾಂಗ್ರೆಸ್ ತೊರೆದು ಮಾಜಿ ಸಚಿವ ಡಿಸಿ ತಮ್ಮಣ್ಣ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.

ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸಿ.ಎನ್.ಕೆಂಪೇಗೌಡ, ಮಾಜಿ ಅಧ್ಯಕ್ಷ ಸಿದ್ದಮರಿ, ಮುತ್ತುರಾಜ, ಈರೇಗೌಡ, ಮುಖಂಡರಾದ ಕೆ.ಟಿ.ಶೇಖರ್, ಮಾರಸಿಂಗನಹಳ್ಳಿ ಶಿವನಂಜಪ್ಪ, ಕೃಷ್ಣೇಗೌಡ, ಚಂದ್ರಹಾಸ ಮತ್ತಿತರರು ಇದ್ದರು.