ಸಾರಾಂಶ
ಮಿಲಿಂದ್ ದೇವ್ರಾ ರಾಜೀನಾಮೆಯೊಂದಿಗೆ ಕಳೆದ ಕೆಲ ವರ್ಷಗಳಲ್ಲಿ ಕಾಂಗ್ರೆಸ್‌ನಿಂದ ಇತರೆ ಪಕ್ಷಗಳಿಗೆ ವಲಸೆ ಹೊರಟ ನಾಯಕರ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾದಂತೆ ಆಗಿದೆ. ಈ ಹಿಂದೆ ಜ್ಯೋತಿರಾದಿತ್ಯ ಸಿಂಧಿಯಾ, ಆರ್‌ಪಿಎನ್ ಸಿಂಗ್, ಜಿತಿನ್ ಪ್ರಸಾದರಂತ ಯುವ ನಾಯಕರು ಕಾಂಗ್ರೆಸ್ ತೊರೆದಿದ್ದರು.
ನವದೆಹಲಿ: ಮಿಲಿಂದ್ ದೇವ್ರಾ ರಾಜೀನಾಮೆಯೊಂದಿಗೆ ಕಳೆದ ಕೆಲ ವರ್ಷಗಳಲ್ಲಿ ಕಾಂಗ್ರೆಸ್‌ನಿಂದ ಇತರೆ ಪಕ್ಷಗಳಿಗೆ ವಲಸೆ ಹೊರಟ ನಾಯಕರ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾದಂತೆ ಆಗಿದೆ. ಈ ಹಿಂದೆ ಜ್ಯೋತಿರಾದಿತ್ಯ ಸಿಂಧಿಯಾ, ಆರ್‌ಪಿಎನ್ ಸಿಂಗ್, ಜಿತಿನ್ ಪ್ರಸಾದರಂತ ಯುವ ನಾಯಕರು ಕಾಂಗ್ರೆಸ್ ತೊರೆದಿದ್ದರು.
ಈಗ ಈ ಸಾಲಿಗೆ ದೇವ್ರಾ ಸೇರಿಕೊಂಡಿದ್ದಾರೆ.ಇದು ಯುವ ನಾಯಕರ ಕಳವಳ ಪರಿಹರಿಸುವಲ್ಲಿ ಪಕ್ಷದ ಹೈಕಮಾಂಡ್‌ನ ನಿರ್ಲಕ್ಷತೆ ಮತ್ತು ಒಂದೊಮ್ಮೆ ತಮ್ಮದೇ ಆಪ್ತರಾಗಿದ್ದ ನಾಯಕರ ಜೊತೆಗೆ ರಾಹುಲ್ ಗಾಂಧಿ ಸಂಪರ್ಕವೇ ಕಡಿತದ ಸುಳಿವು.
ಜೊತೆಗೆ ಸತತವಾಗಿ ಹೀಗೆ ಯುವ ನಾಯಕರ ವಲಸೆಯು, ಪಕ್ಷದ ಕುಸಿಯುತ್ತಿರುವ ಜನಪ್ರಿಯತೆ ಸಂಕೇತವೂ ಹೌದು ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.ಬಿಟ್ಟು ಹೋಗುವವರ ಪಟ್ಟಿಯಲ್ಲಿ ರಾಜಸ್ಥಾನದ ಮತ್ತೋರ್ವ ಯುವ ನಾಯಕ ಸಚಿನ್ ಪೈಲಟ್ ಹೆಸರು ಹಲವು ಬಾರಿ ಕೇಳಿಬಂದಿತ್ತಾದರೂ, ಅವರಿನ್ನೂ ಪಕ್ಷದಲ್ಲಿಯೇ ಉಳಿದುಕೊಂಡು ಅಶೋಕ್ ಗೆಹ್ಲೋಟ್ ಜೊತೆ ಗುದ್ದಾಟ ಮುಂದುವರೆಸಿದ್ದಾರೆ.
ಸರಣಿ ರಾಜೀನಾಮೆ: ಹಾಲಿ ಕೇಂದ್ರ ವಿಮಾನಯಾನ ಖಾತೆ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಕುಟುಂಬ ಕಾಲ ದಶಕಗಳ ಕಾಲ ಗಾಂಧೀ ಕುಟುಂಬಕ್ಕೆ ಆಪ್ತವಾಗಿತ್ತು. ಸ್ವತಃ ಜ್ಯೋತಿರಾಧಿತ್ಯ ರಾಹುಲ್ ಆಪ್ತ ವಲಯದಲ್ಲಿದ್ದವರು.
ಆದರೆ ಮಧ್ಯಪ್ರದೇಶದಲ್ಲಿ ಅವರದ್ದೇ ಪಕ್ಷದ ಮತ್ತೋರ್ವ ನಾಯಕ ಕಮಲ್‌ನಾಥ್‌ರ ಕಿರುಕುಳ ತಾಳಲಾಗದೇ 2020ರಲ್ಲಿ ಬಿಜೆಪಿ ಸೇರಿ ಕೇಂದ್ರ ಸಚಿವರಾದರು.ಹಿಂದಿನ ಯುಪಿಎ ಯ ಸರ್ಕಾರದಲ್ಲಿ ಸಚಿವರಾಗಿದ್ದ ಜಿತಿನ್ ಪ್ರಸಾದ್, ‘ಕಾಂಗ್ರೆಸ್ ಜನರೊಂದಿಗಿನ ನಂಟು ಕಳೆದುಕೊಳ್ಳುತ್ತಿದೆ’ ಎಂಬ ಕಾರಣ ನೀಡಿ 2021ರಲ್ಲಿ ಪಕ್ಷ ತೊರೆದು ಬಿಜೆಪಿ ಸೇರಿದರು.
ಇದಕ್ಕೂ ಮೊದಲು ಪ್ರಿಯಾಂಕಾ ಚತುರ್ವೇದಿ ಕಾಂಗ್ರೆಸ್ ತೊರೆದು ಶಿವಸೇನೆ ಸೇರಿದರೆ, ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆಯಾಗಿದ್ದ ಸುಷ್ಮಿತಾ ದೇವ್ ಪಕ್ಷ ತೊರೆದು ಟಿಎಂಸಿ ಸೇರಿದರು. ಇನ್ನೋರ್ವ ಕೇಂದ್ರದ ಮಾಜಿ ಸಚಿವ ಆರ್‌ಪಿಎನ್ ಸಿಂಗ್, ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುನಿಲ್ ಜಾಖಡ್, ಪಕ್ಷದ ವಕ್ತಾರ ಜೈವೀರ್ ಶೇರ್ಗಿಲ್ ಕೂಡಾ ಪಕ್ಷ ತೊರೆದು ಬಿಜೆಪಿ ಸೇರಿದರು.
ಅದಕ್ಕೀಗ ದೇವೋರಾ ಸೇರ್ಪಡೆಯಾಗಿದ್ದಾರೆ.ಹೀಗೆ ಪಕ್ಷದ ವಲಸೆ ಆರಂಭವಾಗಿದ್ದು 2014ರ ಲೋಕಸಭಾ ಚುನಾವಣೆ ಹೊತ್ತಲ್ಲಿ. ಆಗ ಕಾಂಗ್ರೆಸ್‌ನ ಪ್ರಬಲ ಯುವ ನಾಯಕರಲ್ಲಿ ಒಬ್ಬರಾಗಿದ್ದ ಹಿಮಂತ ಬಿಸ್ವ ಶರ್ಮಾ ಬಿಜೆಪಿ ಸೇರಿದರು. ಈ ಬೆಳವಣಿಗೆ ಇಡೀ ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಭಾರೀ ಪೆಟ್ಟು ನೀಡಿತು.
ನಂತರದಲ್ಲಿ 2022ರಲ್ಲಿ ಪಂಜಾಬ್‌ನ ಮಾಜಿ ಸಿಎಂ ಅಮರೀಂದರ್ ಸಿಂಗ್ ಕೂಡಾ ಹೈಕಮಾಂಡ್‌ನ ನಿಲವುಗಳಿಗೆ ಬೇಸತ್ತು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.ಹೀಗೆ ಪಕ್ಷ ಬಹುತೇಕ ನಾಯಕರು ನೇರವಾಗಿ ಟೀಕೆ ಮಾಡಿದ್ದು ರಾಹಲ್ ಗಾಂಧಿಯನ್ನು ಎಂಬುದು ವಿಶೇಷ.
ರಾಹುಲ್ ಗಾಂಧಿಯಿಂದ ಜನರ ಸೆಳೆಯುವುದು ಅಸಾಧ್ಯ. ಜನರೊಂದಿಗೆ ಅವರು ಸಂಪೂರ್ಣ ದೂರವಾಗಿದ್ದಾರೆ. ಪಕ್ಷದಲ್ಲೀಗ ಉಸಿರು ಕಟ್ಟಿಸುವ ವಾತಾವರಣ ಇದೆ ಎಂದು ಇದೀಗ ಪಕ್ಷ ತೊರೆದ ಮಿಲಿಂದ್ ದಿಯೋರಾ ಹೇಳಿದ್ದಾರೆ.
ಆದರೆ ಪ್ರತಿ ಬಾರಿ ಹಿರಿಯ ಅಥವಾ ಯುವ ನಾಯಕರು ಪಕ್ಷ ತೊರೆದಾಗಲೂ, ‘ಯಾರು ಪಕ್ಷ ಬಿಡಲು ಬಯಸುತ್ತಾರೋ ಅವರು ಅದಕ್ಕೆ ಸ್ವತಂತ್ರರು. ಒಮ್ಮೆ ನಮ್ಮ ಕಡೆಗೆ ಜನರ ಅಲೆ ಬಂದಾಗ ಅವರೆಲ್ಲಾ ಮತ್ತೆ ಪಕ್ಷಕ್ಕೆ ಮರಳುತ್ತಾರೆ.
ಅವರಿಗೆ ಪಕ್ಷಕ್ಕಿಂತ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯ’ ಎಂಬ ನಿಲುವನ್ನು ರಾಹುಲ್ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಮತ್ತೊಂದೆಡೆ ಬಿಜೆಪಿಯನ್ನು ಸೈದ್ದಾಂತಿಕವಾಗಿ ಎದುರಿಸಲಾಗದವರು ಹೀಗೆ ರಾಜೀನಾಮೆ ನೀಡುತ್ತಾರೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸುತ್ತಾ ಬಂದಿದೆ.