ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಬಳಸಿಕೊಳ್ಳುವ ಉದ್ದೇಶದಿಂದ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದರ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಉಪಯೋಗಿಸಬೇಕು ಎಂಬ ಕಾರಣದಿಂದ ಈ ನೇಮಕ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇಂದ್ರದ ನಾಯಕರಿಗೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಮೇಲೆ ಲಿಂಗಾಯತ ಮತಗಳು ಬಿಜೆಪಿ ಕೈಬಿಟ್ಟು, ಕೇವಲ ಹದಿನೇಳು ಲಿಂಗಾಯತ ಶಾಸಕರ ಸೀಟು ಪಡೆದುಕೊಳ್ಳುವಂತಾಗಿದೆ ಎಂಬುದು ಈಗ ಅವರ ಹೈಕಮಾಂಡ್ ಅರಿವಿಗೆ ಬಂದಿದೆ. ಈ ಕಾರಣದಿಂದ ಈಗ ಅನಿವಾರ್ಯವಾಗಿ ಯಡಿಯೂರಪ್ಪನವರನ್ನು ಲೋಕಸಭೆ ಚುನಾವಣೆಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ವಿಜಯೇಂದ್ರ ನೇಮಕ ಮಾಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ಮೋದಿ ಮತ್ತು ಅಮಿತ್ ಶಾ ಅವರದ್ದಿದೆ. ಈಗ ತಮ್ಮ ಬುಡಕ್ಕೆ ಬೆಂಕಿ ಹತ್ತಿರೋದರಿಂದ ಯಡಿಯೂರಪ್ಪ ಅವರನ್ನು ಉಪಯೋಗಿಸಿಕೊಳ್ಳಲು ವಿಜಯೇಂದ್ರರನ್ನು ಬಿಜೆಪಿ ರಾಜ್ಯಾದ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.
ಮೂರು ವರ್ಷದ ನೇಮಕಾತಿ:ಮುಂದಿನ ವಿಧಾನಸಭಾ ಚುನಾವಣೆವರೆಗೂ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ಮುಂದುವರಿಸಲ್ಲ. ಈ ನೇಮಕಾತಿ ಮೂರು ವರ್ಷಕ್ಕೆ ಮಾತ್ರ ಅಂತ ಮೊನ್ನೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರೇ ಸ್ಟೇಟಮೆಂಟ್ ನೀಡಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರನ್ನ ಅಗತ್ಯವಿದ್ದಾಗ ಉಪಯೋಗಿಸಿಕೊಂಡು ಯಾವಾಗ ಬೇಕಾದರೆ ಕೈ ಬಿಡಬಹುದು ಎಂಬ ಏಕೈಕ ಉದ್ದೇಶಕ್ಕೆ ಈ ನೇಮಕ ಮಾಡಿದ್ದಾರೆ ಎಂದರು.
ಸದ್ಯ ಇದು ಯಾವುದೂ ವರ್ಕೌಟ್ ಆಗೋದಿಲ್ಲ. ಯಾವ ಲಿಂಗಾಯಿತರೂ ಇದಕ್ಕೆ ಬಲಿಯಾಗುವುದಿಲ್ಲ. ಇವತ್ತು ಲಿಂಗಾಯತರಿಗೂ ಎಲ್ಲಾ ಮಾಹಿತಿ ಗೊತ್ತಿದೆ ಎಂದು ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರರನ್ನು ಒಪ್ಪಿಕೊಳ್ಳುವುದು ಬಿಡುವುದು ಇದು ಅವರ ಪಕ್ಷದ ಆಂತರಿಕ ವಿಚಾರವಾಗಿದೆ. ಕೇವಲ ಲಿಂಗಾಯತರನ್ನು ಬಳಸಿಕೊಳ್ಳುವ ಉದ್ದೇಶ ಇಟ್ಟುಕೊಂಡು ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಡಿದ್ದಾರೆ. ಎರಡು ಬಾರಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅದು ನಿಮಗೂ ಗೊತ್ತಿದೆ. ಮುಂದಿನ ಪಾರ್ಲಿಮೆಂಟ್ ಚುನಾವಣೆ ಮೇಲೆ ಕಣ್ಣಿಟ್ಟುಕೊಂಡು ಇಲ್ಲಿ ವಿಜಯೇಂದ್ರನವರಿಗಿಂತ ಯಡಿಯೂರಪ್ಪ ಅವರನ್ನು ಬಳಸಿಕೊಳ್ಳಲು ಈ ನೇಮಕ ಮಾಡಿದ್ದಾರೆ ಎಂದು ಅವರು ಹೇಳಿದರು.ಯತೀಂದ್ರ ಮಾತನಾಡಿರುವ ಕುರಿತು ನನಗೆ ಗೊತ್ತಿಲ್ಲ:
ಸತ್ಯಾಸತ್ಯತೆ ತಿಳಿದು ಮಾತನಾಡುವೆ:ನಾನು ಹೇಳಿದ ಲಿಸ್ಟ್ ಮಾತ್ರ ಆಗಬೇಕು ಎಂದು ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿದ ವಿಡಿಯೋ ವೈರಲ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಎಂ.ಬಿ ಪಾಟೀಲ, ಯತೀಂದ್ರ ಮಾತನಾಡಿರುವ ಕುರಿತು ನನಗೆ ಗೊತ್ತಿಲ್ಲ. ನನಗೆ ಅದ್ಯಾವುದು ಎಂದು ಗೊತ್ತಿಲ್ಲ. ಸತ್ಯಾಸತ್ಯತೆ ತಿಳಿದುಕೊಂಡು ಮಾತನಾಡುವೆ. ಯತೀಂದ್ರ ಮಾತನಾಡಿದ ವಿಡಿಯೋವನ್ನು ನಾನು ನೋಡಿಲ್ಲ. ಸತ್ಯಾಸತ್ಯತೆ ತಿಳಿದುಕೊಳ್ಳಬೇಕಾಗುತ್ತದೆ. ಈಗ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಂದಿದೆ. ಈ ಹಿಂದೆ ಮಹಾರಾಷ್ಟ್ರದ ಓರ್ವ ನಾಟಕ ಮಾಡುವ ವ್ಯಕ್ತಿ ನನ್ನ ಧ್ವನಿಯನ್ನು ಮಿಮಿಕ್ರಿ ಮಾಡಿದ್ದ. ಬಳಿಕ ಕಾನೂನು ಪ್ರಕಾರ ಆತನನ್ನು ಬಂಧಿಸಲಾಗಿತ್ತು. ಈಗ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಬಂದಿದೆ. ಏನು ಬೇಕಾದರೂ ಬದಲಾವಣೆ ಮಾಡಬಹುದು. ಹಸಿರು ಇರುವ ನಿಮ್ಮ ಶರ್ಟ್ ಕೆಂಪು ಮಾಡಬಹುದು ಎಂದರು.
ಲೋಕಸಭಾ ಚುನಾವಣೆಗೆ ವಿಜಯಪುರ ಮೀಸಲು ಕ್ಷೇತ್ರದ ಆಕಾಂಕ್ಷಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಇಲ್ಲಿ ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಸಚಿವ ಸತೀಶ ಜಾರಕಿಹೊಳಿ ಅವರು ಬಂದು ಮೀಟಿಂಗ್ ಮಾಡಿಕೊಂಡು ಹೋಗಿದ್ದಾರೆ. ಅದೆಲ್ಲವನ್ನು ಪಕ್ಷದಲ್ಲಿ ಚರ್ಚೆ ಮಾಡಲಾಗುವುದು. ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಎಲ್ಲವೂ ನಿರ್ಣಯ ಆಗುತ್ತದೆ ಎಂದರು.ಆಪರೇಷನ್ ಮಾಡುತ್ತಿಲ್ಲ:
ಮುಂಬರುವ ಲೋಕಸಭೆ ಚುನಾವಣೆ ಕಾವು ಏರುತ್ತಿರುವಾಗಲೇ ಬಿಜೆಪಿ ಹಾಗೂ ಜೆಡಿಎಸ್ ನ ಮಾಜಿ ಶಾಸಕರು ಹಾಗೂ ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಒಂದು ರೀತಿಯಲ್ಲಿ ಆಪರೇಷನ್ ಹಸ್ತವಾದದಂತಾಗಿದೆ ಎಂದು ಪ್ರತಿಪಕ್ಷಗಳ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ಸಿನ ನಾವ್ಯಾರೂ ಮುಖಂಡರೂ ಆಪರೇಷನ್ ಮಾಡುತ್ತಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಹಾಗೂ ಮಾಜಿ ಶಾಸಕರು ಸ್ವಯಂಪ್ರೇರಣೆಯಿಂದ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಎಷ್ಟು ಜನ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬುವುದನ್ನು ಮುಂದೆ ಕಾಯ್ದು ನೋಡಿ. ಲೋಕಸಭೆ ಚುನಾವಣೆ ವೇಳೆಗೆ ಎಲ್ಲ ಸ್ವಚ್ಛವಾಗುತ್ತದೆ ಎಂದು ತಿಳಿಸಿದರು.---ಭಾರತ ತಂಡಕ್ಕೆ ಅಭಿನಂದನೆ
ವಿಶ್ವಕಪ್ ಕ್ರಿಕೆಟ್‌ನ ಸೆಮಿ ಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಸಚಿವರು, ಭಾರತ ತಂಡ ಖಂಡಿತವಾಗಿ ಈ ಬಾರಿ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ. ವಿಶ್ವಕಪ್ ಪೈನಲ್ ನಲ್ಲಿ ನಮ್ಮ ತಂಡ ಗೆಲ್ಲಲಿ ಎಂದು ಎಂ.ಬಿ ಪಾಟೀಲರು ಟೀಂ ಇಂಡಿಯಾದ ಎಲ್ಲಾ ಆಟಗಾರರಿಗೆ ಶುಭ ಹಾರೈಸಿದರು.ನಮ್ಮ ಭಾರತ ತಂಡದ ಆಟಗಾರರು ಉತ್ತಮ ಫಾರ್ಮ್ ನಲ್ಲಿದ್ದಾರೆ. ವಿರಾಟ್ ಕೊಹ್ಲಿ, ಬೌಲರ್ ಶಮಿ ಉತ್ತಮವಾಗಿ ಬೌಲ್ ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ಭಾರತ ತಂಡ ನೂರಕ್ಕೆ ನೂರರಷ್ಟು ಈ ಬಾರಿ ವಿಶ್ವಕಪ್ ಗೆಲ್ಲುತ್ತದೆ. ಈ ಮೂಲಕ ಟೀಂ ಇಂಡಿಯಾದ ಆಟಗಾರರಿಗೆ ಶುಭಾಶಯ ಕೋರುತ್ತೇನೆ ಎಂದರು.