ಸಾರಾಂಶ
ಬೆಂಗಳೂರು : ಭೂಮಿ ಮತ್ತು ವಸತಿ ನೀಡಬೇಕು ಎಂದು ದಶಕದಿಂದ ಹೋರಾಟ ನಡೆಯುತ್ತಿದ್ದರೂ ಅದನ್ನು ಎಲ್ಲ ಸರ್ಕಾರಗಳೂ ನಿರ್ಲಕ್ಷಿಸಿವೆ. ಯಾವ ಪಕ್ಷವೂ ಸಮಸ್ಯೆ ಪರಿಹರಿಸುತ್ತಿಲ್ಲ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಆರೋಪಿಸಿದರು.
ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಭೂಮಿ-ವಸತಿ ಹಕ್ಕು ವಂಚಿತರ ಪ್ರಾತಿನಿಧ್ಯ ಸಮಾವೇಶ’ದಲ್ಲಿ ಮಾತನಾಡಿದ ಅವರು, ದಲಿತರು, ಆದಿವಾಸಿಗಳು, ದಮನಿತರಿಗೆ ಭೂಮಿಯು ಬಹುಮುಖ್ಯ. ಆದರೆ ಈಗ ‘ಉಳುವವನೇ ಭೂಮಿಯ ಒಡೆಯ’ ಘೋಷಣೆ ಅರ್ಥ ಕಳೆದುಕೊಂಡಿದೆ. ಉಳ್ಳವರಿಗೇ ಭೂಮಿ ಎನ್ನುವಂತಾಗಿದೆ. ಭೂಮಿಗಾಗಿ ದೀರ್ಘಕಾಲದಿಂದ ಹೋರಾಟ ನಡೆಯುತ್ತಿದ್ದರೂ ಎಲ್ಲ ಪಕ್ಷಗಳ ಸರ್ಕಾರಗಳೂ ನಿರ್ಲಕ್ಷಿಸಿವೆ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಉಳ್ಳವವರಿಗೇ ಭೂಮಿ ಎನ್ನುವ ಸ್ಥಿತಿ ನಿರ್ಮಿಸಿದೆ. ಅಂಬಾನಿ, ಅದಾನಿಯಂತಹ ಉಳ್ಳವರಿಗೇ ಕೇಂದ್ರ ಸರ್ಕಾರ ಭೂಮಿ ನೀಡುತ್ತಿದೆ. ಉನ್ನುಳಿದಂತೆ ಬಹಳಷ್ಟು ರಾಜ್ಯ ಸರ್ಕಾರಗಳೂ ನಮ್ಮ ಹೋರಾಟಕ್ಕೆ ಕಿವಿಗೊಡುತ್ತಿಲ್ಲ. ಆದ್ದರಿಂದ ದಲಿತರು, ಆದಿವಾಸಿಗಳು, ಹಿಂದುಳಿದವರು ವಸತಿ ಮತ್ತು ಭೂಮಿ ಹಕ್ಕಿಗಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಬೇಕು. ನಿಮ್ಮ ಹೋರಾಟದಲ್ಲಿ ನಾನೂ ಸಹ ಭಾಗವಹಿಸುತ್ತೇನೆ ಎಂದು ಭರವಸೆ ನೀಡಿದರು.
ಭೂಮಿ-ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಉಪಾಧ್ಯಕ್ಷ ಸಿರಿಮನೆ ನಾಗರಾಜ್ ಮಾತನಾಡಿ, ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಬಡಜನರು ಭೂಮಿಗಾಗಿ ಹೋರಾಟ ನಡೆಸಿಕೊಂಡು ಬಂದಿದ್ದು ಇದಕ್ಕೆ ದೀರ್ಘ ಪರಂಪರೆಯೇ ಇದೆ. ಸ್ವಾತಂತ್ರ್ಯ ನಂತರ ಕಮ್ಯೂನಿಷ್ಟ್ ಪಕ್ಷಗಳು ಹೋರಾಟ ನಡೆಸಿದ ಫಲವಾಗಿ ಭೂ ಸುಧಾರಣಾ ಕಾಯ್ದೆಗಳು ಜಾರಿಗೆ ಬಂದವು. ಕರ್ನಾಟಕದಲ್ಲಿ ಒಂದು ಮಟ್ಟಿಗೆ ಇದು ಯಶಸ್ವಿಯಾದರೂ ದೇಶದಲ್ಲಿ ಯಶಸ್ವಿಯಾಗಲಿಲ್ಲ ಎಂದು ವಿಷಾದಿಸಿದರು.
ಜಾಗತಿಕರಣದಿಂದ ಹೋರಾಟಕ್ಕೆ ಹಿನ್ನಡೆ: ರಾಜ್ಯದಲ್ಲಿ 70 ರ ದಶಕದಲ್ಲಿ ದಲಿತ ಸಂಘರ್ಷ ಸಮಿತಿ ಸ್ಥಾಪನೆಯಾದ ಬಳಿಕ ಬಗರ್ ಹುಕುಂ ಜಮೀನಿಗೆ ಅರ್ಜಿ ಸಲ್ಲಿಸಿದವರ ಪರವಾಗಿ ಹೋರಾಟ ನಡೆಸಿತು. ಬಳಿಕ ಅಕ್ರಮ-ಸಕ್ರಮ ಯೋಜನೆಯನ್ನು ಜಾರಿಗೊಳಿಸಲಾಯಿತು. ಆದರೆ ಲಕ್ಷಾಂತರ ಅರ್ಜಿಯಲ್ಲಿ ಒಂದಷ್ಟು ಮಾತ್ರ ಅನುಮೋದನೆಯಾದವು. 90 ರ ದಶಕದಲ್ಲಿ ಜಾಗತೀಕರಣದ ನಂತರ ಸಂಘಟನೆಗಳ ಶಕ್ತಿ ಕುಂದಿ ಹೋರಾಟಕ್ಕೆ ಹಿನ್ನಡೆಯಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
2016ರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ ಅವರು ಭೂಮಿ-ವಸತಿ ವಂಚಿತರ ಸಂಕಷ್ಟಗಳನ್ನು ಪರಿಹರಿಸಲು ಸಮಾಲೋಚನಾ ಸಭೆ, ವಿಚಾರ ಸಂಕಿರಣಗಳನ್ನು ಆಯೋಜಿಸಿ ಹೋರಾಟ ಕೈಗೆತ್ತಿಕೊಂಡರು, ಹೋರಾಟ ಸಮಿತಿ ಸ್ಥಾಪಿಸಿದರು. ದೊರೆಸ್ವಾಮಿ ಅವರ ನಿಧನದಿಂದ ಹೋರಾಟಕ್ಕೆ ಹಿನ್ನಡೆಯಾಯಿತು. ಇದೀಗ ಇಷ್ಟು ವರ್ಷಗಳಾದರೂ ಸಮಸ್ಯೆ ಪರಿಹಾರವಾಗಿಲ್ಲ. ಈಗಲೂ ಭೂಮಿ ವಂಚಿತರು ಹೋರಾಟ ನಡೆಸಬೇಕಾಗಿದೆ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಘೋಷಿಸಿದರು.
ಮುಖಂಡರಾದ ನೂರ್ ಶ್ರೀಧರ್, ವಿಜಯಾ, ಎನ್.ವೆಂಕಟೇಶ್, ವಿ.ನಾಗರಾಜ್, ಡಿ.ಎಚ್.ಪೂಜಾರ್, ವೀರಸಂಗಯ್ಯ, ಗೋವಿಂದರಾಜು, ಸತ್ಯಪಾಲ್, ಕೇಶವ ಕಟ್ಟೆಮನಿ, ಮಂಜುನಾಥ್, ಬಸವಲಿಂಗಪ್ಪ ಉಪಸ್ಥಿತರಿದ್ದರು.
ಕ್ಯಾಪ್ಷನ್:
ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಭೂಮಿ-ವಸತಿ ಹಕ್ಕು ವಂಚಿತರ ಪ್ರಾತಿನಿಧ್ಯ ಸಮಾವೇಶ’ದಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿ.ಎಚ್.ಎಸ್.ದೊರೆಸ್ವಾಮಿ ಅವರ ಭಾವಚಿತ್ರಕ್ಕೆ ಶಾಸಕ ಜಿಗ್ನೇಶ್ ಮೇವಾನಿ, ಸಾಮಾಜಿಕ ಚಿಂತಕಿ ವಿಜಯಾ ಮತ್ತಿತರರು ಪುಷ್ಪನಮನ ಸಲ್ಲಿಸಿದರು.