ಪೌರ ಕಾರ್ಮಿಕರ ಸಭೆ ನಡೆಸಿದ ಶಾಸಕರ ಪುತ್ರ! ಸುನೀಲ್‌ ಗೌಡ ವರ್ತನೆಗೆ ಪ್ರತಿನಿಧಿಗಳು ಅಸಮಾಧಾನ

| Published : Dec 16 2024, 12:49 AM IST / Updated: Dec 16 2024, 04:00 AM IST

ಸಾರಾಂಶ

ಚುನಾಯಿತ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ 24 ಸದಸ್ಯರು ಇರಬೇಕಾದರೆ ಸಂವಿಧಾನ ಬದ್ದ ಸ್ಥಾನ ಇಲ್ಲದ ಸುನೀಲ್‌ ಗೌಡ ಅವರು ಪುರಸಭೆ ಅಧಿಕಾರಿಗಳ, ಕಾರ್ಮಿಕರ ಸಭೆ ನಡೆಸಿರುವುದು ಸರಿಯಲ್ಲಿ. ಇದು ನಗರಸಭೆಯ ಸದಸ್ಯರಿಗೆ ಮಾಡಿದ ಅವಮಾನ.

 ಮಾಲೂರು : ಇಲ್ಲಿನ ಪುರಸಭೆಗೆ ಭೇಟಿ ನೀಡಿ ಪೌರಕಾರ್ಮಿಕರ ಸಭೆ ನಡೆಸಿದ ಶಾಸಕ ಕೆ.ವೈ.ನಂಜೇಗೌಡರ ಪುತ್ರ ಸುನೀಲ್‌ ಗೌಡ ವರ್ತನೆಗೆ ಪುರಸಭೆ ಚುನಾಯಿತ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ತಮಗೆ ಮಾಡಿದ ಅವಮಾನವಾಗಿದ್ದು, ಇವರಿಗೆ ಸಭೆ ನಡೆಸಲು ಅಧಿಕಾರ ನೀಡಿದವರು ಯಾರು ಎಂದು ಪ್ರಸ್ನಿಸಿದ್ದಾರೆ.

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಪುರಸಭೆ ಸದಸ್ಯ ಭಾನುತೇಜಾ, ಪಟ್ಟಣದಲ್ಲಿ ಕಸದ ಸಮಸ್ಯೆ ಹೆಚ್ಚಾಗುತ್ತಿದ್ದು, ಅದರ ಬಗೆ ಸುನೀಲ್‌ ಗೌಡ ಅವರು ವ್ಯಕ್ತಪಡಿಸಿದ ಕಳಕಳಿಯನ್ನು ಸ್ವಾಗತಿಸುತ್ತೇವೆ. ಆದರೆ ಚುನಾಯಿತ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ 24 ಸದಸ್ಯರು ಇರಬೇಕಾದರೆ ಸಂವಿಧಾನ ಬದ್ದ ಸ್ಥಾನ ಇಲ್ಲದ ಸುನೀಲ್‌ ಗೌಡ ಅವರು ಪುರಸಭೆ ಅಧಿಕಾರಿಗಳ,ಕಾರ್ಮಿಕರ ಸಭೆ ನಡೆಸುವುದು ಎಷ್ಟು ಸರಿ ಎಂದರು.

ಆಡಳಿತದ ಬಗ್ಗೆ ನಂಬಿಕೆ ಇಲ್ಲವೇ?

ಇದಕ್ಕೆ ಪುರಸಭೆ ಅಧಿಕಾರಿಗಳು ಏಕೆ ಅನುಮತಿ ನೀಡಬಾರದಿತ್ತು. ಸುನೀಲ್‌ ಅವರ ಈ ನಡೆಯಿಂದ ಶಾಸಕರಿಗೆ ಹಾಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಡಳಿತ ಬಗ್ಗೆ ನಂಬಿಕೆ ಹೋಗಿರಬೇಕು. ಅದಕ್ಕೆ ಪುತ್ರನನ್ನು ಕಳುಹಿಸಿದ್ದಾರೆ ಎಂದು ಟೀಕಿಸಿದರು.

ಅಧಿಕಾರಿಗಳು ಸ್ಪಷ್ಟನೆ ನೀಡಲಿ

ಪಟ್ಟಣದ ಕಸ ವಿಲೇವಾರಿಗೆ 8 ಕೋಟಿ ವೆಚ್ಚದಲ್ಲಿ ಪಟ್ಟಣದ ಹೂರವಲಯದಲ್ಲಿ ಕಸ ಸಂಸ್ಕರಣ ಘಟಕ ಸ್ಥಾಪನೆಯಾಗಿ ಒಂದು ತಿಂಗಳಾಗಿದೆ.ಈ ಘಟಕವನ್ನು ಲೋಕಾರ್ಪಣೆಗೊಳಿಸಿದ್ದ ಶಾಸಕರು ಪಟ್ಟಣದ ಕಸ ವಿಲೇವಾರಿಗೆ ಇನ್ನು ನೆಪ ಹೇಳುವಂತಿಲ್ಲ ಎಂದು ಪುರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಆದರೂ ಇದುವರೆಗೂ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಾಣುತ್ತಿದ್ದು, ಈ ಬಗ್ಗೆ ಜಾಲತಾಣದಲ್ಲಿ ಕಸದ ರಾಶಿಗಳ ಪೋಟೋ ಹಾಕಿ ಜನರು ಪುರಸಭೆ ಅಡಳಿತ ಬಗ್ಗೆ ಕಿಡಿ ಕಾರುತ್ತಿದ್ದಾರೆ. ಸಮಸ್ಯೆ ಏನೇ ಇದ್ದರೂ ಸಂವಿಧಾನಿಕ ಅಧಿಕಾರ ಇಲ್ಲದವರು ಪುರಸಭೆಯಲ್ಲಿ ಸಭೆ ನಡೆಸುವುದು ತಪ್ಪು. ಈ ಬಗ್ಗೆ ಪುರಸಭೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಅಗ್ರಹಿಸಿದ್ದಾರೆ.

ಆರೋಗ್ಯಾಧಿಕಾರಿ ಸ್ಪಷ್ಟನೆ

ಈ ಬಗ್ಗೆ ಪುರಸಭೆ ಹಿರಿಯ ಆರೋಗ್ಯಾಧಿಕಾರಿ ರಾಜಣ್ಣ ಅವರನ್ನು ಕನ್ನಡ ಪ್ರಭ ಸಂಪರ್ಕಿಸಿ ಮಾತನಾಡಿಸಿದಾಗ ನಿತ್ಯ ಬೆಳಗ್ಗಿನ ಜಾವ ಕಾರ್ಮಿಕರೊಡನೆ ಅಂದಿನ ಕಾರ್ಯಚರಣೆ ಬಗ್ಗೆ ಚರ್ಚಿಸುತ್ತಿದ್ದಾಗ ಆಗಮಿಸಿದ ಶಾಸಕರ ಮಗ ಸುನೀಲ್‌ ಗೌಡ, ಕಸ ವಿಲೇವಾರಿ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಆದರೆ ಯಾವುದೇ ಸಭೆ ನಡೆಸಿಲ್ಲ.ಶಾಸಕರ ಮಾರ್ಗದರ್ಶನದಲ್ಲಿ ಆಡಳಿತ ನಡೆಸಲಾಗುತ್ತಿದ್ದು, ಅನ್ಯರ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲ ಸ್ಪಷ್ಟಪಡಿಸಿದ್ದಾರೆ.