ಬ್ಯಾಟರಾಯನಪುರ ಗ್ರಾಮೀಣದಲ್ಲಿ ಶೋಭಾ ಭರ್ಜರಿ ರೋಡ್ ಶೋ

| Published : Apr 18 2024, 02:20 AM IST / Updated: Apr 18 2024, 04:52 AM IST

ಸಾರಾಂಶ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರು ಸೋಮವಾರ ಸಂಜೆ ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ವಿದ್ಯಾನಗರ, ಬಾಗಲೂರು ಮತ್ತು ಹುಣಸಮಾರನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.

 ಬ್ಯಾಟರಾಯನಪುರ : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರು ಸೋಮವಾರ ಸಂಜೆ ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ವಿದ್ಯಾನಗರ, ಬಾಗಲೂರು ಮತ್ತು ಹುಣಸಮಾರನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.

ಈ ವೇಳೆ ಅವರು ಮಾತನಾಡಿ, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ದೇಶ ಪ್ರಗತಿಪಥದಲ್ಲಿ ಸಾಗಿದ್ದು, ದೇಶದ ಜನರ ಪಾಲಿನ ಬಹುದೊಡ್ಡ ಶಕ್ತಿಯಾಗಿ ಮೋದಿಯವರು ಹೊರಹೊಮ್ಮಿದ್ದಾರೆ. ಮೋದಿಯವರ ಆಡಳಿತದಿಂದ ಮಾತ್ರ ದೇಶದ ಸುರಕ್ಷತೆ ಸಾಧ್ಯ ಎಂಬುದನ್ನು ಮನಗಂಡು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಜ್ಯದಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಮುಖಂಡರು ಗೆಲುವಿಗಾಗಿ ಒಗ್ಗಟ್ಟಾಗಿ ಶ್ರಮಿಸುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಈ ವೇಳೆಯಲ್ಲಿ ಬಿಜೆಪಿ, ಜೆಡಿಎಸ್ ಮುಖಂಡರು ಕ್ಷೇತ್ರದ ಪ್ರತಿ ಗ್ರಾಮದ, ಪ್ರತಿ ಮನೆಗೆ ತೆರಳಿ ಮತಯಾಚನೆ ಮಾಡುವ ಮೂಲಕ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡಿಕೊಂಡರು.

ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಮುಖಂಡ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ. ತಮ್ನೇಶ್ ಗೌಡ ಮಾತನಾಡಿ, ಶೋಭಾ ಕರಂದ್ಲಾಜೆ ಯವರು ಮೋದಿಯವರ ಸಂಪುಟದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿರುವ ಹೆಗ್ಗಳಿಕೆ ಹೊಂದಿದ್ದು, ಇಂಥ ಓರ್ವ ಮುತ್ಸದ್ದಿ ಮಹಿಳಾ ಮುಖಂಡರು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾಗಿರುವುದು ಹೆಮ್ಮೆಯ ಸಂಗತಿ, ಈ ಬಾರಿಯೂ ಇವರನ್ನು ಅಭೂತ ಪೂರ್ವವಾಗಿ ಗೆಲ್ಲಿಸಿ ಸಂಸತ್ ಗೆ ಕಳಿಸಿದರೆ, ಕ್ಷೇತ್ರದ ಅಭಿವೃದ್ಧಿ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದಂತಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ, ಹಿರಿಯ ಬಿಜೆಪಿ ಮುಖಂಡ ತಿಂಡ್ಲು ರಾಜಗೋಪಾಲ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಂಠ ಮೂರ್ತಿ, ಬೇಗೂರು ಮಹೇಶ್, ಯುವ ಮೋರ್ಚಾ ಅಧ್ಯಕ್ಷ ತಿಮ್ಮೇಗೌಡ, ಬಂಡಿಕೊಡಿಗೇಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಜನಾರ್ಧನ್ ಪಿ., ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ದೀಪಕ್ ಕುಮಾರ್, ಬಿ.ಕೆ.ಮಂಜು ಸೇರಿದಂತೆ ಇನ್ನಿತರರಿದ್ದರು.

 ಮೋದಿ ಸಮಾವೇಶಕ್ಕೆ 2 ಲಕ್ಷ ಜನ ನಿರೀಕ್ಷೆ; ಗುದ್ದಲಿ ಪೂಜೆ

  ಬೆಂಗಳೂರು :  ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯವ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಸುಮಾರು ಎರಡು ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಬುಧವಾರ ಅರಮನೆ ಮೈದಾನದ ಗಾಯತ್ರಿ ವಿಹಾರ ಗೇಟ್ ನಂ.1ರಲ್ಲಿ ಸಮಾವೇಶದ ನಡೆಯುವ ಸ್ಥಳದಲ್ಲಿ ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಶನಿವಾರ ಸಂಜೆ ಅರಮನೆ ಮೈದಾನಕ್ಕೆ ಮೋದಿಯವರು ಆಗಮಿಸಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನರು, ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ನಾವು ರಚಿಸಿದ ಬಿಜೆಪಿಯ ಪ್ರತಿ ಬೂತ್ ಸಮಿತಿಯಲ್ಲಿ 10-15 ಕಾರ್ಯಕರ್ತರಿದ್ದಾರೆ. ಅವರೆಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಬೇಕು. ವಾರ್ಡ್, ಮಂಡಲ, ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಬೇಕು. 32 ವಿಧಾನಸಭಾ ಕ್ಷೇತ್ರಗಳಿಂದ ದೊಡ್ಡ ಸಂಖ್ಯೆಯ ಕಾರ್ಯಕರ್ತರ ತಂಡ ಬರಬೇಕು. ಅಂದು ಮೋದಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ.ರಾಮಮೂರ್ತಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.-