ಸಾರಾಂಶ
‘ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಇಂದಿನ ಎನ್‌ಡಿಎ ವಿಜಯವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ವಿಜಯವಾಗಿದೆ. ಇದು ದೇಶದ ಸಂವಿಧಾನದ ಮೇಲಿನ ನಂಬಿಕೆಗೆ ಸಂದ ಜಯ. ಇದು ‘ಸಬ್ಕಾ ಸತ್ ಸಬ್ಕಾ ವಿಕಾಸ್’ ಮಂತ್ರದ ವಿಜಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ನವದೆಹಲಿ: ‘ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಇಂದಿನ ಎನ್‌ಡಿಎ ವಿಜಯವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ವಿಜಯವಾಗಿದೆ. ಇದು ದೇಶದ ಸಂವಿಧಾನದ ಮೇಲಿನ ನಂಬಿಕೆಗೆ ಸಂದ ಜಯ. ಇದು ‘ಸಬ್ಕಾ ಸತ್ ಸಬ್ಕಾ ವಿಕಾಸ್’ ಮಂತ್ರದ ವಿಜಯವಾಗಿದೆ. ಇದು ವಿಕಸಿತ ಭಾರತದ ಹಾಗೂ 140 ಕೋಟಿ ಭಾರತೀಯರ ಗೆಲುವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಇದೇ ವೇಳೆ, ತಮ್ಮ ಮುಂದಿನ 5 ವರ್ಷದ ಅವಧಿಯಲ್ಲಿ ‘ದೊಡ್ಡ ನಿರ್ಣಯ’ಗಳನ್ನು ಕೈಗೊಳ್ಳುವುದಾಗಿ ಘೋಷಿಸಿರುವ ಮೋದಿ, ‘ನನ್ನ ಆಡಳಿತಾವಧಿಯಲ್ಲಿ ಎನ್‌ಡಿಎ ಮಿತ್ರಕೂಟದ ನಾಯಕರಾದ ಜೆಡಿಯುನ ನಿತೀಶ್ ಕುಮಾರ್ ಹಾಗೂ ಟಿಡಿಪಿಯ ಚಂದ್ರಬಾಬು ನಾಯ್ಡು ಅವರ ಸಹಾಯ-ಸಹಕಾರದೊಂದಿಗೆ ಕೆಲಸ ಮಾಡುವೆ’ ಎಂದು ಘೋಷಿಸಿದ್ದಾರೆ.
ಅಂದುಕೊಂಡಂತೆ 400 ಸ್ಥಾನ ಬಾರದಿದ್ದರೂ ಎನ್‌ಡಿಎ ಕೂಟಕ್ಕೆ ಸರಳ ಬಹುಮತ ಪ್ರಾಪ್ತಿಯಾದ ಬಗ್ಗೆ ಮಂಗಳವಾರ ಸಂಜೆ ಬಿಜೆಪಿ ಕೇಂದ್ರ ಕಚೇರಿಯ ಹೊರಗೆ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘1996ರ ನಂತರ 2 ಅವಧಿಗಳನ್ನು ಪೂರ್ಣಗೊಳಿಸಿದ ನಂತರ ಸರ್ಕಾರವು ಮತ್ತೆ ಅಧಿಕಾರಕ್ಕೆ ಮರಳಿದ್ದು ಇದೇ ಮೊದಲು. ಭಾರತದ ನಾಗರಿಕರು ಮತ್ತೊಮ್ಮೆ ಬಿಜೆಪಿ ಮತ್ತು ಎನ್‌ಡಿಎಯಲ್ಲಿ ತಮ್ಮ ನಂಬಿಕೆಯನ್ನು ದೃಢಪಡಿಸಿದ್ದಾರೆ. ಲೋಕಸಭೆ ಜತೆಗೆ ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ ಎನ್‌ಡಿಎ ಕೂಟ ಅಧಿಕಾರಕ್ಕೆ ಬಂದಿದೆ. ಇದಕ್ಕೆ ನಾನು ಋಣಿಯಾಗಿದ್ದೇನೆ’ ಎಂದರು.
‘ಇದು ನನ್ನ ತಾಯಿಯ ಮರಣದ ನಂತರ ನನ್ನ ಮೊದಲ ಚುನಾವಣೆ, ಆದರೆ ಕೋಟಿಗಟ್ಟಲೆ ನಾಗರಿಕರು ನನಗೆ ಶೂನ್ಯವನ್ನು ಅನುಭವಿಸಲು ಬಿಡಲಿಲ್ಲ. ಕೋಟ್ಯಾಂತರ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ನನ್ನ ತಾಯಿಯನ್ನು ಕಳೆದುಕೊಳ್ಳಲು ಬಿಡಲಿಲ್ಲ. ಮಹಿಳೆಯರು ಕೋಟಿ ಕೋಟಿ ಸಂಖ್ಯೆಯಲ್ಲಿ ಬಂದು ದಾಖಲೆಯ ಮತ ಚಲಾಯಿಸಿದರು. ನನ್ನ ಭಾವನೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ’ ಎಂದು ಭಾವುಕರಾದರು.
10 ವರ್ಷಗಳ ಹಿಂದೆ, ಬದಲಾವಣೆಗೆ ಜನಾದೇಶವಿತ್ತು. ಅದು ದೇಶವು ಖಿನ್ನತೆಗೆ ಒಳಗಾಗಿದ್ದ ಸಮಯವಾಗಿತ್ತು. ಪತ್ರಿಕೆಗಳ ಮುಖ್ಯಾಂಶಗಳು ಭ್ರಷ್ಟಾಚಾರದ ಸುದ್ದಿಗಳಿಂದ ತುಂಬಿದ್ದವು. ಯುವಕರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದರು. ಆ ಸಮಯದಲ್ಲಿ, ಭರವಸೆಯನ್ನು ಮರಳಿ ತರುವ ಜವಾಬ್ದಾರಿಯನ್ನು ದೇಶ ನಮಗೆ ನೀಡಿತು. ಜನರ ಆಶಯವನ್ನು ನಾನು ಈಡೇರಿಸಿದ್ದೇನೆ. ಅದಕ್ಕಾಗಿ 3ನೇ ಬಾರಿ ನನಗೆ ಆಶೀರ್ವಾದ ಪ್ರಾಪ್ತಿಯಾಗಿದೆ. ಇದಕ್ಕಾಗಿ ನಾನು ಸಾರ್ವಜನಿಕರ ಮುಂದೆ ತಲೆಬಾಗುತ್ತೇನೆ.‘ನಾನು ಬಿಜೆಪಿ ಕಾರ್ಯಕರ್ತರಿಗೆ ನಿಮ್ಮ ಪ್ರಯತ್ನವನ್ನು ಹೇಳಲು ಬಯಸುತ್ತೇನೆ, ಈ ಭೇಸಿಗೆಯಲ್ಲಿ ನಿಮ್ಮ ಬೆವರು ಮೋದಿಯನ್ನು ಕೆಲಸ ಮಾಡಲು ಪ್ರೇರೇಪಿಸುತ್ತದೆ. ನೀವು 10 ಗಂಟೆ ಕೆಲಸ ಮಾಡಿದರೆ ಮೋದಿ 18 ಗಂಟೆ ಕೆಲಸ ಮಾಡುತ್ತಾರೆ. ನೀವು 2 ಹೆಜ್ಜೆ ಇಟ್ಟರೆ ಮೋದಿ 4 ಹೆಜ್ಜೆ ಇಡುತ್ತಾರೆ. ನಾವು ಭಾರತೀಯರು ಒಟ್ಟಾಗಿ ದೇಶವನ್ನು ಮುನ್ನಡೆಸುತ್ತೇವೆ. ಹೊಸ ಅಧ್ಯಾಯ ಬರೆಯುತ್ತೇವೆ, ಇದು ಮೋದಿ ಗ್ಯಾರಂಟಿ’ ಎಂದರು.
ನನ್ನ 3ನೇ ಅವಧಿಯಲ್ಲಿ ದೊಡ್ಡ ನಿರ್ಣಯ ತೆಗೆದುಕೊಂಡು ಉದ್ಯಮ ಉತ್ತೇಜಿಸುತ್ತೇವೆ. ನಾವು ಭಾರತವನ್ನು ದೇಶದ 3ನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುತ್ತೇವೆ. ಇಂದಿನ ಭಾರತವು ಜಾಗತಿಕ ಪರಿಹಾರಗಳನ್ನು ನೀಡುತ್ತದೆ. ಜಗತ್ತಿಗೆ ಭಾರತ ಸ್ಥಿರತೆ ನೀಡಲಿದೆ ಬಲಿಷ್ಠ ಭಾರತ ಬಲಿಷ್ಠ ಜಗತ್ತಿನ ಬಲಿಷ್ಠ ಸ್ತಂಭವಾಗಲಿದೆ ಎಂದು ಹೇಳಿದರು.
ಬಿಜೆಪಿಯಷ್ಟು ಸೀಟನ್ನೂ ಇಂಡಿಯಾ ಕೂಟ ಗಳಿಸಿಲ್ಲ: ಮೋದಿ ಚಾಟಿ
ನವದೆಹಲಿ: ತಮ್ಮ ವಿಜಯೋತ್ಸವ ಭಾಷಣದಲ್ಲಿ ಕಾಂಗ್ರೆಸ್ ಅನ್ನು ತರಾಟೆಗೆ ತಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ, ‘ಆಂಧ್ರಪ್ರದೇಶ ಸೇರಿದಂತೆ ಇಂದು ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿ ನಿರ್ಮಾಮವಾಗಿದೆ, ಅವರು ಠೇವಣಿ ಉಳಿಸಿಕೊಳ್ಳವುದೂ ಕಷ್ಟವಾಗಿತ್ತು. ಬಿಜೆಪಿ ಗೆದ್ದಷ್ಟು ಸೀಟನ್ನೂ ಇಂಡಿಯಾ ಬ್ಲಾಕ್ ಜಯಿಸಲು ಆಗಿಲ್ಲ’ ಎಂದು ಪ್ರಹಾರ ನಡೆಸಿದರು.
ಇದೇ ವೇಳೆ, ‘ತೆಲಂಗಾಣದಲ್ಲಿ ನಮ್ಮ ಸಂಖ್ಯೆ ದ್ವಿಗುಣಗೊಂಡಿದೆ. ಮಧ್ಯಪ್ರದೇಶ, ಗುಜರಾತ್, ಛತ್ತೀಸ್‌ಗಢ, ದೆಹಲಿ, ಉತ್ತರಾಖಂಡ, ಹಿಮಾಚಲ ಮತ್ತು ಇತರ ಹಲವು ರಾಜ್ಯಗಳಲ್ಲಿ ನಮ್ಮ ಪಕ್ಷವು ಬಹುತೇಕ ಕ್ಲೀನ್ ಸ್ವೀಪ್ ಮಾಡಿದೆ. ಇದಕ್ಕೆ ಪ್ರತ್ಯುಪಕಾರವಾಗಿ ನಾನು ಆ ರಾಜ್ಯಗಳನ್ನು ಅಭಿವೃದ್ಧಿ ಮಾಡುವ ಒಂದು ಅವಕಾಶವನ್ನೂ ಕಳೆದುಕೊಳ್ಳುವುದಿಲ್ಲ’ ಎಂದರು.
‘ಭಗವಾನ್ ಜಗನ್ನಾಥ (ಒಡಿಶಾ) ನಾಡಿನಲ್ಲಿ ಬಿಜೆಪಿ ಮುಖ್ಯಮಂತ್ರಿಯಾಗುತ್ತಿರುವುದು ಇದೇ ಮೊದಲು. ಕೇರಳದಲ್ಲೂ ಬಿಜೆಪಿ ಒಂದು ಸ್ಥಾನ ಗೆದ್ದಿದೆ. ನಮ್ಮ ಕೇರಳದ ಕಾರ್ಯಕರ್ತರು ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. ಅವರು ತಲೆಮಾರುಗಳಿಂದ ಕಾಯುತ್ತಿದ್ದ ಕ್ಷಣ ಈಗ ಸಾಕಾರಗೊಂಡಿದೆ’ ಎಂದು ಹರ್ಷಿಸಿದರು.