ಚಿಕ್ಕಬಳ್ಳಾಪುರ ಟಿಕೆಟ್‌ಗೆ ಮೊಯ್ಲಿ ಅಂತಿಮ ಹೋರಾಟ

| Published : Mar 28 2024, 12:51 AM IST

ಸಾರಾಂಶ

ಈ ಬಾರಿ 50 ವರ್ಷದೊಳಗಿನ ಮತ್ತು ಯುವಕರಿಗೆ ಟಿಕೆಟ್ ನೀಡ ಬೇಕು ಎಂದು ರಾಹುಲ್ ಗಾಂಧಿ ಸೂಚಿಸಿದ್ದಾರೆ. ಮೊಯ್ಲಿ ಇದು ನನ್ನ ಕೊನೆಯ ಚುನಾವಣೆ, ಚಿಕ್ಕಬಳ್ಳಾಪುರ ಟಿಕೆಟ್‌ ನನಗೆ ಬೇಕೆಂದು ಹಠ ಹಿಡಿದು ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮೂಲಕ ಒತ್ತಡ ಹೇರುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಯ ಕಸರತ್ತು ಮುಂದುವರಿದಿದ್ದು ಮಾಜಿ ಸಂಸದ ಡಾ.ಎಂ. ವೀರಪ್ಪ ಮೊಯ್ಲಿ ತಮಗೇ ಟಿಕೆಟ್‌ಗೆ ನೀಡಬೇಕೇಂದು ಪಟ್ಟು ಹಿಡಿದಿರುವ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ವಿಳಂಬವಾಗುತ್ತಿದೆ. ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿ ಮೂರನೇ ಬಾರಿಗೆ ಹ್ಯಾಟ್ರಿಕ್‌ ಗೆಲುವು ಸಾಧಿಸಲಾಗದೆ ಮೋದಿ ಅಲೆಯಲ್ಲಿ ಸೋತ ಎಂ.ವೀರಪ್ಪ ಮೊಯ್ಲಿ ನಾಲ್ಕನೇ ಬಾರಿಗೆ ಈಗ ಕ್ಷೇತ್ರದಲ್ಲಿ ಸ್ಪರ್ಧಿಸಲು ದೆಹಲಿ ನಾಯಕರ ಮನೆ ಬಾಗಿಲು ತಟ್ಟಿದ್ದಾರೆ.

ರಕ್ಷಾ ರಾಮಯ್ಯಗೆ ಟಿಕೆಟ್‌?

ಲೋಕಸಭಾ ಚುನಾವಣೆ ಘೋಷಣೆಗೂ ಮೊದಲು ಹಾಗೂ ಆನಂತರ ಸಹ ಮೊಯ್ಲಿಗಿಂತ ಎಐವೈಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಹೆಸರು ಮುನ್ನೆಲೆಗೆ ಬಂದಿತ್ತು. ಈ ಬಾರಿ 50 ವರ್ಷದೊಳಗಿನ ಮತ್ತು ಯುವಕರಿಗೆ ಟಿಕೆಟ್ ನೀಡ ಬೇಕು ಎಂದು ರಾಹುಲ್ ಗಾಂಧಿ ತೀರ್ಮಾನಿಸಿದ್ದರಿಂದ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ರಕ್ಷಾರಾಮಯ್ಯ ಪರ ಒಲವು ತೋರಿದ್ದರಿಂದ ಅವರಿಗೇ ಬಹುತೇಕ ಟಿಕಟ್ ಎಂದು ತೀರ್ಮಾನವಾಗಿತ್ತು. ಆದರೆ ಹಲವು ದಿನಗಳಿಂದ ಮೊಯ್ಲಿ ದೆಹಲಿ ಮಟ್ಟದಲ್ಲಿ ಟಿಕೆಟ್‌ಗೆ ಕಸರತ್ತು ನಡೆಸುತ್ತಿರುವುದರಿಂದ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಅಂತಿಮ ಅಭ್ಯರ್ಥಿ ಆಯ್ಕೆ ಮಾಡುವುದು ಕಾಂಗ್ರೆಸ್‌ ವರಿಷ್ಠರಿಗೆ ಸವಾಲಾಗಿದೆ. ರಾಜ್ಯದಲ್ಲಿ ಹಿರಿಯ ತಲೆಗಳಿಗೆ ಕೊಕ್‌ ಕೊಡಲಾಗಿದೆ. ಇದರಿಂದ ಎಚ್ಚೆತ್ತು ಕೊಂಡಿರುವ ಮೊಯ್ಲಿ ಇದು ನನ್ನ ಕೊನೆಯ ಚುನಾವಣೆ, ಚಿಕ್ಕಬಳ್ಳಾಪುರ ಟಿಕೆಟ್‌ ನನಗೆ ಬೇಕೆಂದು ಹಠ ಹಿಡಿದು ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮೂಲಕ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ರಕ್ಷಾ ರಾಮಯ್ಯ ಹೆಸರು ಅಂತಿಮಗೊಳ್ಳುವುದಕ್ಕೆ ತಡವಾಗಿದೆ. ಶಿವಶಂಕರ ರೆಡ್ಡಿ ಅಸಮಾಧಾನ

ಈ ನಡುವೆ ಗೌರಿಬಿದನೂರು ಮಾಜಿ ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ಸಹ ತಮ್ಮನ್ನು ಪರಿಗಣಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇದರೊಂದಿಗೆ ಕಳೆದ ಐದು ವಿಧಾನಸಭಾ ಚುನಾವಣೆಗಳಲ್ಲಿ ಸೋಲಿಲ್ಲದ ಸರದಾರನಾಗಿದ್ದೆ. ಆರನೇ ಬಾರಿ ತ್ತಿದ್ದೇನೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಈಗ ಬದಲಾಗಿದ್ದಾರೆ. ಸ್ಥಳೀಯನಾದ ತಮ್ಮನ್ನು ಕಡೆಗಣಿಸುತ್ತಿದ್ದಾರೆ. ನನ್ನವಿರುಧ್ಧ ಗೆದ್ದಿರುವ ಪಕ್ಷೇತರ ಶಾಸಕರಿಗೆ ಮಣೆ ಹಾಕುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ತನಗೆ ಈ ಬಾರಿ ಲೋಕಸಭಾ ಟಿಕೆಟ್ ನೀಡಬೇಕು. ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಲ್ಲಿ ಎಲ್ಲರು ಹೊರಗಿನವರು ನಾನೊಬ್ಬನೇ ಸ್ಥಳೀಯ, ಮೊದಲಿನಿಂದಲೂ ಡಾ.ಕೆ.ಸುಧಾಕರ್ ವಿರುದ್ದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕಳೆದ ಚುನಾವಣೆಯಲ್ಲಿ ಸುಧಾಕರ್ ರವರನ್ನು ಸೋಲಿಸಿ ಪ್ರದೀಪ್ ಈಶ್ವರ್ ಗೆಲುವಿಗೆ ಕಾರಣನಾಗಿದ್ದೇನೆ. ಆದ್ದರಿಂದ ನನಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿರುವುದು ಸಹ ಪಕ್ಷದ ವರಿಷ್ಠರಿಗೆ ತಲೆನೋವಾಗಿದೆ.