ರಾಜ್ಯದಲ್ಲಿ ದಲಿತ, ಲಿಂಗಾಯತ ಮತ್ತು ಅಲ್ಪಸಂಖ್ಯಾತರಿಗೆ ಡಿಸಿಎಂ ಹುದ್ದೆ ಚರ್ಚೆಗೆ ಬಿರುಸು

| Published : Jun 25 2024, 12:38 AM IST / Updated: Jun 25 2024, 04:27 AM IST

ರಾಜ್ಯದಲ್ಲಿ ದಲಿತ, ಲಿಂಗಾಯತ ಮತ್ತು ಅಲ್ಪಸಂಖ್ಯಾತರಿಗೆ ಡಿಸಿಎಂ ಹುದ್ದೆ ಚರ್ಚೆಗೆ ಬಿರುಸು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ದಲಿತ, ಲಿಂಗಾಯತ ಮತ್ತು ಅಲ್ಪಸಂಖ್ಯಾತರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆ ನೀಡುವ ಕುರಿತ ಚರ್ಚೆ ಕಾಂಗ್ರೆಸ್‌ನಲ್ಲಿ ಮತ್ತಷ್ಟು ಬಿರುಸುಗೊಂಡಿದೆ.

 ಬೆಂಗಳೂರು: ರಾಜ್ಯದಲ್ಲಿ ದಲಿತ, ಲಿಂಗಾಯತ ಮತ್ತು ಅಲ್ಪಸಂಖ್ಯಾತರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆ ನೀಡುವ ಕುರಿತ ಚರ್ಚೆ ಕಾಂಗ್ರೆಸ್‌ನಲ್ಲಿ ಮತ್ತಷ್ಟು ಬಿರುಸುಗೊಂಡಿದೆ. ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರು ಜಾತಿ ಆಧಾರದಲ್ಲಿ ಹೊಸದಾಗಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಸಂಬಂಧಿಸಿ ಅಸಮಾಧಾನ ವ್ಯಕ್ತಪಡಿಸಿದರೆ, ಸಚಿವ ಕೆ.ಎನ್‌.ರಾಜಣ್ಣ ಅವರು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂಬ ತಮ್ಮ ನಿಲುವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಇದು ಪಕ್ಷದ ಹಿತದೃಷ್ಟಿಯಿಂದ ಸಲ್ಲಿಸಿರುವ ಬೇಡಿಕೆ ಎಂದು ಹೇಳಿದ್ದಾರೆ.

ಈ ಮಧ್ಯೆ, ಸಹಕಾರ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ದಲಿತರಿಗೆ ಸಾಮರ್ಥ್ಯದ ಮೇಲೆ ಡಿಸಿಎಂ ಹುದ್ದೆ ಕೊಡಬೇಕೇ ಹೊರತು ಕೋಟಾದಡಿ ಅಲ್ಲ ಎಂದಿದ್ದಾರೆ. ಇದೇ ವೇಳೆ, ಹೆಚ್ಚುವರಿ ಡಿಸಿಎಂ ಹುದ್ದೆ ಬೇಡಿಕೆ ಕೇಳೋದು ತಪ್ಪಲ್ಲ. ಆದರೆ ಕೊಡೋದು, ಬಿಡೋದು ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅಭಿಪ್ರಾಯಪಟ್ಟಿದ್ದಾರೆ.

ಮೂವರಲ್ಲ, ಐವರನ್ನು ಮಾಡಲಿ:

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಕುರಿತು ಪಕ್ಷ ನಿರ್ಧರಿಸುತ್ತದೆ. ಮೂವರಲ್ಲ, ಐವರನ್ನು ಡಿಸಿಎಂ ಮಾಡಲಿ. ನನ್ನ ಅಭ್ಯಂತರವಿಲ್ಲ ಎಂದು ಹೇಳುವ ಮೂಲಕ ಮಾಜಿ ಸಂಸದ ಡಿ.ಕೆ.ಸುರೇಶ್‌ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಸಮುದಾಯಕ್ಕೊಂದು ಡಿಸಿಎಂ ಹುದ್ದೆ ಸೃಷ್ಟಿಸುವುದಾದರೆ ಸಾಕಷ್ಟು ಜನ ಡಿಸಿಎಂ ಆಗಬಹುದು. 8 ಬಾರಿ ಗೆದ್ದಿರುವ ರಾಮಲಿಂಗಾರೆಡ್ಡಿ, ಆರ್‌.ವಿ.ದೇಶಪಾಂಡೆ, ಸತೀಶ್‌ ಜಾರಕಿಹೊಳಿ, ಈಶ್ವರ್‌ ಖಂಡ್ರೆ, ಎಂ.ಬಿ.ಪಾಟೀಲ್‌, ಅಲ್ಪಸಂಖ್ಯಾತ ಸಮುದಾಯದ ಜಮೀರ್‌ ಅಹಮದ್‌, ಒಕ್ಕಲಿಗ ನಾಯಕರಾದ ಕೃಷ್ಣ ಬೈರೇಗೌಡ, ಚೆಲುವರಾಯಸ್ವಾಮಿ, ಬ್ರಾಹ್ಮಣ ಸಮುದಾಯದ ದಿನೇಶ್‌ ಗುಂಡೂರಾವ್‌ ಹೀಗೆ ಹಲವರಿದ್ದಾರೆ. ಸಮಾನತೆಗಾಗಿ ಎಲ್ಲ ಸಮುದಾಯದ ನಾಯಕರನ್ನೂ ಡಿಸಿಎಂ ಮಾಡಲಿ. ನಮ್ಮ ಅಭ್ಯಂತರವೇನೂ ಇಲ್ಲ ಎಂದರು.

ಇನ್ನು ಸಚಿವ ರಾಜಣ್ಣ ಬೇಡಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಐಟಿ, ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ‘ಸಮುದಾಯವಾರು ಡಿಸಿಎಂ ಹುದ್ದೆ ನೀಡುವುದರಿಂದ ಎಲ್ಲ ಸಮಸ್ಯೆ ಬಗೆಹರಿಯುವುದಿಲ್ಲ. ಹಾಗೊಂದು ವೇಳೆ ಬಗೆಹರಿಯುವುದಾಗಿದ್ದರೆ ಸಿಎಂ ಬಿಟ್ಟು ಸಚಿವ ಸಂಪುಟದ ಎಲ್ಲ ಸಚಿವರನ್ನೂ ಡಿಸಿಎಂಗಳನ್ನಾಗಿ ಮಾಡಿಬಿಡಲಿ ಎಂದು ಹೇಳಿದರು.

ರಾಜಣ್ಣ ಅವರದು ವೈಯಕ್ತಿಕ ಅಭಿಪ್ರಾಯ. ಕೇಳುವ ಹಕ್ಕು ಎಲ್ಲರಿಗೂ ಇದೆ. ಮುಖ್ಯಮಂತ್ರಿ ಹುದ್ದೆಯನ್ನೇ ಕೇಳಲಿ. ಯಾರು ಬೇಡ ಅಂತಾರೆ. ಆದರೆ ಇಂಥದ್ದನ್ನೆಲ್ಲ ಕೇಳಲೆಂದೇ ಹೈಕಮಾಂಡ್‌ ಇದೆ, ಸಿಎಲ್‌ಪಿ ಇದೆ. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಕೇಳಿದರೆ ಸಿಗುತ್ತಾ? ಎಂದು ಕಿಡಿಕಾರಿದರು.

ಸಾಮರ್ಥ್ಯದ ಮೇಲೆ ಕೊಡಿ: ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಗೆ ಪರೋಕ್ಷವಾಗಿ ಸಹಮತ ವ್ಯಕ್ತಪಡಿಸಿರುವ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ದಲಿತರಲ್ಲಿ ಅನೇಕರು ಸಮರ್ಥರಿದ್ದಾರೆ. ಆ ಸಾಮರ್ಥ್ಯದ ಮೇಲೆ ಡಿಸಿಎಂ ಸ್ಥಾನ ಕೊಡಬೇಕೇ ಹೊರತು, ಕೋಟಾದಡಿ ಅಲ್ಲ ಎಂದರು.

ಡಿಸಿಎಂ ಸ್ಥಾನ ಸಾಂವಿಧಾನಿಕ ಹುದ್ದೆಯಲ್ಲ, ದಲಿತ ಕೋಟಾ, ಆ ಕೋಟಾ, ಈ ಕೋಟಾ ಅಂತ ಅದರಲ್ಲಿ ಏನಿಲ್ಲ. ಡಿಸಿಎಂ ವಿಚಾರದಲ್ಲಿ ಯಾವುದೇ ತೀರ್ಮಾನವಿದ್ದರೂ ಹೈಕಮಾಂಡ್ ಕೈಗೊಳ್ಳಲಿದೆ ಎಂದು ಅವರು ಹೇಳಿದರೆ, ಹೆಚ್ಚುವರಿ ಡಿಸಿಎಂ ಹುದ್ದೆಗೆ ಸಂಬಂಧಿಸಿ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಬದ್ಧ. ಕೊಟ್ಟರೆ ಯಾರು ತಾನೆ ಆಗಲ್ಲ ಅಂತಾರೆ? ಎಂದು ಸಚಿವ ಆರ್‌.ಬಿ.ತಿಮ್ಮಾಪುರ ತಿಳಿಸಿದರು.

ರಾಜಣ್ಣ ಮತ್ತೆ ಸಮರ್ಥನೆ: ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಅಗತ್ಯ ಎಂಬ ತಮ್ಮ ಆಗ್ರಹವನ್ನು ಪುನರುಚ್ಚರಿಸರುವ ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ಬಹಳಷ್ಟು ಸಚಿವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಧ್ವನಿ ಇಲ್ಲದ ಸಮುದಾಯಗಳಿಗೆ ರಾಜಕೀಯ ಅಧಿಕಾರ ಕೊಟ್ಟಾಗ ಆ ಸಮುದಾಯದ ಜನರ ಪ್ರೀತಿ ಪಕ್ಷದ ಮೇಲೆ ಹೆಚ್ಚಾಗಲಿದೆ. ಆ ದೃಷ್ಟಿಯಿಂದ ಸಲಹೆ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ, ಹೊಸದಾಗಿ ಡಿಸಿಎಂ ಹುದ್ದೆ ಸೃಷ್ಟಿಸಿದರೆ ಸಮಸ್ಯೆಗಳು ಬಗೆಹರಿಯುತ್ತಾ ಎಂಬ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ರೀತಿಯ ಅಭಿಪ್ರಾಯ ಹೇಳುವ ಸಚಿವರೂ ಇದ್ದಾರೆ. ಹೆಚ್ಚುವರಿ ಡಿಸಿಎಂ ಹುದ್ದೆ ಬೇಕು ಎನ್ನುವ ಸಚಿವರೂ ಇದ್ದಾರೆ. ಈ ವಿಚಾರದಲ್ಲಿ ಹೈಕಮಾಂಡ್‌ ಅಂತಿಮ ತೀರ್ಮಾನ ತೆಗೆದುಕೊ‍ಳ್ಳಲಿದೆ ಎಂದರು.

ದಲಿತ ಡಿಸಿಎಂ ದಲಿತರಲ್ಲಿ ಅನೇಕರು ಸಮರ್ಥರಿದ್ದಾರೆ. ಆ ಸಾಮರ್ಥ್ಯದ ಮೇಲೆ ಡಿಸಿಎಂ ಸ್ಥಾನ ಕೊಡಬೇಕೇ ಹೊರತು, ಕೋಟಾದಡಿ ಅಲ್ಲ.

- ಡಾ.ಎಚ್‌.ಸಿ.ಮಹದೇವಪ್ಪ-----

ಸಚಿವರ ಬೇಡಿಕೆಬಹಳಷ್ಟು ಸಚಿವರು ಹೆಚ್ಚುವರಿ ಡಿಸಿಎಂ ಬೇಕು ಎಂದಿದ್ದಾರೆ. ಧ್ವನಿ ಇಲ್ಲದ ಸಮುದಾಯಗಳಿಗೆ ಅಧಿಕಾರ ಕೊಟ್ಟಾಗ ಪಕ್ಷದ ಮೇಲೆ ಅವರ ಪ್ರೀತಿ ಹೆಚ್ಚಾಗುತ್ತದೆ.

- ಕೆ.ಎನ್‌.ರಾಜಣ್ಣ

-----3 ಅಲ್ಲ 5 ಮಾಡಿ ಜಾತಿಗೊಂದು ಡಿಸಿಎಂ ಮಾಡುವುದಾದರೆ ಸಾಕಷ್ಟು ಜನ ಡಿಸಿಎಂ ಆಗಬಹುದು. ಮೂರಲ್ಲ, ಐದು ಜನರನ್ನು ಬೇಕಾದರೂ ಡಿಸಿಎಂ ಮಾಡಿ.- ಡಿ.ಕೆ.ಸುರೇಶ್‌-----

ಎಲ್ಲರಿಗೂ ಡಿಸಿಎಂಜಾತಿಗೊಬ್ಬ ಡಿಸಿಎಂ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬೇಕಿದ್ದರೆ ಸಿಎಂ ಬಿಟ್ಟು ಎಲ್ಲ ಸಚಿವರನ್ನೂ ಡಿಸಿಎಂ ಮಾಡಿಬಿಡಿ.

- ಪ್ರಿಯಾಂಕ್‌ ಖರ್ಗೆ

-----ಪಕ್ಷ ನಿರ್ಧರಿಸುತ್ತೆ

3 ಹೆಚ್ಚುವರಿ ಡಿಸಿಎಂ ಕುರಿತು ಪಕ್ಷ ನಿರ್ಧರಿಸುತ್ತದೆ. ಈ ಕುರಿತು ಯಾರು ಚರ್ಚೆ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. - ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ