ಸಾರಾಂಶ
ಮೈಸೂರು : ನಗರಾಭಿವೃದ್ಧಿ ಭೈರತಿ ಸುರೇಶ್ ಮತ್ತು ಸರ್ಕಾರದ ಕುಮ್ಮಕ್ಕು ಇಲ್ಲದೆ ಮುಡಾ ಅಕ್ರಮ ನಡೆದಿಲ್ಲ ಎಂದು ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ ಹೇಳಿದರು.
ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ತಮ್ಮ ಬಳಿ ಇದ್ದ 14 ನಿವೇಷನ ಹಿಂದಕ್ಕೆ ನೀಡಿದ ಸಿದ್ದರಾಮಯ್ಯ ಅವರು, ಬಳಿಕ ನಗರಾಭಿವೃದ್ಧಿ ಇಲಾಖೆ ಮೂಲಕ 48 ನಿವೇಶನ ರದ್ದುಪಡಿಸಿರುವುದು ಸ್ವಾಗತಾರ್ಹ ಎಂದರು.
ಖಾಸಗಿ ಬಡಾವಣೆಯೊದರ 48 ನಿವೇಶನವನ್ನು ನಗರಾಭಿವೃದ್ಧಿ ಇಲಾಖೆ ಹಿಂದಕ್ಕೆ ಪಡೆದಿದೆ. ಆ ಮೂಲಕ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹೋರಾಟ ಆರಂಭವಾದಂತಿದೆ ಎಂದರು.
ಜಮೀನಿನ ಮಾಲೀಕರಿಗೆ 53 ನಿವೇಶನ ಕೊಟ್ಟಿರುವುದಾಗಿ ಹೇಳುತ್ತಾರೆ. ಆದರೆ, ಆ ಮಾಲೀಕರಿಗೆ ಆ ವಿಷಯ ಗೊತ್ತಿರುವುದೇ ಇಲ್ಲ ಎಂಬುದೇ ಆಶ್ಚರ್ಯದ ಸಂಗತಿ ಎಂದು ವ್ಯಂಗ್ಯವಾಡಿದರು.
ಚುನಾವಣೆ ನಂತರದಲ್ಲಿ ಅಕ್ರಮ ನಡೆದಿದೆ. ಆಯುಕ್ತರಿಗೆ ಅಷ್ಟು ಶಕ್ತಿ ಇರುವುದಿಲ್ಲ. ಆದರೆ, ಅವರ ಹಿಂದೆ ಭೈರತಿ ಸುರೇಶ ಇದ್ದಾರೆ. ಸರ್ಕಾರ ಅವರ ಭ್ರಷ್ಟಾಚಾರದ ಹಿಂದೆ ನಿಂತಿದೆ. ಸರ್ಕಾರದ ಸಹಮತವೂ ಇದಕ್ಕೆ ಇದೆ. ಹೀಗಾಗಿಯೇ ಈ ಹಿಂದಿನ ಆಯುಕ್ತ ದಿನೇಶ್ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಸಿಐಟಿಬಿ 1987ರಲ್ಲಿ ಮುಡಾ ಆಯಿತು. ಆಗ 50:50 ಇರಲಿಲ್ಲ. ಹೀಗಾಗಿ ಮುಂಚಿನ ಭೂಸ್ವಾಧೀನಕ್ಕೇ ಏಕೆ ಸೈಟು ಕೊಡುತ್ತೀರಿ. 928 ನಿವೇಶನಗಳಲ್ಲಿ ಏಕೆ ಕೇವಲ 48 ನಿವೇಶನ ಮಾತ್ರ ರದ್ದುಪಡಿಸಿ. ಉಳಿದ ನಿವೇಶನಗಳನ್ನು ಏಕೆ ರದ್ದು ಮಾಡಿಲ್ಲ ಎಂದು ಪ್ರಶ್ನಿಸಿದರು.
ಇ.ಡಿ.4900 ನಿವೇಶನ ಕೊಟ್ಟಿರುವುದಾಗಿ ಹೇಳಿದ್ದಾರೆ. ಇದನ್ನು ನೋಡಿದರೆ ಭ್ರಷ್ಟಾಚಾರ ವ್ಯಾಪಕವಾಗಿದೆ ಎನಿಸುತ್ತದೆ. ತನಿಖೆ ಮಾಡಿ ಸತ್ಯಾಸತ್ಯತೆ ಪರಿಶೀಲಿಸಬೇಕು. ಮಧ್ಯವರ್ತಿಗಳು ಅತಿ ಹೆಚ್ಚು ನಿವೇಶನ ಪಡೆದಿದ್ದಾರೆ. ಕೂಡಲೇ ಸರ್ಕಾರಕ್ಕೆ ಶಕ್ತಿ ಇದ್ದರೆ ಅವುಗಳನ್ನು ಹಿಂದಕ್ಕೆ ಪಡೆಯಬೇಕು. ಸರ್ವೇ ನಂಬರ್ 257ಕ್ಕೆ ಸಂಬಂಧಿಸಿದಂತೆ 1981ರಲ್ಲಿ ಹಾಲಮ್ಮ ಎಂಬವರ ಜಮೀನಿಗೆ ಅಧಿಸೂಚನೆ ಆದ ಆಸ್ತಿಯನ್ನು ಸೂರಜ್ ಮಲ್ ಎಂಬಾತ ಖರೀದಿಸಿದ್ದ. ನಂತರ ತುಳಸಿರಾವ್ ಎಂಬವರಿಗೆ ಜಿಪಿಎ ಆಗಿದೆ ಎಂದು ದೂರಿದರು.
ಕಾಂಗ್ರೆಸ್ ಹೈಕಮಾಂಡ್ ಗಟ್ಟಿಯಾಗಿಲ್ಲ. ಹೀಗಾಗಿ ಸಿದ್ದರಾಮಯ್ಯ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದೆ. ಈ ಹಿಂದಿನ ಎಂಡಿಎ ಆಯುಕ್ತರಾದ ದಿನೇಶ್, ನಟೇಶ್ಮೇಲೆ ಕ್ರಮ ಕೈಗೊಂಡರೆ ಸರ್ಕಾರದ ಅಕ್ರಮಗಳು ಹೊರಬರುತ್ತವೆ ಎಂಬ ಭಯ ಸರ್ಕಾರವನ್ನು ಕಾಡುತ್ತಿದೆ. ಹೀಗಾಗಿ ಕ್ರಮ ಕೈಗೊಳ್ಲುತ್ತಿಲ್ಲ ಎಂದು ಅವರು ಆರೋಪಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, 2000ನೇ ಇತವಿಯಿಂದ ಈಚೆಗೆ ಅನೇಕ ಹಗರಣ ನಡೆದಿದೆ. ಆದರೆ ಇ.ಡಿ. ವರದಿ ಬಗ್ಗೆ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿರುವುದು ಸರಿಯಲ್ಲ. ಸುಮಾರು 1 ಸಾವಿರ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ಅಗಿದೆ. ಇಡಿ ವರದಿ ಹಿನ್ನೆಲೆಯಲ್ಲಿ ಈಗ ಒತ್ತಡ ಹೆಚ್ಚಾಗಿದ್ದು, ಒಂದಿಷ್ಟು ಜನರ ಬಂಧನ ಆಗಬೇಕು. 145 ಪೈಲ್ ನಾಪತ್ತೆ ತನಿಖೆ ಆಗಬೇಕು. ಈ ಸಂಬಂಧ ಜಿಲ್ಲಾಡಳಿತ ಕ್ರಿಮಿನಲ್ ಕೇಸ್ ದಾಖಲಿಸಬೇಕು. 129 ಮಂದಿಗೆ ಮಾತ್ರ ಬದಲಿ ನಿವೇಶನ ನೀಡಿರುವುದಾಗಿ ಸರ್ಕಾರ ವಿಧಾನ ಸಭೆಯಲ್ಲಿ ಉತ್ತರ ನೀಡಿದೆ. ಅಲ್ಲೂ ಲೋಪ ಕಂಡುಬಂದಿದೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಮಾತನಾಡಿ, ನನ್ನ ಪತ್ನಿ ಎಲ್ಲಿಯೂ ಪಾಲುದಾರಿಕೆಗೆ ಹೂಡಿಕೆ ಮಾಡಿಲ್ಲ ಎಂದರು.
ದಿನೇಶ್ ಗುಂಡೂರಾವ್ ವಿರುದ್ಧ ದೂರು:
ಬಾಣಂತಿಯರ ಸಾವು ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಸರ್ಕಾರದ ವಿರುದ್ಧ ದೂರು ದಾಖಲಿಸಲಾಗುವುದು. ರಾಜ್ಯದಲ್ಲಿ 280 ಮಂದಿ ಬಾಣಂತಿಯರು ಒಂದು ವರ್ಷದಲ್ಲಿ ಮೃತಪಟ್ಟಿದ್ದಾರೆ ಮತ್ತು ನೂರು ಮಕ್ಕಳು ಮೃತಪಟ್ಟಿರುವ ಡೆತ್ ಆಡಿಟ್ ನಡೆಸಬೇಕು. ಸದ್ಯದಲ್ಲಿಯೇ ಸತ್ಯಶೋಧನ ಸಮಿತಿ ಭೇಟಿ ನೀಡಿ ಪರಿಶೀಲಿಸುವುದಾಗಿ ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ ತಿಳಿಸಿದರು.
ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಗಿರೀಧರ್, ಕೇಬಲ್ ಮಹೇಶ್, ಮಾಧ್ಯಮ ಸಂಚಾಲಕ ಮಹೇಶ್ ರಾಜ್ ಅರಸ್ ಇದ್ದರು.