ಸಾರಾಂಶ
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) 50:50 ನಿವೇಶನ ಹಂಚಿಕೆಯಲ್ಲಿ ಆಗಿರುವ ಬಹುಕೋಟಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಬಿಜೆಪಿ ಪ್ರತಿಭಟನೆಗೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರೂ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮೈಸೂರು ನಗರ ಭಾರೀ ಹೈಡ್ರಾಮಕ್ಕೆ ಸಾಕ್ಷಿಯಾಯಿತು. ಪೊಲೀಸರು ಎರಡೂ ಪಕ್ಷಗಳ ಕಾರ್ಯಕರ್ತರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.
ಸಿಎಂ ವಿರುದ್ಧ ಕಿಡಿ: ಮಹಾರಾಜ ಕಾಲೇಜು ಮೈದಾನ ಬಳಿ ಜಮಾಯಿಸಿದ ಬಿಜೆಪಿ ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರು ಮುಡಾ ಹಗರಣದಲ್ಲಿ ಭಾಗಿಯಾಗಿರುವ ಸಿಎಂ ಸಿದ್ದರಾಮಯ್ಯ, ಆರೋಪಿಗಳನ್ನು ರಕ್ಷಿಸುತ್ತಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮಳೆ ನಡುವೆ ಪ್ರತಿಭಟನೆ: ನಂತರ ಮೆರವಣಿಗೆಯಲ್ಲಿ ತೆರಳಿ ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರಾದರೂ ಪೊಲೀಸರು ಅವಕಾಶ ನೀಡಲಿಲ್ಲ. ಪ್ರತಿಭಟನೆಯಲ್ಲಿ ಭಾಗವಹಿಸಲು ವಿಪಕ್ಷ ನಾಯಕ ಆರ್.ಅಶೋಕ್ ಸೇರಿ ಪ್ರಮುಖರು ಬರುತ್ತಿರುವ ವಿಚಾರ ತಿಳಿದು ಅವರಿಗಾಗಿ ಸ್ಥಳದಲ್ಲಿ ಪ್ರತಿಭಟನಾಕಾರರು ಕಾಯುತ್ತಿದ್ದರು. ಮಳೆಯ ನಡುವೆಯೇ ಪ್ರತಿಭಟನೆ ಮುಂದುವರಿಸಿದರು.
ಈ ವೇಳೆ ಕಾರ್ಯಕರ್ತರಲ್ಲಿ ಹಲವರು ಮಳೆಯಿಂದ ರಕ್ಷಣೆ ಪಡೆಯಲೆಂದು ಚದುರಿದರು. ಆಗ ಎಚ್ಚೆತ್ತ ಪೊಲೀಸರು ಪ್ರತಿಭಟನಾನಿರತ ಮುಖಂಡರನ್ನು ಬಂಧಿಸಲು ಮುಂದಾದರು.
ಕ್ಯಾಂಟರ್‌ನಲ್ಲಿ ನಿಂತು ಮಳೆಯಲ್ಲೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಸಂಸದ ಯದುವೀರ್ ಒಡೆಯರ್, ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್.ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮಾಜಿ ಸಚಿವ ಎನ್.ಮಹೇಶ್ ಇತರರನ್ನು ಕ್ಯಾಂಟರ್‌ನಲ್ಲಿಯೇ ವಶಕ್ಕೆ ಪಡೆದರು. ಇದನ್ನು ಖಂಡಿಸಿ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದರು. ಕೆಲ ಕಾರ್ಯಕರ್ಯರು ಮುಡಾ ಕಚೇರಿಯತ್ತ ತೆರಳಲು ಮುಂದಾದರಾದರೂ ಅವರನ್ನು ಪೊಲೀಸರು ವಶಕ್ಕೆಪಡೆದರು.
ಕೊನೆಗೆ ಆರ್. ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ್ ಸೇರಿ ಹಲವು ಬಿಜೆಪಿ ನಾಯಕರು ಸ್ಥಳಕ್ಕೆ ಬಂದರಾದರೂ ಪೊಲೀಸರು ಅವರನ್ನೂ ವಶಕ್ಕೆ ಪಡೆದು ಬಿಗಿ ಭದ್ರತೆಯಲ್ಲಿ ಕರೆದೊಯ್ದರು.
ಕಾಂಗ್ರೆಸ್ ಪ್ರತಿಭಟನೆ: ಈ ನಡುವೆ, ಬಿಜೆಪಿ ಪ್ರತಿಭಟನೆಗೆ ಪ್ರತಿಯಾಗಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಜೆಎಲ್ ಬಿ ರಸ್ತೆಯ ಮುಡಾ ಪಕ್ಕದಲ್ಲಿರುವ ಎಂಜಿನಿಯರುಗಳ ಸಂಸ್ಥೆ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಬಳಿಕ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಮಹಾರಾಜ ಕಾಲೇಜು ಮೈದಾನ ಬಳಿ ತೆರಳಲು ಮುಂದಾದರು. ಈ ವೇಳೆ ಪೊಲೀಸರು ಅವರನ್ನು ತಡೆದಾಗ ಕೆಲಕಾಲ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ, ವಾಗ್ವಾದ ನಡೆದು ಹೈಡ್ರಾಮ ಸೃಷ್ಟಿಯಾಯಿತು. ಕೊನೆಗೆ ಪಕ್ಷದ ನಗರಾಧ್ಯಕ್ಷ ಸೂಚನೆ ಮೇರೆಗೆ ಧರಣಿ ಹಿಂಪಡೆದರು. ಪ್ರತಿಭಟನೆಯಲ್ಲಿ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಲಕ್ಷ್ಮಣ್ ಸೇರಿ ಹಲವರು ಪಾಲ್ಗೊಂಡಿದ್ದರು.