ಸಾರಾಂಶ
ಮುಡಾ ಕಡತದಲ್ಲಿದ್ದ ನೈಜ ದಾಖಲೆ ನಾಶಪಡಿಸಿ, ಸುಳ್ಳು ದಾಖಲೆ ಸೇರಿಸಿರುವ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ ಮೊದಲಾದವರ ವಿರುದ್ಧ ದೂರು ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಡತದಲ್ಲಿದ್ದ ನೈಜ ದಾಖಲೆ ನಾಶಪಡಿಸಿ, ಆ ಜಾಗದಲ್ಲಿ ಸುಳ್ಳು ದಾಖಲೆ ಸೇರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ ಮೊದಲಾದವರ ವಿರುದ್ಧ ದೂರು ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ತಮ್ಮ ಕುಟುಂಬದ ಹೆಸರಿಗೆ ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಪತ್ನಿ ಪಾರ್ವತಿ, ಬಾಮೈದುನ ಮಲ್ಲಿಕಾರ್ಜುನಸ್ವಾಮಿ, ಜಮೀನು ಮಾರಾಟ ಮಾಡಿದ್ದಾರೆ ಎಂದು ಹೇಳುವ ದೇವರಾಜು ಹಾಗೂ ಇತರರ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸಿದ್ದೇನೆ.
ಈ ಸಂಬಂಧ ಜು.26 ರಂದು ವಿಧಾನಸಭೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರ ಪತ್ನಿ ಪಾರ್ವತಿ ಅವರು ಜೂ.23 ರಂದು ಪ್ರಾಧಿಕಾರದ ಆಯುಕ್ತರಿಗೆ ಬರೆದಿದ್ದಾರೆ ಎಂದು ಹೇಳುವ ಪತ್ರ ಬಿಡುಗಡೆಗೊಳಿಸಿದ್ದರು. ಈ ಪತ್ರದ ಎರಡನೇ ಪುಟದಲ್ಲಿ ಕೆಲವು ಪದಗಳ ಮೇಲೆ ವೈಟ್ನರ್ ಹಾಕಿರುವ ಬಗ್ಗೆ ಇತ್ತೀಚೆಗೆ ಮಾಧ್ಯಮದಲ್ಲಿ ಚರ್ಚೆ ನಡೆದಿದೆ. ವಿಜಯನಗರದಲ್ಲಿ ನಿವೇಶನ ಕೋರಿ ಬರೆದಿದ್ದನ್ನು ವೈಟ್ನರ್ ಹಾಕಿ ಸತ್ಯ ಮುಚ್ಚಿಟ್ಟಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಒಂದು ವೀಡಿಯೋ ತುಣುಕಿನೊಂದಿಗೆ ಟ್ವಿಟ್ ಮಾಡಿ, ದೇವನೂರು ಮೂರನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಎಂಬ ವಿಚಾರದ ಸಂಬಂಧ ವೈಟ್ನರ್ ಹಾಕಲಾಗಿದೆ ಎಂಬಂತೆ ತಿಳಿಸಿದ್ದರು.
ಈ ವೀಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ನಮ್ಮ ಬಳಿ ಇರುವ ದಾಖಲೆಗಳಲ್ಲಿನ ಪಾರ್ವತಿ ಸಹಿಗೂ, ವೀಡಿಯೋದಲ್ಲಿ ಕಂಡು ಬರುವ ದಾಖಲೆಯಲ್ಲಿನ ಪಾರ್ವತಿ ಅವರ ಸಹಿಗೂ ಸಾಕಷ್ಟು ವ್ಯಾತ್ಯಾಸವಿದೆ. ಅಂತೆಯೇ ಸಿದ್ದರಾಮಯ್ಯ ಅವರು ಬಿಡುಗಡೆಗೊಳಿಸಿರುವ ಎರಡು ಪುಟಗಳ ದಾಖಲೆಗೂ, ಬೇರೆಯವರ ಮಾಹಿತಿ ಹಕ್ಕು ಅಡಿ ಪಡೆದ ದಾಖಲೆಗೂ ವ್ಯಾತ್ಯಾಸವಿದೆ ಎಂದು ಕೃಷ್ಣ ದೂರಿದ್ದಾರೆ.
ಈ ಸಂಬಂಧ ಸುಮಾರು 9 ಅಂಶಗಳ ವ್ಯತ್ಯಾಸ ಇರುವುದನ್ನು ಕೃಷ್ಣ ಅವರು ತಮ್ಮ ದೂರಿನಲ್ಲಿ ಟಿಪ್ಪಣಿ ಮಾಡಿದ್ದಾರೆ. ಈ ಸಂಬಂಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆಡಿರುವ ಮಾತು, ಮತ್ತೊಬ್ಬರು ಸಾಕು ಬಿಡಿ ಸಾರ್, ಕ್ಲೋಸ್ ಮಾಡಿ ಎಂದು ಹೇಳಿರುವುದು ಸಿಡಿಯಲ್ಲಿ ಕೇಳಿಸುತ್ತದೆ.
ಬಹುಶಃ ನನಗಿರುವ ಅನುಮಾನದ ಪ್ರಕಾರ ಪಾರ್ವತಿ ಅವರು ಬರೆದಿರುವ ಪತ್ರದಲ್ಲಿ ವಿಜಯನಗರ ಬಡಾವಣೆಯಲ್ಲಿ ನಿವೇಶನ ಕೋರಿದ ವಿಷಯ ಮುಚ್ಚಿಟ್ಟು, ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಎಂಬ ಪದಗಳ ಮೇಲೆ ವೈಟ್ನರ್ ಹಾಕಲಾಗಿದೆ ಎಂಬಂತೆ ಬಿಂಬಿಸುವ ಸಲುವಾಗಿ, ಎಂ. ಲಕ್ಷ್ಮಣ ಮತ್ತು ಪಾರ್ವತಿಯವರು ಸಂಚು ರೂಪಿಸಿ, ಹೊಸದಾಗಿ ಸುಳ್ಳು ಪತ್ರ ಸೃಷ್ಟಿಸಿ, ನನ್ನ ದೂರರ್ಜಿಗೆ ಉತ್ತಮವಾದ ಮತ್ತು ನೈಜವಾದ ಸಾಕ್ಷ್ಯಾಧಾರವಾಗಿದ್ದ ಜೂ. 23 ರಂದು ಪಾರ್ವತಿ ಅವರು ನೀಡಿದ್ದ ಮೂಲ ಪತ್ರವನ್ನು ನಾಶಪಡಿಸಿ, ಇತ್ತೀಚೆಗೆ ಸೃಷ್ಟಿಸಿರುವ ದಾಖಲೆಯನ್ನು ಎಂಡಿಎ ಕಡತದಲ್ಲಿ ಸೇರಿಸಿ, ಈ ದಾಖಲೆ ಇಟ್ಟುಕೊಂಡು ಈ ರೀತಿ ವೀಡಿಯೋ ಮಾಡಲಾಗಿದೆ ಎಂಬ ಅನುಮಾನ ಕಾಡುತ್ತದೆ.
ಮೂಲ ದಾಖಲೆಯಲ್ಲೇ ಮಾತ್ರ ಈ ರೀತಿ ಬೆಳಕು ಹಿಡಿದಾಗ, ಅಕ್ಷರಗಳು ಕಾಣುತ್ತವೆ. ಜೆರಾಕ್ಸ್ ದಾಖಲೆಯಲ್ಲಿ ಕಾಣಿಸುವುದಿಲ್ಲ. ಆದ್ದರಿಂದ ಸುಳ್ಳು ದಾಖಲೆ ನಾಶಪಡಿಸಿ, ನೈಜ ದಾಖಲಾತಿಯ ಜಾಗದಲ್ಲಿ ಸುಳ್ಳು ದಾಖಲೆ ಸೇರಿಸಿ, ಅದೇ ನೈಜ ದಾಖಲೆ ಎಂಬಂತೆ ವೀಡಿಯೋ ಮಾಡಿರುವ ಎಂ. ಲಕ್ಷ್ಮಣ ಮತ್ತು ಪಾರ್ವತಿ ಹಾಗೂ ಇವರಿಗೆ ಮೂಲ ಕಡತವನ್ನು ನೀಡಿ, ಈ ಕೃತ್ಯಕ್ಕೆ ಸಹಕರಿಸಿರುವವರ ವಿರುದ್ಧ ಮೊಕದ್ದಮೆ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಕೋರಿದ್ದಾರೆ.