ಸಾರಾಂಶ
ಮುಡಾ ಮಾದರಿಯಲ್ಲಿಯೇ ಕಲಬುರಗಿಯಲ್ಲಿಯೂ 100 ಕೋಟಿ ರುಪಾಯಿಗೂ ಅಧಿಕ ಭ್ರಷ್ಟಾಚಾರ ನಡೆದಿದೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಕಲಬುರಗಿ: ಮುಡಾ ಮಾದರಿಯಲ್ಲಿಯೇ ಕಲಬುರಗಿಯಲ್ಲಿಯೂ 100 ಕೋಟಿ ರುಪಾಯಿಗೂ ಅಧಿಕ ಭ್ರಷ್ಟಾಚಾರ ನಡೆದಿದೆ. ಈ ಸಂಬಂಧ 2022ರಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ದೂರು ದಾಖಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಕಲಬುರಗಿ ತಾಲೂಕಿನ ಕುಸನೂರು ಗ್ರಾಮದ ಸರ್ವೇ ನಂ-88/1ರ ಜಮೀನನ್ನು ಕಾನೂನು ಬಾಹಿರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಡೆತನದ ಸಿದ್ಧಾರ್ಥ ವಿಹಾರ ದತ್ತಿ ಸಂಸ್ಥೆಗೆ ಮಂಜೂರು ಮಾಡಲಾಗಿದೆ. 19 ಎಕರೆ ಜಮೀನಿನಲ್ಲಿ ಸರ್ಕಾರದಿಂದ ಅನುದಾನ ಪಡೆದು ಕಟ್ಟಡವನ್ನೂ ನಿರ್ಮಾಣ ಮಾಡಲಾಗಿದ್ದು, 100 ಕೋಟಿ ರುಪಾಯಿಗೂ ಅಧಿಕ ಮೌಲ್ಯದ ಜಮೀನನ್ನು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ವ್ಯವಸ್ಥಿತವಾಗಿ ಕಬಳಿಸಿದ್ದಾರೆ. ಈ ಕುರಿತು 2022ರಲ್ಲಿ ಸಿದ್ದಲಿಂಗ ಸ್ವಾಮೀಜಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.