ಸಾರಾಂಶ
ಬೆಂಗಳೂರು : ಬಳ್ಳಾರಿ ರಸ್ತೆಯಿಂದ ನಾಗಶೆಟ್ಟಿಹಳ್ಳಿಯ ಬಸ್ ನಿಲ್ದಾಣದವರೆಗೆ ಸಂಜಯನಗರ ಮುಖ್ಯ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಮಾಡಲಾಗುತ್ತಿದೆ. ಹೆಬ್ಬಾಳವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವುದೇ ನನ್ನ ಗುರಿಯಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
ಅಶ್ವತ್ಥನಗರ ಮತ್ತು ನಾಗಶೆಟ್ಟಿಹಳ್ಳಿಗೆ ಸಂಪರ್ಕ ಕಲ್ಪಿಸುವ ಸಂಜಯನಗರ ಮುಖ್ಯರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಗೆ ಭಾನುವಾರ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ರಸ್ತೆಗಳು ಸುಸ್ಥಿತಿಯಲ್ಲಿದ್ದರೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವಾಗುತ್ತದೆ. ಮತ್ತೊಂದೆಡೆ ವಾಹನ ದಟ್ಟಣೆಯನ್ನೂ ತಗ್ಗಿಸಬಹುದು. ಇದರಿಂದ ಕ್ಷೇತ್ರದಲ್ಲಿ ಅಗತ್ಯವಿರುವ ರಸ್ತೆಯಲ್ಲಿ ವೈಟ್ ಟಾಪಿಂಗ್ ಮಾಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಗುತ್ತಿಗೆದಾರರಿಂದ ಕಾಮಗಾರಿಯ ವಿವರ ಪಡೆದ ಸಚಿವರು, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಸದ್ಯ ರಸ್ತೆ 30 ಅಡಿ ಅಗಲವಿದೆ. ವೈಟ್ ಟಾಪಿಂಗ್ ಕಾಮಗಾರಿ ನೆಪದಲ್ಲಿ ರಸ್ತೆಯ ವಿಸ್ತೀರ್ಣವನ್ನು ಕಡಿಮೆ ಮಾಡಬಾರದು. ಇನ್ನೂ ಪಾದಚಾರಿಗಳು ಸುಗಮವಾಗಿ ನಡೆದುಹೋಗಲು ಅವಕಾಶವಿರುವಂತೆ ಉತ್ತಮ ರೀತಿಯಲ್ಲಿ ಪಾದಚಾರಿ ಮಾರ್ಗವನ್ನು ನಿರ್ಮಿಸಬೇಕು. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಬಿಟ್ಟುಕೊಡಬೇಕು. ಕಾರಣಗಳನ್ನು ಹೇಳಿಕೊಂಡು ವಿಳಂಬ ಮಾಡಬಾರದು ಖಡಕ್ ಆಗಿ ಸೂಚಿಸಿದರು.
ನಂತರ ಸಾರ್ವಜನಿಕರ ಕುಂದು ಕೊರತೆ ಆಲಿಸಿದ ಸಚಿವರು, ಆ ಸಮಸ್ಯೆಗಳ ಪರಿಹಾರಕ್ಕೆ ತುರ್ತು ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.