ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್‌ ಮೈತ್ರಿಯಿಂದಾಗಿ ಎನ್.ಡಿ.ಎ. ಅಭ್ಯರ್ಥಿ ಮಲ್ಲೇಶಬಾಬು ಬಹುಮತಗಳಿಂದ ಆಯ್ಕೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದು ಮೈತ್ರಿಕೂಟದ ಲೆಕ್ಕಾಚಾರ. ಆದರೂ ಗೆಲುವಿಗೆ ಶ್ರಮಿಸಲು ನಿರ್ಧಾರ

 ಕೋಲಾರ : ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸಂಕಲ್ಪ ತೊಟ್ಟು ಬಿಜೆಪಿ, ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಕೋಲಾರ ಮೀಸಲು ಕ್ಷೇತ್ರದ ಮಲ್ಲೇಶ್‌ಬಾಬುರಿಗೆ ಮತ ನೀಡುವ ಮೂಲಕ ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಮನವಿ ಮಾಡಿದರು.ನಗರ ಹೊರವಲಯದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಜೆ.ಡಿ.ಎಸ್ ಮತ್ತು ಬಿಜೆಪಿ ಪಕ್ಷದ ಸಮನ್ವಯ ಸಭೆಯಲ್ಲಿ ಮಾತನಾಡಿ, ಕೋಲಾರ ಮೀಸಲು ಕ್ಷೇತ್ರದ ೮ ವಿಧಾನಸಭಾ ಕ್ಷೇತ್ರದಲ್ಲಿ ಜೆ.ಡಿ.ಎಸ್ ಮತ್ತು ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ಮಲ್ಲೇಶ್ ಬಾಬುರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಮಲ್ಲೇಶ್‌ಬಾಬು ಗೆಲ್ಲಿಸಲು ಶ್ರಮಿಸಿ

ಎಂಟು ವಿಧಾನ ಸಭಾ ಕ್ಷೇತ್ರದ ಜೆ.ಡಿ.ಎಸ್. ಪಕ್ಷದ ಮೂವರು ಶಾಸಕರು, ಜೆ.ಡಿ.ಎಸ್. ಮತ್ತು ಬಿಜೆಪಿ ಮಾಜಿ ಶಾಸಕರು ಹಾಗೂ ಕಳೆದ ಚುನಾವಣೆಯಲ್ಲಿ ಸೋತವರು, ಎರಡು ಪಕ್ಷದ ಎಲ್ಲಾ ಮುಖಂಡರು ಇಂದಿನಿಂದ ಯಾರು ವಿರಮಿಸದೆ ಏ.೨೬ರ ಸಂಜೆಯವರೆಗೆ ಶ್ರಮಿಸುವ ಮೂಲಕ ಮಲ್ಲೇಶ್‌ಬಾಬು ಅವರನ್ನು ಬಹುಮತಗಳಿಂದ ಆಯ್ಕೆಯಾಗುವಂತೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಮುನಿಸ್ವಾಮಿಗೆ ಕೃತಜ್ಞತೆ

ಎನ್.ಡಿ.ಎ. ಅಭ್ಯರ್ಥಿ ಮಲ್ಲೇಶ್ ಬಾಬು ಮಾತನಾಡಿ, ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರದಲ್ಲಿ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟು ಟಿಕೆಟ್ ಕೊಡಿಸಿದ್ದೀರಿ. ನಾನು ಬಂಗಾರಪೇಟೆ ವಿಧಾನಕ್ಷೇತ್ರದಲ್ಲಿ ೨ ಭಾರಿ ಪರಾಜೀತನಾದರೂ ಸಹ ಜೆ.ಡಿ.ಎಸ್ ವರಿಷ್ಠರು ನನ್ನ ಮೇಲಿಟ್ಟಿರುವ ವಿಶ್ವಾಸದಿಂದ ಲೋಕಸಭೆಗೆ ಟಿಕೆಟ್ ನೀಡಿದ್ದಾರೆ. ಇದಕ್ಕೆ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಅವಕಾಶ ಮಾಡಿ ಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಎನ್‌ಡಿಎ ಅಭ್ಯರ್ಥಿ ಗೆಲ್ಲುವ ವಿಶ್ವಾಸ

ಎಂಎಲ್‌ಸಿ ಇಂಚರ ಗೋವಿಂದರಾಜು ಮಾತನಾಡಿ, ಕಳೆದ ೧೯೯೬ ರಿಂದ ಈವರೆಗಿನ ಲೋಕಸಭೆಯ ಮತ್ತು ವಿಧಾನ ಸಭೆಯಲ್ಲಿನ ಜೆ.ಡಿ.ಎಸ್ ಮತ್ತು ಬಿಜೆಪಿ ಪಕ್ಷಗಳು ಪಡೆದಿರುವ ಮತಗಳ ಅಂಕಿ ಅಂಶಗಳು ವಿವರಿಸುತ್ತಾ ಎರಡು ಪಕ್ಷಗಳ ಸಮನ್ವಯತೆಯಲ್ಲಿ ಎನ್.ಡಿ.ಎ. ಅಭ್ಯರ್ಥಿಯು ಬಹುಮತಗಳಿಂದ ಆಯ್ಕೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್, ಬಂಗಾರಪೇಟೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಬಿ.ಪಿ. ವೆಂಕಟಮುನಿಯಪ್ಪ. ಶಿಡ್ಲಘಟ್ಟ ಮಾಜಿ ಶಾಸಕ ರಾಜಣ್ಣ , ಮಾಲೂರಿನ ಮಾಜಿ ಶಾಸಕ ಮಂಜುನಾಥ್‌ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮಾಜಿ ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುರೇಂದ್ರಗೌಡ, ಬಂಗಾರಪೇಟೆ ಚಂದ್ರಾರೆಡ್ಡಿ, ಕೋಚಿಮುಲ್ ನಿರ್ದೇಶಕರಾದ ಕಾಡೇನಹಳ್ಳಿ ನಾಗರಾಜ್, ಡಿ.ವಿ.ಹರೀಶ್, ಹಿರಿಯ ವಕೀಲರಾದ ಕೆ.ವಿ.ಶಂಕರಪ್ಪ. ಬೆಗ್ಲಿ ಸೂರ್ಯಪ್ರಕಾಶ್, ಎಸ್.ಬಿ.ಮುನಿವೆಂಕಟಪ್ಪ. ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ವಡಗೂರು ರಾಮು ಇದ್ದರು.