ಸಾರಾಂಶ
ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ 2019-20ರಿಂದ 2022-23ರ ಅವಧಿಯಲ್ಲಿ ನಡೆಸಲಾದ ಕಾಮಗಾರಿಗಳಲ್ಲಿ ಹಲವು ನ್ಯೂನತೆ ಕಂಡು ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ವಿಚಾರಣಾ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಶನಿವಾರ ಮುಖ್ಯಮಂತ್ರಿಗಳ ಗೃಹ ನಿವಾಸದಲ್ಲಿ ನ್ಯಾ.ನಾಗಮೋಹನ್ ದಾಸ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 8900 ಪುಟಗಳ ವರದಿ ಸಲ್ಲಿಸಿದರು.
ತನಿಖಾ ವರದಿಯಲ್ಲಿ 2019-20ರಿಂದ 2022-23ರ ಅವಧಿಯಲ್ಲಿ ಬಿಬಿಎಂಪಿಯಿಂದ ಕೈಗೊಂಡ ಕಾಮಗಾರಿಗಳ ಪೈಕಿ 761 ಪೂರ್ಣಗೊಂಡ ಕಾಮಗಾರಿಗಳನ್ನು ರ್‍ಯಾಂಡಮ್ ಪದ್ಧತಿಯಲ್ಲಿ ಆಯ್ಕೆ ಮಾಡಿಕೊಂಡು ಪರಿಶೀಲನೆ ನಡೆಸಲಾಗಿದೆ. ಕಾಮಗಾರಿಯ ಕಡತ ಪರಿಶೀಲನೆ, ಕಾಮಗಾರಿ ಸ್ಥಳ ಪರಿಶೀಲನೆ ಹಾಗೂ ಕಾಮಗಾರಿಯ ಲೆಕ್ಕ ಪರಿಶೀಲನೆ ನಡೆಸಲಾಗಿದೆ. ಪರಿಶೀಲನೆ ನಡೆಸಲಾದ ಕಾಮಗಾರಿಯಲ್ಲಿ ಹಲವು ನ್ಯೂನತೆ ಕಂಡು ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ ಸುಧಾರಣಾ ಕ್ರಮಕೈಗೊಳ್ಳಲು ಶಿಫಾರಸು ಮಾಡಲಾಗಿದೆ.
ಈ ವೇಳೆ ಸಚಿವ ಕೆ.ಎಚ್. ಮುನಿಯಪ್ಪ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಮೊದಲಾದವರಿದ್ದರು.
ತನಿಖೆ ಹಿನ್ನೆಲೆ:
ಬಿಜೆಪಿ ಸರ್ಕಾರದ ಅವಧಿಯಲ್ಲಿ (2019-20 ರಿಂದ 2022-23) ಬಿಬಿಎಂಪಿಯಿಂದ ಕೈಗೊಂಡ ಕಾಮಗಾರಿಗಳಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತನಿಖೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕೋರಿದ್ದರು. ನಂತರ ರಾಜ್ಯ ಸರ್ಕಾರ ತಜ್ಞರನ್ನು ಒಳಗೊಂಡಂತೆ ನಾಲ್ಕು ವಿಶೇಷ ತನಿಖಾ ಸಮಿತಿ ರಚನೆ ಮಾಡಿತ್ತು. ಕಾರಣಾಂತರದಿಂದ 2023ರ ಡಿಸೆಂಬರ್ 15 ರಂದು ನಾಲ್ಕು ವಿಶೇಷ ತನಿಖಾ ಸಮಿತಿಗಳನ್ನು ಹಿಂಪಡೆದು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ವಿಚಾರಣಾ ಆಯೋಗ ರಚಿಸಿ ತನಿಖೆಯ ಹೊಣೆಯನ್ನು ವರ್ಗಾಯಿಸಲಾಗಿತ್ತು. ಆಯೋಗ ಇದೀಗ ತನಿಖೆ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.