ಸಾರಾಂಶ
ನಾನು ಕೇಂದ್ರದ ಸಚಿವನಾಗಿದ್ದೇನೆ. ಇಡೀ ದೇಶದ ಸಮಸ್ಯೆ ಆಲಿಸಬೇಕು. ಹೀಗಾಗಿ ಕೆಡಿಪಿ ಸಭೆಗೆ ನಾನು ಬರಲಿಲ್ಲ. ಕೆಡಿಪಿ ಸಭೆಗೆ ಬರದಿದ್ದರೂ ಮಾಹಿತಿ ತರಿಸಿಕೊಂಡು ಲೋಪದೋಷಗಳನ್ನು ಸರಿಪಡಿಸಲಿದ್ದೇನೆ. ಚಲುವರಾಯಸ್ವಾಮಿ ಬಂದರೆ ಬರಲಿ ಅಥವಾ ಬಿಡಲಿ. ನಾನು ಮಾತ್ರ ನನ್ನ ಕೆಲಸ ಮಾಡ್ತಿನಿ ಅಷ್ಟೇ.
ಮಂಡ್ಯ : ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದು ಕೇಂದ್ರ ಸಚಿವ ಎಚ್ .ಡಿ. ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆ ಬಗ್ಗೆ ಯಾರು ಬೇಕಾದರೂ ನಿರೀಕ್ಷೆ ಇಟ್ಟುಕೊಳ್ಳಬುಹದು. ಆದರೆ, ಚುನಾವಣೆಯಲ್ಲಿ ನಾವು ಗೆಲ್ಲಬೇಕು. ಕಾರ್ಯಕರ್ತರ ಅಭಿಪ್ರಾಯ ತೆಗೆದುಕೊಂಡು ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದರು.
ಸಿ.ಪಿ.ಯೋಗೇಶ್ವರ್ ಜೆಡಿಎಸ್‌ಗೆ ಬರೋ ಬಗ್ಗೆ ನನ್ನ ಬಳಿ ಯಾವುದೇ ಚರ್ಚೆ ನಡೆದಿಲ್ಲ. ಅಲ್ಲದೇ, ನಿಖಿಲ್ ಕೂಡ ಸ್ಪರ್ಧಿಸಲ್ಲ. ಅವನ ಹೆಸರು ಯಾಕೆ ಇಲ್ಲಿ ತರುತ್ತೀರಿ. ನಿಖಿಲ್‌ಗೆ ಇನ್ನು ರಾಜಕೀಯ ಭವಿಷ್ಯ ಇದೆ. ಆತುರ ಯಾಕೆ ಎಂದು ಪ್ರಶ್ನಿಸಿದರು.
ಮಂಡ್ಯ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಗೆ ನಾನು ಬರಲು ಸಾಧ್ಯವಿಲ್ಲ. ನಾಗಮಂಗಲದಲ್ಲಿ ಈಗಾಗಲೇ ಕಾಂಗ್ರೆಸ್‌ನವರು ಅಧಿಕಾರ ಹಿಡಿದಿದ್ದಾರೆ. ಈಗಾಗಲೇ ಎಲ್ಲಾ ಪರ್ಚೆಸ್ ಮಾಡಿದ್ದಾರೆ. ಎಷ್ಟು ಕೋಟಿ ಕೊಟ್ಟು ಸದಸ್ಯರನ್ನು ಖರೀದಿಸಿದ್ದಾರೆ ಈಗ ಹೇಳಲಿ ಎಂದು ತಿರುಗೇಟು ನೀಡಿದರು.
ದಿಶಾ ಸಭೆಗೆ ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕರ ಗೈರು ವಿಚಾರವಾಗಿ ಉತ್ತರಿಸಿದ ಎಚ್ಡಿಕೆ ಅವರೆಲ್ಲಾ ತುಂಬಾ ಬ್ಯುಸಿ ಇರ್ತಾರೆ. ನಾನು ಬಂದು ನನ್ನ ಕೆಲಸ ಮಾಡಿದ್ದೇನೆ ಎಂದು ಟಾಂಗ್ ನೀಡಿದರು.
ನಾನು ಕೇಂದ್ರದ ಸಚಿವನಾಗಿದ್ದೇನೆ. ಇಡೀ ದೇಶದ ಸಮಸ್ಯೆ ಆಲಿಸಬೇಕು. ಹೀಗಾಗಿ ಕೆಡಿಪಿ ಸಭೆಗೆ ನಾನು ಬರಲಿಲ್ಲ. ಕೆಡಿಪಿ ಸಭೆಗೆ ಬರದಿದ್ದರೂ ಮಾಹಿತಿ ತರಿಸಿಕೊಂಡು ಲೋಪದೋಷಗಳನ್ನು ಸರಿಪಡಿಸಲಿದ್ದೇನೆ. ಚಲುವರಾಯಸ್ವಾಮಿ ಬಂದರೆ ಬರಲಿ ಅಥವಾ ಬಿಡಲಿ. ನಾನು ಮಾತ್ರ ನನ್ನ ಕೆಲಸ ಮಾಡ್ತಿನಿ ಅಷ್ಟೇ. ಜನ ನನಗೆ ಸರ್ಟಿಫಿಕೇಟ್ ಕೊಡುತ್ತಾರೆ ಎಂದು ಹೇಳಿದರು.
ಈ ವೇಳೆ ಶಾಸಕ ಎಚ್.ಟಿ.ಮಂಜು ಇತರರು ಇದ್ದರು.