ಸಾರಾಂಶ
ನವದೆಹಲಿ: ನರೇಂದ್ರ ಮೋದಿಯವರ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ಸಲುವಾಗಿ ಮತದಾರರು ಬಿಜೆಪಿಗೆ ಮತಹಾಕಿ ಗೆಲ್ಲಿಸಿದ್ದಾರೆ ಎಂಬುದಾಗಿ ಬಿಜೆಪಿ ಬಣ್ಣಿಸಿದೆ.
18ನೇ ಲೋಕಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕುರಿತು ಅಮಿತ್ ಶಾ ಟ್ವೀಟ್ ಮಾಡಿ, ‘ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಜನರು ಸ್ಪಷ್ಟ ಬಹುಮತ ನೀಡಿರುವುದು ಅವರಿಗೆ ಮೋದಿಯ ಮೇಲಿರುವ ಷರತ್ತುರಹಿತ ನಂಬಿಕೆಯನ್ನು ಬಿಂಬಿಸುತ್ತದೆ. ಮೂರನೇ ಅವಧಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಮತ್ತಷ್ಟು ಅಭಿವೃದ್ಧಿ ಕಾಣುವುದರೊಂದಿಗೆ ನವಭಾರತವಾಗಿ ಹೊರಹೊಮ್ಮಲಿದೆ’ ಎಂದು ತಿಳಿಸಿದ್ದಾರೆ.
ಇದೇ ವೇಳೆ ರಾಜನಾಥ್ ಸಿಂಗ್ ಕೂಡ ಅಭಿನಂದಿಸಿದ್ದು, ‘ಎನ್‌ಡಿಎ ಮೈತ್ರಿಕೂಟಕ್ಕೆ ಗೆಲುವು ಲಭಿಸಿರುವುದು ಪ್ರಧಾನಿ ಮೋದಿ ರೂಪಿಸಿದ ನೀತಿ ನಿಯಮಗಳಿಗೆ ಸಂದ ಜಯವಾಗಿದ್ದು, ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಮತ್ತಷ್ಟು ಅಭಿವೃದ್ಧಿ ಮಾಡಲಿದ್ದಾರೆ’ ಎಂದರು.
ಹಾಗೆಯೇ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಲಭಿಸಲು ಕಾರಣಕರ್ತರಾದ ಮೈತ್ರಿಪಕ್ಷಗಳ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ.