ಸಾರಾಂಶ
ಬೆಂಗಳೂರು : ಸೂಟು ಬೂಟು ಹಾಕಿಕೊಂಡು ಬಂದವರನ್ನು ಕೂರಿಸಿ ಮಾತನಾಡಿಸಿ, ಮಾಸಲು ಬಟ್ಟೆಯ ಬಡವರನ್ನು ನಿರ್ಲಕ್ಷಿಸುವುದು ಮಾನಸಿಕ ಗುಲಾಮಗಿರಿಯ ದ್ಯೋತಕವಾಗಿದ್ದು, ಅದನ್ನು ಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಕೆಎಎಸ್ ಅಧಿಕಾರಿಗಳ ಸಂಘ ಹೊರತಂದಿರುವ ಕ್ಯಾಲೆಂಡರ್ ಮತ್ತು ದಿನಚರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಎರಡು ಹೊತ್ತಿನ ಊಟಕ್ಕೂ ಶ್ರಮಿಸುತ್ತಿರುವ ಕಟ್ಟ ಕಡೆಯ ಜನರ ಪರವಾಗಿ ಅಧಿಕಾರಿಗಳು ಬದ್ಧತೆ ತೋರಿಸಬೇಕು. ನಮಗೆ ಸಿಕ್ಕಿರುವ ವಿದ್ಯೆ ಮತ್ತು ಅವಕಾಶಗಳ ಹಿಂದೆ ಸಮಾಜದ ಋಣ ಇದ್ದು, ಅದನ್ನು ತೀರಿಸುವುದು ನಮ್ಮ ಜವಾಬ್ದಾರಿ. ಅಂಬೇಡ್ಕರ್ ಅವರಿಂದ ಬುದ್ದ, ಬಸವ, ಗಾಂಧಿ ಎಲ್ಲರೂ ಸಮಾಜದ ಸಮಾನತೆಗಾಗಿ, ತಾರತಮ್ಯ ಸಮಾಜದ ಬದಲಾವಣೆಗಾಗಿ ಶ್ರಮಿಸಿದರು. ಆದರೂ ಇನ್ನೂ ಅಸಮಾನತೆ ಹೋಗಿಲ್ಲ. ಎಲ್ಲಿಯವರೆಗೂ ಜಾತಿ, ವರ್ಗ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೂ ಅಸಮಾನತೆ ಇರುತ್ತದೆ ಎಂದು ಹೇಳಿದರು.
ಕೆಎಎಸ್ ಅಧಿಕಾರಿಗಳ ಸಂಘ ಮುಂದಿಟ್ಟಿರುವ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕೆಎಎಸ್ ಅಧಿಕಾರಿಗಳ ಜೇಷ್ಠತಾ ಪಟ್ಟಿ ಸಿದ್ಧವಿದ್ದು, ಮುಂದಿನ 10 ದಿನದಲ್ಲಿ ಬಿಡುಗಡೆಯಾಗಲಿದೆ. ಅಲ್ಲದೇ, ಕೆಎಎಸ್ ಅಧಿಕಾರಿಗಳ ಬಡ್ತಿ ಬೇಡಿಕೆಯನ್ನೂ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಶಿವಸ್ವಾಮಿ ಇತರರಿದ್ದರು.