ಸಾರಾಂಶ
ಬೆಂಗಳೂರು : ಲಕ್ಷಾಂತರ ಜನರ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯ ಹೇಗೆ ಕಾಪಾಡಿಕೊಳ್ಳಬೇಕು. ಸ್ವತಂತ್ರ ಭಾರತವನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಇಂದಿನ ಯುವಜನತೆ ಯೋಚನೆ ಮಾಡುತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಬೇಸರ ವ್ಯಕ್ತಪಡಿಸಿದರು.
ಶನಿವಾರ ನಗರದ ಪುರಭವನದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಟ್ರಸ್ಟ್, ಸನ್‌ಸ್ಟಾರ್ ಪಬ್ಲಿಷರ್ಸ್ ವತಿಯಿಂದ ಕೆ.ಈ. ರಾಧಾಕೃಷ್ಣ ಅವರು ಅನುವಾದಿಸಿರುವ ನೇತಾಜಿ ಸುಭಾಷ್‌ಚಂದ್ರ ಬೋಸರ ಒಂದು ಅಪೂರ್ಣ ಆತ್ಮಕಥೆ, ಭಾರತೀಯ ಹೋರಾಟ, ಅಸಾಮಾನ್ಯ ದಿನಚರಿ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವ ಗುರಿಯೊಂದಿಗೆ ಹೋರಾಟಕ್ಕೆ ಇಳಿದಿದ್ದ ಸುಭಾಷ್‌ಚಂದ್ರ ಬೋಸ್ ಮತ್ತು ಮಹಾತ್ಮಗಾಂಧಿಯವರ ಸಿದ್ಧಾಂತ ಹಾಗೂ ದಾರಿ ವಿರುದ್ಧ ದಿಕ್ಕಿನಲ್ಲಿದ್ದವು. ನೇತಾಜಿಯವರು ಅವಸರದ ದಾರಿ ಹಿಡಿದಿದ್ದರೆ, ಗಾಂಧೀಜಿ ಶಾಂತಚಿತ್ತತೆಯ ಸಮಾಧಾನದ ದೂರದೃಷ್ಟಿಯುಳ್ಳ ದಾರಿಯಲ್ಲಿ ಸಾಗಿದ್ದರು. ತತ್‌ಕ್ಷಣ ಸ್ವಾತಂತ್ರ್ಯ ಬೇಕು. ಅದಕ್ಕಾಗಿ ಕಾಯಲು ಸಾಧ್ಯವಿಲ್ಲ ಎನ್ನುವ ಮನಸ್ಥಿತಿಯಿಂದ ನೇತಾಜಿ ಹೋರಾಟಕ್ಕೆ ಇಳಿದಿದ್ದರು. ದೇಶಕ್ಕೆ ಸ್ವಾತಂತ್ರ್ಯ ಗಳಿಸಲು ಏನು ಬೇಕಾದರು ತ್ಯಾಗ ಮಾಡುತ್ತೇನೆ. ಬ್ರಿಟೀಷರನ್ನು ದೇಶದಿಂದ ತೊಲಗಿಸಿ, ದೇಶಕ್ಕೆ ಎಷ್ಟು ಬೇಗ ಸ್ವಾತಂತ್ರ್ಯವನ್ನು ತಂದುಕೊಡಬೇಕು ಎಂಬ ಉದ್ದೇಶದ ಇಚ್ಛಾಶಕ್ತಿಯನ್ನು ನೇತಾಜಿ ಅವರು ಹೊಂದಿದ್ದರು ಎಂದರು.
ನೇತಾಜಿ ಅವರು ಉದಾತ್ತ ಆರ್ಥಿಕ ತಜ್ಞರಾಗಿದ್ದರು. ಅವರು ತೆಗೆದುಕೊಂಡ ತೀರ್ಮಾನಗಳು ಭಾರತ ಆರ್ಥಿಕ ವ್ಯವಸ್ಥೆಯನ್ನು ಇಂದು ಗಟ್ಟಿಗೊಳಿಸಿದೆ. ಇಂದು ನಾವು ಭಾರತ ಆರ್ಥಿಕವಾಗಿ ಸದೃಢವಾಗಿದೆ ಎಂಬ ಕೆಚ್ಚೆದೆಯ ಮಾತುಗಳನ್ನಾಡುತ್ತೇವೆ ಎಂದರೆ, ಅದರ ಬುನಾದಿ ನೇತಾಜಿ ಅವರು ಆಗಿದ್ದರು ಎಂದು ಹೇಳಿದರು.
ಶಿಕ್ಷಣ ನಮ್ಮನ್ನು ಸಾಕಷ್ಟು ಬದಲಾಯಿಸಿದೆ. ಭಾರತ ಬಲಿಷ್ಠ ಭಾರತವಾಗಿದ್ದರೆ, ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಶಕ್ತಿಯುತವಾಗಿದ್ದರೆ ಅದು ಶಿಕ್ಷಣದಿಂದ ಸಾಧ್ಯವಾಗಿದೆ. ಪ್ರಪಂಚದ ಯಾವುದೇ ಭಾಗಕ್ಕೆ ಹೋದರು ಭಾರತದ ಇಂಜಿನಿಯರ್, ಡಾಕ್ಟರ್, ಪ್ರಾಧ್ಯಾಪಕರಿದ್ದಾರೆ. ಈ ಸಾಧನೆ ರಾಜಕೀಯ ಪಕ್ಷಗಳಿಂದ ಸಾಧ್ಯವಾಗಿಲ್ಲ. ಜನರಿಂದ ಸಾಧ್ಯವಾಗಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಸುಮಂತ್ರ ಬೋಸ್, ಭಾರತೀಯ ಸೇನೆಯ ನಿವೃತ್ತ ದಂಡ ನಾಯಕ ರಮೇಶ್ ಹಲಗಲಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಟ್ರಸ್ಟ್ ಅಧ್ಯಕ್ಷ ಎಂ. ರಾಜ್‌ಕುಮಾರ್, ಜಿ.ಆರ್. ಶಿವಶಂಕರ್, ಸ್ವಾತಂತ್ರ್ಯ ಹೋರಾಟಗಾರ ಸುಂದರ್ ಶಿವರಾಜ್ , ಸಿಎಂ ಸುಬ್ಬಯ್ಯ, ಗುರುಶಾಸ್ತ್ರೀ ಮಠ ಸೇರಿದಂತೆ ಮತ್ತಿತರರು ಇದ್ದರು.