ರುದ್ರಣ್ಣನನ್ನು ಯಾವತ್ತೂ ಸಂಪರ್ಕಿಸಿಲ್ಲ: ಹೆಬ್ಬಾಳ್ಕರ್‌

| Published : Nov 06 2024, 11:46 PM IST

ರುದ್ರಣ್ಣನನ್ನು ಯಾವತ್ತೂ ಸಂಪರ್ಕಿಸಿಲ್ಲ: ಹೆಬ್ಬಾಳ್ಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ರುದ್ರಣ್ಣ ಅವರ ಸಾವಿನ ಬಗ್ಗೆ ಮಾಧ್ಯಮಗಳಿಂದ ನಾನು ತಿಳಿದಿದ್ದೇನೆ. ಈ ಬಗ್ಗೆ ನನಗೂ ಹೆಚ್ಚೇನೂ ಮಾಹಿತಿ ಇಲ್ಲ.ಅವರನ್ನು ನಾನು ಯಾವತ್ತಿಗೂ ಭೇಟಿಯಾಗಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ಸ್ಪಷ್ಟನೆ ನೀಡಿದ್ದಾರೆ.

ಬೆಳಗಾವಿ: ಎಸ್‌ಡಿಎ ರುದ್ರಣ್ಣ ಅವರ ಸಾವಿನ ಬಗ್ಗೆ ಮಾಧ್ಯಮಗಳಿಂದ ನಾನು ತಿಳಿದಿದ್ದೇನೆ. ಈ ಬಗ್ಗೆ ನನಗೂ ಹೆಚ್ಚೇನೂ ಮಾಹಿತಿ ಇಲ್ಲ.ಅವರನ್ನು ನಾನು ಯಾವತ್ತಿಗೂ ಭೇಟಿಯಾಗಿಲ್ಲ. ನನ್ನನ್ನು ಭೇಟಿಯಾಗಲು ನಮ್ಮ ಮನೆಗೆ ಬಂದಿರುವ ವಿಚಾರ ನನಗೆ ಗೊತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಚೇರಿಯಲ್ಲಿ ಸಾವಿರಾರು ಜನ ಭೇಟಿಗೆ ಬರುತ್ತಾರೆ. ಸಚಿವರು ಎಂದ ಮೇಲೆ 10-15 ಜನ ಆಪ್ತ ಕಾರ್ಯದರ್ಶಿಗಳಿರುವುದು ಸ್ವಾಭಾವಿಕ. ಬೆಳಗಾವಿಯ ತಹಸೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ರುದ್ರಣ್ಣ ಯಡವಣ್ಣವರ ಸಾವಿನ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ಆಗಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ರುದ್ರಣ್ಣವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದರು.

ಬಿಜೆಪಿಯವರಿಗೆ ಪ್ರತಿಭಟನೆ ಮಾಡಬೇಡಿ ಎಂದು ಹೇಳಲು ಆಗುವುದಿಲ್ಲ. ಆದರೆ, ಈ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಬಾರದು. ವ್ಯರ್ಥ ಆರೋಪ ಮಾಡುವುದು ಸರಿಯಲ್ಲ. ಈ ಹಿಂದಿನ ಈಶ್ವರಪ್ಪ ಅವರ ಪ್ರಕರಣಕ್ಕೂ ಮತ್ತು ಈ ಪ್ರಕರಣಕ್ಕೂ ಬಹಳ ವ್ಯತ್ಯಾಸವಿದೆ ಎಂದರು.