ಚನ್ನಪಟ್ಟಣದಲ್ಲಿ ನಿಖಿಲ್‌, ಶಿಗ್ಗಾಂವಿಯಲ್ಲಿ ಭರತ್‌, ಸಂಡೂರಲ್ಲಿ ತುಕಾರಾಂ ಪತ್ನಿಗೆ ವಿಜಯಮಾಲೆ?

| Published : Nov 21 2024, 05:15 AM IST

bjp congress jds
ಚನ್ನಪಟ್ಟಣದಲ್ಲಿ ನಿಖಿಲ್‌, ಶಿಗ್ಗಾಂವಿಯಲ್ಲಿ ಭರತ್‌, ಸಂಡೂರಲ್ಲಿ ತುಕಾರಾಂ ಪತ್ನಿಗೆ ವಿಜಯಮಾಲೆ?
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ವಿಧಾನಸಭೆಯ 3 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ 1 ಹಾಗೂ ಎನ್‌ಡಿಎ 2 ಕ್ಷೇತ್ರಗಳಲ್ಲಿ ಜಯಿಸಲಿವೆ ಎಂದು ‘ಪಿ-ಮಾರ್ಕ್‌’ ಚುನಾವಣೋತ್ತರ ಸಮೀಕ್ಷೆ ಹೇಳಿದೆ.

ನವದೆಹಲಿ: ಕರ್ನಾಟಕ ವಿಧಾನಸಭೆಯ 3 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ 1 ಹಾಗೂ ಎನ್‌ಡಿಎ 2 ಕ್ಷೇತ್ರಗಳಲ್ಲಿ ಜಯಿಸಲಿವೆ ಎಂದು ‘ಪಿ-ಮಾರ್ಕ್‌’ ಚುನಾವಣೋತ್ತರ ಸಮೀಕ್ಷೆ ಹೇಳಿದೆ.

ನ.23ರಂದು ಫಲಿತಾಂಶ ಪ್ರಕಟವಾಗಲಿದ್ದು, ಅದಕ್ಕೂ ಮುನ್ನ ಎಕ್ಸಿಟ್‌ ಪೋಲ್‌ ಭವಿಷ್ಯ ನುಡಿಯಲಾಗಿದೆ. ಇಲ್ಲಿ ಈ ಹಿಂದೆ ಕಾಂಗ್ರೆಸ್‌ ಹಿಡಿತದಲ್ಲಿದ್ದ ಸಂಡೂರು ಪುನಃ ಕಾಂಗ್ರೆಸ್ ಪಾಲಾಗಲಿದೆ ಎಂದು ತಿಳಿಸಲಾಗಿದೆ.

ಇನ್ನು ಶಿಗ್ಗಾಂವಿ ಕ್ಷೇತ್ರ ಹಾಗೂ ಚನ್ನಪಟ್ಟಣ ಕ್ಷೇತ್ರಗಳು ಕ್ರಮವಾಗಿ ಬಿಜೆಪಿ ಹಾಗೂ ಬಿಜೆಪಿ ಮಿತ್ರಪಕ್ಷವಾದ ಜೆಡಿಎಸ್‌ ಪಾಲಾಗಲಿವೆ ಎಂದು ಅಂದಾಜು ಮಾಡಲಾಗಿದೆ. ಈ ಎರಡೂ ಕ್ಷೇತ್ರಗಳು ಬಿಜೆಪಿ ಹಾಗೂ ಜೆಡಿಎಸ್‌ ಹಿಡಿತದಲ್ಲಿದ್ದವು.

ಒಟ್ಟಾರೆ ಈ 3 ಕ್ಷೇತ್ರಗಳ ಚುನಾವಣೆಯಲ್ಲಿ ಯಾರಿಗೂ ನಷ್ಟ ಆಗಲ್ಲ, ಯಾರಿಗೂ ಲಾಭ ಆಗಲ್ಲ. ಅವರವರ ಸ್ಥಾನವನ್ನು ಅವರು ಉಳಿಸಿಕೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.

ಶಿಗ್ಗಾಂವಿಯಲ್ಲಿ ಭರತ್‌ ಬೊಮ್ಮಾಯಿ ಹಾಗೂ ಕಾಂಗ್ರೆಸ್‌ನ ಯಾಸೀರ್‌ ಪಠಾಣ್‌ ನಡುವೆ ಸ್ಫರ್ಧೆ ಇದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನ ಸಿ.ಪಿ.ಯೋಗೇಶ್ವರ್ ಹಾಗೂ ಜೆಡಿಎಸ್‌ನ ನಿಖಿಲ್‌ ಕುಮಾರಸ್ವಾಮಿ ಪರಸ್ಪರ ತೊಡೆ ತಟ್ಟಿದ್ದಾರೆ. ಸಂಡೂರಿನಲ್ಲಿ ಅನ್ನಪೂರ್ಣಾ ತುಕಾರಾಂ ಕಾಂಗ್ರೆಸ್‌ ಅಭ್ಯರ್ಥಿ ಆಗಿದ್ದರೆ, ಬಂಗಾರು ಹನುಮಂತು ಬಿಜೆಪಿ ಅಭ್ಯರ್ಥಿ.

ಶಿಗ್ಗಾಂವಿ ಕ್ಷೇತ್ರ ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರು ಹಾಗೂ ಚನ್ನಪಟ್ಟಣವು ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಅವರು ಲೋಕಸಭೆ ಆಯ್ಕೆ ಆಗಿದ್ದರಿಂದ ತೆರವಾಗಿತ್ತು. ಅಂತೆಯೇ ಸಂಡೂರು ಕ್ಷೇತ್ರ ಕಾಂಗ್ರೆಸ್‌ನ ತುಕಾರಾಂ ಅವರು ಲೋಕಸಭೆ ಪ್ರವೇಶಿಸಿದ್ದರಿಂದ ಖಾಲಿ ಆಗಿತ್ತು.

ಈ ಎಲ್ಲ ಕ್ಷೇತ್ರಗಳಿಗೆ ನ.13ರಂದು ಮತದಾನ ನಡೆದಿತ್ತು.