ಸಾರಾಂಶ
ಕೋಲಾರ : ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಸಂಪೂರ್ಣ ನಿಷ್ಕ್ರಿಯಯವಾಗಿದೆ. ನನ್ನ 40 ವರ್ಷದ ರಾಜಕೀಯದಲ್ಲಿ ಈ ವರೆಗೂ ಇಷ್ಟೊಂದು ಭ್ರಷ್ಟ ಸರ್ಕಾರವನ್ನು ನೋಡಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದುವರೆ ವರ್ಷವಾಗಿದ್ದರೂ ನನ್ನ ಕ್ಷೇತ್ರಕ್ಕೆ ನಯಾಪೈಸೆ ಅನುದಾನ ನೀಡಿಲ್ಲ. ಇಂತಹ ದುಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಶ್ರೀನಿವಾಸಪುರ ಶಾಸಕ ಜಿ.ಎಸ್.ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ಕುಂಬಾರಹಳ್ಳಿ ರತ್ನ ಕನ್ವೇಕ್ಷನ್ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದ ಎಂ.ಮಲ್ಲೇಶ್ ಬಾಬುರಿಗೆ ಅಭಿನಂದನೆ ಹಾಗೂ ಕೃತಜ್ಙತಾ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಾಜ್ಯದ ಅಭಿವೃದ್ಧಿ ಶೂನ್ಯ
ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಿಂದ ಅಭಿವೃದ್ಧಿ ಶೂನ್ಯ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಿಂದ ನೀರಾವರಿ ಯೋಜನೆ, ಮೂಲಭೂತ ಸೌಲಭ್ಯಗಳು ಹಾಗೂ ರಸ್ತೆ ಸೇರಿದಂತೆ ಯಾವುದೇ ಒಂದೇ ಒಂದು ಅಭಿವೃದ್ದಿ ಕಾರ್ಯಕ್ರಮಗಳನ್ನು ನೀಡುವುದನ್ನು ಬಿಟ್ಟು ಭ್ರಷ್ಟಾಚಾರದಲ್ಲಿ ತುಂಬಿ ತುಳುಕುತ್ತಿದೆ ಎಂದರು.
ಎಂಎಲ್ಸಿ ಇಂಚರಾ ಗೋವಿಂದರಾಜು ಮಾತನಾಡಿ, ಕೋಲಾರ ಲೋಕಸಬಾ ಕ್ಷೇತ್ರದಲ್ಲಿ ೩೦ ವರ್ಷಗಳ ನಂತರ ಜೆಡಿಎಸ್ ಗೆಲ್ಲುವ ಮೂಲಕ ಎಂ.ಮಲ್ಲೇಶ್ ಬಾಬು ಸಂಸದರಾಗಿ ಆಯ್ಕೆಯಾಗಿದ್ದಾರೆ, ೩೦ ವರ್ಷದಿಂದ ನಾವು ಸೋತಿದ್ದು ಯಾಕೆ ಅನ್ನೋದು ಎಲ್ಲರಿಗೂ ತಿಳಿದ ವಿಚಾರ ಇದನ್ನ ಅರಿತುಕೊಂಡು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಟರು ಒಗ್ಗಟ್ಟಾಗಿ ಚುನಾವಣೆ ನಡೆಸಿದರೆ ಹೊಂದಾಣಿಕೆಯಲ್ಲಿ ಯಶಸ್ಸು ಕಾಣಬಹುದು ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ಬಿಜೆಪಿ ರಾಷ್ಟ್ರೀಯ ಎಸ್ಸಿ ಮೋರ್ಚಾ ಸಮಿತಿ ಸದಸ್ಯ ವೆಂಕಟೇಶ್ ಮೌರ್ಯ, ಜೆಡಿಎಸ್ ಕಾರ್ಯಾಧ್ಯಕ್ಷ ನಟರಾಜ್, ಟಿಎಪಿಸಿಎಂ ಅಧ್ಯಕ್ಷ ವಿ.ರಾಮು, ಜೆಡಿಎಸ್ ತಾಲೂಕು ಅಧ್ಯಕ್ಷ ಬಾಬು ಮೌನಿ, ಬಿಜೆಪಿ ತಾಲೂಕು ಅಧ್ಯಕ್ಷ ರಾಮಚಂದ್ರ, ಮುಖಂಡರಾದ ಬೆಗ್ಲಿ ಪ್ರಕಾಶ್, ಮಮತಮ್ಮ, ರಾಜೇಶ್ ಸಿಂಗ್, ಮಾಗೇರಿ ನಾರಾಯಣಸ್ವಾಮಿ, ಸತ್ಯನಾರಾಯಣ, ವಿಶ್ವನಾಥ್, ರಾಜು, ಶ್ರೀನಿವಾಸಪ್ಪ, ಗಾಯಿತ್ರಿ, ಮುತ್ತಪ್ಪ, ರತ್ನಮ್ಮ ಇದ್ದರು.