ಸಾರಾಂಶ
ಜಾತಿಗಣತಿ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ತುಳಿತಕ್ಕೆ ಒಳಗಾದವರಿಗೆ ಶಕ್ತಿ ತುಂಬಿ, ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಮಂಗಳೂರು : ಜಾತಿಗಣತಿ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ತುಳಿತಕ್ಕೆ ಒಳಗಾದವರಿಗೆ ಶಕ್ತಿ ತುಂಬಿ, ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಭಾನುವಾರ ಮಂಜುನಾಥನ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಾತಿಗಣತಿಗೆ ಕೆಲ ಸಮುದಾಯಗಳ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಎಲ್ಲ ಸಮುದಾಯಗಳನ್ನು ಸರಿಸಮನಾಗಿ ತೆಗೆದುಕೊಂಡು ಹೋಗಲು ಬದ್ಧವಾಗಿದೆ. ಎಲ್ಲರಿಗೂ ನ್ಯಾಯ ಒದಗಿಸುವ ಉದ್ದೇಶವಿದೆ. ಯಾರಿಗಾದರೂ ಅನ್ಯಾಯ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ತುಳಿತಕ್ಕೆ ಒಳಗಾದವರಿಗೆ ಶಕ್ತಿ ತುಂಬುವುದು ಸರ್ಕಾರದ ಪ್ರಮುಖ ಉದ್ದೇಶ. ಜೈನರು, ಒಕ್ಕಲಿಗರು, ಲಿಂಗಾಯತರು ಸೇರಿದಂತೆ ಎಲ್ಲ ಸಮುದಾಯದಲ್ಲೂ ಬಡವರಿದ್ದಾರೆ. ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು ಎಂದರು.
ವರದಿಯ ಕುರಿತು ಈಗಷ್ಟೇ ಚರ್ಚೆ ಆರಂಭಿಸಿದ್ದೇವೆ. ಕೆಲವರು ಸಲಹೆ ನೀಡುತ್ತಿದ್ದಾರೆ. ಈ ಸಮೀಕ್ಷೆ ವೇಳೆ ಶೇ.90ರಷ್ಟು ಜನರಿಂದ ಮಾಹಿತಿ ಪಡೆಯಲಾಗಿದೆ. ಈ ವಿಚಾರದಲ್ಲಿ ಯಾವುದೇ ಆತುರದ ತೀರ್ಮಾನವಿಲ್ಲ ಎಂದು ಸ್ಪಷ್ಟಪಡಿಸಿದರು.
‘ಸರ್ಕಾರದ ನಡೆ ಕಾರ್ಯಕರ್ತರ ಕಡೆ’ ಸಮಾವೇಶ:
ಬಳಿಕ, ಗುರುವಾಯನಕೆರೆಯಲ್ಲಿ ನಡೆದ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಸ್ಪಷ್ಟವಾದ ಬಹುಮತದೊಂದಿಗೆ ಗೆಲುವು ಪಡೆಯಲಿದೆ. ತುಳುನಾಡಿನಿಂದ ಕನಿಷ್ಟ ಹತ್ತು ಮಂದಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಜನರ ಬದುಕನ್ನು ಕಟ್ಟುವ ಕಾರ್ಯ ಮಾಡಿದೆ. ಆದರೆ, ಬಿಜೆಪಿ ಜನರ ಭಾವನೆಗಳೊಂದಿಗೆ ಆಟವಾಡುವ ಕಾರ್ಯ ಮಾಡುತ್ತಿದೆ. ಜನರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅಧಿಕಾರದಲ್ಲಿ ಯಾರೂ ಶಾಶ್ವತವಲ್ಲ, ಆದರೆ, ಜನರ ಹೃದಯ ಗೆಲ್ಲುವ ಕಾರ್ಯ ಮಾಡೋಣ ಎಂದರು.
ಧರ್ಮಸ್ಥಳದಲ್ಲಿ ಕಲ್ಯಾಣ ಮಂಟಪಗಳ
ಸಮುಚ್ಚಯ ಉದ್ಘಾಟಿಸಿದ ಡಿಸಿಎಂ
ಸಂಜೆ ಧರ್ಮಸ್ಥಳದಲ್ಲಿ ಶ್ರೀ ಉಮಾಮಹೇಶ್ವರ, ಶ್ರೀ ಶಿವಪಾರ್ವತಿ ಮತ್ತು ಶ್ರೀ ಗೌರೀಶಂಕರ ಎಂಬ ಮೂರು ನೂತನ ಕಲ್ಯಾಣ ಮಂಟಪಗಳ ಸಮುಚ್ಚಯವನ್ನು ಅವರು ಉದ್ಘಾಟಿಸಿದರು. ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ‘ಮಾತು ಬಿಡ ಮಂಜುನಾಥ’ ಎಂಬ ಮಾತು ಚಿರಪರಿಚಿತವಾಗಿದೆ. ನಾನು ರಾಜಕೀಯದಲ್ಲಿ ವಿವಿಧ ಹುದ್ದೆಗೆ ಏರಿದರೂ ಇಲ್ಲಿಗೆ ಮಂಜುನಾಥನ ಭಕ್ತನಾಗಿ ಬರುತ್ತೇನೆ ಎಂದು ಹೇಳಿದರು.
ಹೆಗ್ಗಡೆಯವರು ಜೈನರು, ಆದರೆ, ದೇವಸ್ಥಾನ ಹಿಂದೂ ದೇವಸ್ಥಾನ ಎಂದು ಟೀಕಿಸುವವರನ್ನು ಖಂಡಿಸಿದ ಡಿಕೆಶಿ, ಹೆಗ್ಗಡೆಯವರು ಇದಕ್ಕೆ ಅಂಜಬೇಕಾಗಿಲ್ಲ, ಅಳುಕಬೇಕಾಗಿಲ್ಲ. ನಿಮ್ಮ ಜೊತೆ ನಾವಿದ್ದೇವೆ. ತಮ್ಮ ಹಾಗೂ ಕ್ಷೇತ್ರ ರಕ್ಷಣೆಗೆ ನಾವೆಲ್ಲ ಸಿದ್ಧ. ಟೀಕೆಗಳು ತಾತ್ಕಾಲಿಕವಾಗಿದ್ದು, ಅಲ್ಪಕಾಲದಲ್ಲಿ ಸಾಯುತ್ತವೆ. ನಾವು ಮಾಡುವ ಸೇವಾಕಾರ್ಯಗಳು ಶಾಶ್ವತವಾಗಿರುತ್ತವೆ ಎಂದು ಅಭಿಪ್ರಾಯಪಟ್ಟರು.