ಸಾರಾಂಶ
ಪ್ರಧಾನಿ ನರೇಂದ್ರ ಮೋದಿ, ನಾನು ಜೀವಂತ ಇರುವವರೆಗೂ ಒಬಿಸಿ, ಎಸ್‌ಸಿ, ಎಸ್ಟಿ ಮೀಸಲು ಕಸಿದು ಅದನ್ನು ಧರ್ಮಾಧಾರಿತವಾಗಿ ಮುಸ್ಲಿಮರಿಗೆ ನೀಡಲು ಬಿಡಲ್ಲ ಎಂದು ಗುಡುಗಿದ್ದಾರೆ.
ಹೈದರಾಬಾದ್: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಒಬಿಸಿ ಕೋಟಾದಲ್ಲೇ ಮುಸ್ಲಿಮರಿಗೆ ಮೀಸಲು ನೀಡಿದ ವಿಷಯದ ಕುರಿತ ತಮ್ಮ ವಾಗ್ದಾಳಿ ಮತ್ತಷ್ಟು ಹರಿತಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ, ನಾನು ಜೀವಂತ ಇರುವವರೆಗೂ ಒಬಿಸಿ, ಎಸ್‌ಸಿ, ಎಸ್ಟಿ ಮೀಸಲು ಕಸಿದು ಅದನ್ನು ಧರ್ಮಾಧಾರಿತವಾಗಿ ಮುಸ್ಲಿಮರಿಗೆ ನೀಡಲು ಬಿಡಲ್ಲ ಎಂದು ಗುಡುಗಿದ್ದಾರೆ.
ಈ ಮೂಲಕ ಸತತ 8ನೇ ದಿನವೂ ಕಾಂಗ್ರೆಸ್ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ.ಮಂಗಳವಾರ ತೆಲಂಗಾಣದ ಮೇದಕ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಮಾಡಿದ ಪ್ರಧಾನಿ ಮೋದಿ, ‘ಬಿಜೆಪಿಯು ಜಾತಿ ಆಧಾರಿತ ಮೀಸಲನ್ನು ಸಾರ್ವಕಾಲಿಕವಾಗಿ ವಿರೋಧಿಸುತ್ತದೆ. ಈ ಹಿನ್ನೆಲೆಯಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳಿಗೆ ಅನ್ಯಾಯ ಮಾಡಿ ಜಾತಿ ಆಧಾರಿತವಾಗಿ ಮುಸ್ಲಿಮರಿಗೆ ಮೀಸಲು ದೊರೆಯಲು ನಾನು ಜೀವಂತ ಇರುವವರೆಗೂ ಬಿಡುವುದಿಲ್ಲ’ ಎಂದು ಅಬ್ಬರಿಸಿದರು.
ಇದೇ ವೇಳೆ ಎಲ್ಲೆಲ್ಲಿ ಎಂದೆಂದು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆಯೋ ಅಲ್ಲೆಲ್ಲಾ ಕಾಂಗ್ರೆಸ್ ಅನ್ನು 5 ಚಿಹ್ನೆಗಳ ಮೂಲಕ ಗುರುತಿಸಬಹುದು. ಅವುಗಳೆಂದರೆ ಸುಳ್ಳು ಭರವಸೆಗಳು; ವೋಟ್ ಬ್ಯಾಂಕ್ ರಾಜಕೀಯ; ಮಾಫಿಯಾ ಮತ್ತು ಕ್ರಿಮಿನಲ್‌ಗಳಿಗೆ ಬೆಂಬಲ; ವಂಶಪಾರಂಪರ್ಯ ರಾಜಕೀಯ ಮತ್ತು ಭ್ರಷ್ಟಾಚಾರ ಎಂದು ಮೋದಿ ಆರೋಪಿಸಿದರು.