ಸಾರಾಂಶ
ಚಾಮರಾಜನಗರ : ಬಜೆಟ್‌ನಲ್ಲಿ ಘೋಷಿಸಿರುವ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇಲ್ಲ. ನಮ್ಮ ಗ್ಯಾರಂಟಿ ಯೋಜನೆಗಳು ನಮ್ಮ ಸರ್ಕಾರ ಇರುವವರೆಗೂ ಜಾರಿಯಲ್ಲಿರುತ್ತವೆ. ಯಾವುದೇ ಕಾರಣಕ್ಕೂ ಅವುಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತದಾರರಿಗೆ ಆಯೋಜಿಸಿದ್ದ ಕೃತಜ್ಞತಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಭರ್ಜರಿ ಗೆಲುವು ತಂದು ಕೊಟ್ಟ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವು ನಿರೀಕ್ಷೆಯಷ್ಟು ಸ್ಧಾನ ಗೆದ್ದಿದ್ದೇವೆ. ಮತ ಗಳಿಕೆ ಪ್ರಮಾಣ ಹೆಚ್ಚಿದೆ. ಬಿಜೆಪಿಯುವರು ಸೋತಿದ್ದಾರೆ ಎಂದರು.
ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಐದು ಗ್ಯಾರಂಟಿಗಳನ್ನು ನಾಡಿನ ಜನತೆಯ ಮನೆ, ಮನೆಗೆ ತಲುಪಿಸಿದ್ದೇನೆ. ಆದರೂ ಬಿಜೆಪಿಯವರು ನಿರಂತರ ಸುಳ್ಳುಗಳನ್ನು ಹುಟ್ಟು ಹಾಕುತ್ತಾ, ಗ್ಯಾರಂಟಿಗಳಿಗೆ ಹಣ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯಕ್ಕೆ ಬರಗಾಲ ಬಂದರೂ ಕೇಂದ್ರ ಸರ್ಕಾರ ನಮ್ಮ ರಾಜ್ಯದ ಪಾಲಿನ ಹಣ ಕೊಡಲಿಲ್ಲ. ಇದಕ್ಕಾಗಿ ನಾವು ಕಾನೂನು ಹೋರಾಟ ಮಾಡಿದೆವು. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಬಳಿಕ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಸ್ವಲ್ಪ ಹಣ ಬಿಡುಗಡೆ ಮಾಡಿತು. ಗ್ಯಾರಂಟಿ ಯೋಜನೆಗಾಗಿ ಅಕ್ಕಿ ಕೇಳಿದಾಗಲೂ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ, ಹಾಗಾಗಿ, ಅಕ್ಕಿ ಬದಲು ಹಣ ಪಾವತಿ ಮಾಡುತ್ತಿದ್ದೇವೆ. ಹೀಗಾಗಿ ಕೇಂದ್ರದಲ್ಲಿ ರಾಜ್ಯದ ಪರವಾಗಿ ಹೋರಾಟ ಮುಂದುವರಿಸಲು ಎಲ್ಲಾ 28 ಮಂದಿ ಸಂಸದರಿಗೆ ಸೂಚನೆ ನೀಡಿದ್ದೇವೆ ಎಂದರು. ಕೋವಿಡ್ ವೇಳೆ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಯಾರು ಕೂಡ ದಯಾಮರಣವನ್ನು ಕೇಳಬಾರದು. ನಾನು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ.
ವೇದಿಕೆಯಲ್ಲೇ 2 ಬಾರಿ ನಿದ್ರೆಗೆ ಜಾರಿದ ಸಿಎಂ: ವೇದಿಕೆಯಲ್ಲೇ ಎರಡು ಬಾರಿ ಮುಖ್ಯಮಂತ್ರಿ ನಿದ್ರೆಗೆ ಜಾರಿದ ಘಟನೆ ನಡೆಯಿತು. ಸಚಿವ ಎಚ್.ಸಿ.ಮಹಾದೇವಪ್ಪ ಮಾತನಾಡುತ್ತಿದ್ದ ವೇಳೆ ಎರಡು ಬಾರಿ ಅವರು ನಿದ್ರೆಗೆ ಜಾರಿದರು. ಬಳಿಕ, ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲು ಅಭಿಮಾನಿಗಳು ವೇದಿಕೆ ಏರುತ್ತಿದ್ದಂತೆ ಅವರಿಗೆ ನಿದ್ರಾಭಂಗವಾಯಿತು. ಸಿದ್ದರಾಮಯ್ಯ ಭಾಷಣ ಮಾಡುವಾಗ ಸಚಿವ ಕೆ.ಎಚ್. ಮುನಿಯಪ್ಪ ಕೂಡ ನಿದ್ರೆಗೆ ಜಾರಿದ್ದರು.