6 ಹಾಲಿ ಸಂಸದರಿಗೆ ಟಿಕೆಟಿಲ್ಲ

| Published : Mar 14 2024, 02:03 AM IST

ಸಾರಾಂಶ

ಬರೋಬ್ಬರಿ ಒಂದು ವಾರದ ಕಸರತ್ತಿನ ಬಳಿಕ ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಮೊದಲ ಹಂತದಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಹೊಸ ಮುಖಗಳು: ಕ್ಯಾ.ಬ್ರಿಜೇಶ್ ಚೌಟ (ದಕ್ಷಿಣ ಕನ್ನಡ), ಡಾ.ಕೆ.ಬಸವರಾಜ (ಕೊಪ್ಪಳ), ಡಾ। ಸಿ.ಎನ್‌.ಮಂಜುನಾಥ್‌ (ಬೆಂಗಳೂರು ಗ್ರಾಮಾಂತರ), ಯದುವೀರ ಒಡೆಯರ್‌ (ಮೈಸೂರು), ಗಾಯತ್ರಿ ಸಿದ್ದೇಶ್ವರ್‌ (ದಾವಣಗೆರೆ)

--ಕನ್ನಡಪ್ರಭ ವಾರ್ತೆ ಬೆಂಗಳೂರು

ಬರೋಬ್ಬರಿ ಒಂದು ವಾರದ ಕಸರತ್ತಿನ ಬಳಿಕ ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಮೊದಲ ಹಂತದಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಇನ್ನುಳಿದ ಎಂಟು ಕ್ಷೇತ್ರಗಳ ಪೈಕಿ ಮೂರನ್ನು ಮಿತ್ರ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಡಲು ಮುಂದಾಗಿದ್ದು, ಬಾಕಿ ಐದು ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪ್ರಕಟಿಸುವ ನಿರೀಕ್ಷೆಯಿದೆ.

ಹೊಸ ಪ್ರಯೋಗ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ನಿವೃತ್ತಿ ಘೋಷಿಸಿದವರನ್ನು ಹೊರತುಪಡಿಸಿ ಇತರ ಆರು ಮಂದಿ ಹಾಲಿ ಸಂಸದರಿಗೆ ಕೊಕ್ ನೀಡಲಾಗಿದೆ.

ಬೆಂಗಳೂರು ಉತ್ತರ ಕ್ಷೇತ್ರದ ಡಿ.ವಿ.ಸದಾನಂದಗೌಡ, ದಕ್ಷಿಣ ಕನ್ನಡ ಕ್ಷೇತ್ರದ ನಳಿನ್‌ಕುಮಾರ್ ಕಟೀಲ್‌, ಮೈಸೂರು ಕ್ಷೇತ್ರದ ಪ್ರತಾಪ್ ಸಿಂಹ, ಕೊಪ್ಪಳ ಕ್ಷೇತ್ರದ ಕರಡಿ ಸಂಗಣ್ಣ, ಬಳ್ಳಾರಿ ಕ್ಷೇತ್ರದ ದೇವೇಂದ್ರಪ್ಪ ಅವರಿಗೆ ಟಿಕೆಟ್ ತಪ್ಪಿದೆ. ಇನ್ನು ದಾವಣಗೆರೆ ಕ್ಷೇತ್ರದ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಬದಲು ಪತ್ನಿ ಗಾಯತ್ರಿ ಅವರಿಗೆ ಟಿಕೆಟ್ ನೀಡಲಾಗಿದೆ. ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ತೀರ್ಮಾನಿಸಿದ್ದರಿಂದ ಮುನಿಸ್ವಾಮಿ ಟಿಕೆಟ್‌ ವಂಚಿತರಾಗಿದ್ದಾರೆ.

ಘೋಷಣೆಯಾಗದೆ ಬಾಕಿ ಉಳಿದಿರುವ ಐದು ಕ್ಷೇತ್ರಗಳಾದ ರಾಯಚೂರು, ಬೆಳಗಾವಿ, ಉತ್ತರ ಕನ್ನಡ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಇನ್ನಷ್ಟು ಹಾಲಿ ಸಂಸದರಿಗೆ ಟಿಕೆಟ್ ತಪ್ಪುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ವಸನೀಯ ಮೂಲಗ‍ಳು ತಿಳಿಸಿವೆ.

ಕೆಲವು ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ವಿರೋಧ ವ್ಯಕ್ತವಾಗಿದ್ದರೂ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಬೀದರ್‌ನಿಂದ ಕೇಂದ್ರ ಸಚಿವ ಭಗವಂತ್‌ ಖೂಬಾ ಅವರಿಗೆ ಶಾಸಕರೂ ಸೇರಿದಂತೆ ಕಾರ್ಯಕರ್ತರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿದ್ದರೂ ಅದನ್ನು ಲೆಕ್ಕಿಸದೆ ಟಿಕೆಟ್ ನೀಡಲಾಗಿದೆ. ಅದೇ ರೀತಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಪ್ರತಿರೋಧ ವಕ್ತವಾಗಿದ್ದರೂ ಅವರನ್ನು ಅಲ್ಲಿಂದ ಸ್ಥಳಾಂತರಿಸಿ ಬೆಂಗ‍ಳೂರು ಉತ್ತರ ಕ್ಷೇತ್ರದಿಂದ ಅವಕಾಶ ನೀಡಲಾಗಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಲಾಗಿದೆ. ಮಾಜಿ ಸಚಿವ ಸಿ.ಟಿ.ರವಿ ಅವರು ಪ್ರಬಲ ಆಕಾಂಕ್ಷೆ ಹೊಂದಿದ್ದರೂ ಅವಕಾಶ ಸಿಗಲಿಲ್ಲ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿ ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಬಡ್ತಿ ಪಡೆಯಲು ಸಜ್ಜಾಗಿದ್ದಾರೆ. ಈ ಕ್ಷೇತ್ರದಿಂದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಪುತ್ರ ಕಾಂತೇಶ್ ಪ್ರಬಲ ಆಕಾಂಕ್ಷಿಯಾಗಿ ಕೆಲವು ತಿಂಗಳುಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಪ್ರಯೋಜನವಾಗಲಿಲ್ಲ.

ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಬೆಳಗಾವಿ ಕ್ಷೇತ್ರದಿಂದ ಕಣಕ್ಕಿ‍ಳಿಸುವ ಪ್ರಯತ್ನ ನಡೆದಿದೆ. ಧಾರವಾಡ ಅಥವಾ ಹಾವೇರಿ ಕ್ಷೇತ್ರದ ಬಗ್ಗೆ ಒಲವು ಹೊಂದಿದ್ದ ಶೆಟ್ಟರ್ ಅವರಿಗೆ ಈಗ ಬೆಳಗಾವಿ ಹೊರತುಪಡಿಸಿ ಬೇರೆ ಅವಕಾಶ ಇಲ್ಲದಂತಾಗಿದೆ.

ವಿಜಯಪುರ ಕ್ಷೇತ್ರದ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಟಿಕೆಟ್ ತಪ್ಪಬಹುದು ಎಂಬ ವದಂತಿ ಹಬ್ಬಿದ್ದರೂ ಸ್ಪರ್ಧಿಸುವುದಾಗಿ ಪಟ್ಟು ಹಿಡಿದಿದ್ದರಿಂದ ಹೈಕಮಾಂಡ್ ಅಸ್ತು ಎಂದಿದೆ.

ರಾಜ್ಯದ ಮಾಜಿ ಸಚಿವರಾದ ವಿ.ಸೋಮಣ್ಣ ಅವರಿಗೆ ತುಮಕೂರು ಕ್ಷೇತ್ರದಿಂದ ಮತ್ತು ಬಿ.ಶ್ರೀರಾಮುಲು ಅವರಿಗೆ ಬಳ್ಳಾರಿ ಕ್ಷೇತ್ರದಿಂದ ಅವಕಾಶ ಕಲ್ಪಿಸಲಾಗಿದೆ. ಚಾಮರಾಜನಗರ ಕ್ಷೇತ್ರದಿಂದ ಮಾಜಿ ಶಾಸಕ ಬಾಲರಾಜ್ ಅವರನ್ನು ಅಭ್ಯರ್ಥಿಯನ್ನಾಗಿಸಲಾಗಿದೆ.

ನಾಲ್ಕು ಹೊಸ ಮುಖ:

ಮೊದಲ ಪಟ್ಟಿಯ 20 ಅಭ್ಯರ್ಥಿಗಳ ಪೈಕಿ ನಾಲ್ವರು ಮೊದಲ ಬಾರಿಗೆ ಚುನಾವಣಾ ರಾಜಕಾರಣ ಪ್ರವೇಶಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಅಳಿಯ ಕೂಡ ಆಗಿರುವ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್‌, ಮೈಸೂರು ಕ್ಷೇತ್ರದಿಂದ ಮಹಾರಾಜರಾದ ಯದುವೀರ ಒಡೆಯರ್, ದಕ್ಷಿಣ ಕನ್ನಡ ಕ್ಷೇತ್ರದಿಂದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಕೊಪ್ಪಳದಿಂದ ಡಾ.ಕೆ.ಬಸವರಾಜ ಅವರು ಅಭ್ಯರ್ಥಿಗಳಾಗಿದ್ದು, ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ.