ನನ್ನ ಜಾಗ ಖಾಲಿ ಮಾಡಿಸುವುದು ಅಷ್ಟು ಸುಲಭವಲ್ಲ: ಡಿಸಿಎಂ ಡಿಕೆಶಿ

| Published : Jul 02 2024, 01:50 AM IST / Updated: Jul 02 2024, 04:14 AM IST

ನನ್ನ ಜಾಗ ಖಾಲಿ ಮಾಡಿಸುವುದು ಅಷ್ಟು ಸುಲಭವಲ್ಲ: ಡಿಸಿಎಂ ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

ನನ್ನ ಜಾಗ ಖಾಲಿ ಮಾಡಿಸಲು ಕೆಲವರು ಪ್ರಯತ್ನ ಮಾಡಿದ್ದಾರೆ. ಆದರೆ, ಅದು ಯಶಸ್ವಿಯಾಗುವುದಿಲ್ಲ. ಪಕ್ಷಕ್ಕಾಗಿ ದುಡಿದ ನನ್ನನ್ನು ಖಾಲಿ ಮಾಡಿಸಲು ಆಗುವುದಿಲ್ಲ. ನಾನೇ ಅವರನ್ನು ಖಾಲಿ ಮಾಡಿಸುತ್ತೇನೆ...

ಬೆಂಗಳೂರು  :ನನ್ನ ಜಾಗ ಖಾಲಿ ಮಾಡಿಸಲು ಕೆಲವರು ಪ್ರಯತ್ನ ಮಾಡಿದ್ದಾರೆ. ಆದರೆ, ಅದು ಯಶಸ್ವಿಯಾಗುವುದಿಲ್ಲ. ಪಕ್ಷಕ್ಕಾಗಿ ದುಡಿದ ನನ್ನನ್ನು ಖಾಲಿ ಮಾಡಿಸಲು ಆಗುವುದಿಲ್ಲ. ನಾನೇ ಅವರನ್ನು ಖಾಲಿ ಮಾಡಿಸುತ್ತೇನೆ...

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಠೇಂಕರಿಸಿರುವ ಪರಿ ಇದು. ಅಲ್ಲದೆ, ಸಿಎಂ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತು ಸರ್ಕಾರದ ನಿರ್ಧಾರದ ಬಗ್ಗೆ ಬಹಿರಂಗ ಹೇಳಿಕೆ ನೀಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಅಧ್ಯಕ್ಷನಾಗುವ ಮೊದಲು ಪಕ್ಷ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ನೋಡಬೇಕು. ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಹೊಣೆ ನನ್ನ ಮೇಲಿದೆ. ನನ್ನನ್ನು ಯಾರಾದರೂ ಬಗ್ಗಿಸಬಹುದು ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಎಂದರು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಗಳ ಬದಲಾವಣೆ ಹಾಗೂ ಸರ್ಕಾರದ ನಿರ್ಧಾರಗಳ ವಿರುದ್ಧ ಮಾತನಾಡುವ ಸಚಿವರು ಹಾಗೂ ಶಾಸಕರಿಗೆ ನೋಟಿಸ್‌ ಜಾರಿ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದು, ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕೆಲ ಪದಾಧಿಕಾರಿಗಳು, ಸಚಿವರು ಎಲ್ಲೆ ಮೀರಿ ಮಾತನಾಡುತ್ತಿದ್ದಾರೆ. ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಶ್ರಮದಿಂದ ಅವರು ಸಚಿವರಾಗಿರುವುದನ್ನು ಮರೆಯಬಾರದು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು ಎನ್ನಲಾಗಿದೆ.

ಈ ವೇಳೆ ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಲವರಿಗೆ ಮಾಧ್ಯಮಗಳನ್ನು ನೋಡಿದರೆ ಮಾತನಾಡುವ ಚಟ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಅನಗತ್ಯ ಹೇಳಿಕೆ ನೀಡುವವರಿಗೆ ನೋಟಿಸ್‌ ನೀಡಲು ತೀರ್ಮಾನಿಸಲಾಗಿದೆ. ಇನ್ನು ಯಾರೇ ಮಾತನಾಡಿದರೂ ನೋಟಿಸ್‌ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘಟನೆಗೆ ಒತ್ತು ಕೊಡಲು ವಿಸ್ತೃತ ಚರ್ಚೆ:

ಲೋಕಸಭೆ ಚುನಾವಣೆಯಲ್ಲಿ ಪಕ್ಷ ನಿರೀಕ್ಷಿತ ಸ್ಥಾನ ಗಳಿಸಿಲ್ಲ. ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನ ಗೆದ್ದಿದ್ದ ಪಕ್ಷ ಲೋಕಸಭೆ ವೇಳೆ 178 ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದೆ. ಇದಕ್ಕೆ ಸಂಘಟನೆ ಲೋಪ ಕಾರಣವೇ ಅಥವಾ ಗ್ಯಾರಂಟಿಗಳು ಫಲ ಕೊಟ್ಟಿಲ್ಲವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಶಿವಕುಮಾರ್‌ ಸೂಚಿಸಿರುವುದಾಗಿ ತಿಳಿದುಬಂದಿದೆ.

ಇನ್ನು ಪಕ್ಷ ಸಂಘಟನೆಗಾಗಿ ಕೆಪಿಸಿಸಿ ಪದಾಧಿಕಾರಿಗಳಿಗೆ ಜಿಲ್ಲೆ, ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ಹಂಚಿ ಕೆಲಸಗಳ ಬಗ್ಗೆ ಮಾಸಿಕ ವರದಿ ಪಡೆಯಲಾಗುವುದು. ಸಾಂಸ್ಥಿಕ ಕಾರ್ಯಾಗಾರಗಳನ್ನು ನಡೆಸಲಾಗುವುದು ಎಂದು ತಿಳಿಸಿದ ಅವರು, ಖಾಲಿ ಹುದ್ದೆಗಳ ಭರ್ತಿ, ಬ್ಲಾಕ್, ಹಿರಿಯ ನಾಯಕರು, ಮುಂಚೂಣಿ ಘಟಕಗಳು, ಇಲಾಖೆಗಳ ಮುಖ್ಯಸ್ಥರು ಹೀಗೆ ಎಲ್ಲರ ಸಂಪರ್ಕ ವಿವರಗಳೊಂದಿಗೆ ಕೆಪಿಸಿಸಿ ಡೇಟಾ ಡಿಜಿಟೈಸೇಷನ್ ಮಾಡುವುದು, ಬ್ಲಾಕ್ ಮತ್ತು ಬೂತ್ ಮಟ್ಟದ ನಡುವೆ ಮಧ್ಯವರ್ತಿಗಳಾಗಿ ಪಂಚಾಯತಿವಾರು ಸಮಿತಿ ರಚನೆ, ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡುವ ಬಗ್ಗೆ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.

ಸರ್ಕಾರವು ಕೋಟಿಗಟ್ಟಲೆ ಫಲಾನುಭವಿಗಳನ್ನು ಸೃಷ್ಟಿಸಿದೆ. ಹೀಗಾಗಿ ರಾಜ್ಯಾದ್ಯಂತ ತಳಮಟ್ಟದಲ್ಲಿ ಪಲಾನುಭವಿಗಳಿಗಾಗಿ ಕಾರ್ಯಕ್ರಮ ನಡೆಸಬೇಕು. ಪ್ರತಿ ಬೂತ್‌ನಲ್ಲಿ ಡಿಜಿಟಲ್‌ ಯೂತ್‌ ಗುಂಪು ಹಾಗೂ ಸದಸ್ಯತ್ವ ನೋಂದಣಿ ಮಾಡಬೇಕು ಎಂದು ಹೇಳಿದರು.

ಸಚಿವರ ವಿರುದ್ಧ ಕಾರ್ಯಕರ್ತರ ಆಕ್ರೋಶ

ರಾಜ್ಯ ಸರ್ಕಾರದ ಸಚಿವರು ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳಿಗೆ ಗೌರವ ನೀಡುತ್ತಿಲ್ಲ ಎಂಬ ವಿಚಾರ ಸಭೆಯಲ್ಲಿ ಮತ್ತೆ ಪ್ರಸ್ತಾಪವಾಯಿತು. ಸಭೆಯಲ್ಲಿ ಮಾತನಾಡಿದ ಕೆಲ ಕಾರ್ಯಕರ್ತರು ಸಚಿವರು ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡುವ ಸೌಜನ್ಯವನ್ನೂ ತೋರುತ್ತಿಲ್ಲ ಎಂದು ದೂರಿದರು.

ಈ ವೇಳೆ ಮಾತನಾಡಿದ ಶಾಸಕ ಹಾಗೂ ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ವಿನಯ್‌ ಕುಲಕರ್ಣಿ, ಸಚಿವರು ಕಾರ್ಯಕರ್ತರು, ನಾಯಕರು ಮಾತ್ರವಲ್ಲ, ಶಾಸಕರಿಗೂ ಗೌರವ ಕೊಡುವುದಿಲ್ಲ. ಹೀಗಾದರೆ ಪಕ್ಷ ಸಂಘಟನೆ ಹೇಗೆ ಆಗುತ್ತದೆ. ಮೊದಲು ಇದು ಬದಲಾಗಬೇಕು ಎಂದು ಆಗ್ರಹಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವೆಲ್ಲರೂ ಸೇರಿದರೆ ಅವರು ಸಚಿವರು‌, ಅವರೇನು ಮೇಲಿಂದ ಬಂದಿಲ್ಲ. ನಾನು ಭಯಪಡುವುದಿಲ್ಲ. ಪ್ರಸಂಗ ಬಂದರೆ ಎಲ್ಲಾ ದಾಖಲೆ ಕೊಡುತ್ತೇನೆ. ಗೌರವ ಇಲ್ಲದ ಕಡೆ ನಾವು ಯಾಕೆ ಇರಬೇಕು?’ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.