ಜೆಡಿಎಸ್‌ ನಿಖಿಲ್ ಸೋಲಲ್ಲ, ಎಚ್‌ಡಿ ಕುಮಾರಸ್ವಾಮಿ ಸೋಲು : ಕೃಷಿ ಸಚಿವ ಚಲುವರಾಯ ಸ್ವಾಮಿ

| Published : Nov 26 2024, 12:49 AM IST / Updated: Nov 26 2024, 04:30 AM IST

ಸಾರಾಂಶ

ಚನ್ನಪಟ್ಟಣ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದರೂ ಕುಮಾರಸ್ವಾಮಿ ಅಭಿವೃದ್ಧಿ ಕಾರ್ಯವನ್ನೇ ಮಾಡದಿದ್ದರೆ ಜನರು ತಿರಸ್ಕರಿಸದೆ ಇನ್ನೇನು ಮಾಡುತ್ತಾರೆ. ಸಿ.ಪಿ.ಯೋಗೇಶ್ವರ್ಸಾ 25 ವಿರ ಮತಗಳ ಅಂತರದಲ್ಲಿ ಗೆದ್ದಿದ್ದಾರೆ.  

 ಮದ್ದೂರು : ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ ಉಂಟಾದ ಸೋಲು ನಿಖಿಲ್ ಸೋಲಲ್ಲ. ಅವರ ತಂದೆ ಎಚ್.ಡಿ.ಕುಮಾರಸ್ವಾಮಿ ಜನಪರ ಕೆಲಸ ಮಾಡದಿರುವುದಕ್ಕೆ ಉಂಟಾಗಿರುವ ಸೋಲು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ವಿಶ್ಲೇಷಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದರೂ ಕುಮಾರಸ್ವಾಮಿ ಅಭಿವೃದ್ಧಿ ಕಾರ್ಯವನ್ನೇ ಮಾಡದಿದ್ದರೆ ಜನರು ತಿರಸ್ಕರಿಸದೆ ಇನ್ನೇನು ಮಾಡುತ್ತಾರೆ. ಸಿ.ಪಿ.ಯೋಗೇಶ್ವರ್ ೨೫ ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಪಟ್ಟಣದಲ್ಲಿ ಮಾತ್ರ ಲೀಡ್ ಕೊಟ್ಟಿಲ್ಲ, ಹಳ್ಳಿಗಳಲ್ಲೂ ಲೀಡ್ ಬಂದಿದೆ. ಹಾಗಾಗಿ ಯಾವುದೋ ಒಂದು ಸಮಾಜ, ಸಮುದಾಯ ಮಾತ್ರ ಜೆಡಿಎಸ್ ಕೈಬಿಟ್ಟಿಲ್ಲ. ಬೇರೆ ಸಮುದಾಯದವರೂ ಕಾಂಗ್ರೆಸ್ ಕೈಹಿಡಿದಿದ್ದರಿಂದ ಗೆಲುವಿನ ಅಂತರ ಹೆಚ್ಚಾಗಿದೆ ಎಂದರು.

೨೦೨೮ಕ್ಕೆ ಕಾಂಗ್ರೆಸ್‌ಗೆ ತಿರುಪತಿ ನಾಮನೇ ಗತಿ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ಇದೇ ರೀತಿ ಫಲಿತಾಂಶ ಬಂದರೆ ಬಿಜೆಪಿ ಹೈಕಮಾಂಡ್‌ ಅವರ ಪಕ್ಷದ ವಿಪಕ್ಷ ನಾಯಕನನ್ನು ಬದಲಾವಣೆ ಮಾಡಬಹುದೆನೋ ನೋಡಿಕೊಳ್ಳಲಿ. ನಮಗೂ ಅವರ ಬಗ್ಗೆ ಪ್ರೀತಿ ಇದೆ. ಬಾಯಿಗೆ ಬಂದಂತೆ ಮಾತನಾಡಿದರೆ ಹೈಕಮಾಂಡ್ ಸರ್ಟಿಫೀಕೇಟ್ ಕೊಡೋಲ್ಲ. ಚುನಾವಣೆ ಸಮಯದಲ್ಲಿ ಸಾಮರ್ಥ್ಯ ಪ್ರದರ್ಶಿಸಬೇಕು ಎಂದರು.

ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನ ಟೀಕೆ ಮಾಡುವುದನ್ನೇ ಕೆಲಸ ಮಾಡಿಕೊಂಡರೆ ಯಾರು ಓಟು ಕೊಡ್ತಾರೆ. ಅವರಿಗೆ ಮುಂದಿನ ಐದು ವರ್ಷಕ್ಕೆ ಯಾವುದೇ ಕಾರ್ಯಕ್ರಮಗಳೂ ಇಲ್ಲ. ಇದ್ದರೆ ಅದನ್ನು ಜನರ ಮುಂದೆ ಹೇಳಬೇಕಿತ್ತು. ಏನೂ ಹೇಳದವರಿಗೆ ಜನರು ಏಕೆ ಓಟು ಕೊಡುತ್ತಾರೆ. ೨೦೨೮ಕ್ಕೆ ಅಧಿಕಾರಕ್ಕೆ ಬರಲು ಬಿಜೆಪಿ ಹಣೇಲೂ ಬರೆದಿಲ್ಲ. ನಾವೇ ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸದಿಂದ ನುಡಿದರು.