ಸಿದ್ರಾಮಣ್ಣ ಮೊದಲಿನಿಂದಲೂ ನನಗೆ ಬಾಳ ಆತ್ಮೀಯ. ಭಯಂಕರ ಚೊಲೋ ಇದ್ದರು. ನಾ ಮಂತ್ರಿ ಆಗಿದ್ದಾಗ ಅವರು ಏನೂ ಇರಲಿಲ್ಲ. ನಮ್ಮ ಜೊತೆಗೆ ಇದ್ದಾಗ ಬಹಳ ಒಳ್ಳೆಯವ ಇದ್ದರು. ಯಾವತ್ತು ಕಾಂಗ್ರೆಸ್‌ಗೆ ಹೋದ್ರೋ ಆವಾಗಿನಿಂದ ಭಯಂಕರವಾಗಿ ಕೆಟ್ಟು ಬಿಟ್ರು
ಸಿದ್ದರಾಮಣ್ಣ ಮೊದಲು ನಮ್ಮ ಜೊತೆ ಇದ್ದಾಗ ಬಹಳ ಒಳ್ಳೆಯವರಿದ್ರು, ಅದ್ಯಾವಾಗ ಕಾಂಗ್ರೆಸ್ ಸೇರಿದ್ರೋ ಆವಾಗ ವಿಪರೀತ ಕೆಟ್ಟುಹೋದ್ರು...
ಹೀಗಂತ ಬಿಜೆಪಿ ಹಿರಿಯ ನಾಯಕ, ಹಾಲಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದು, ಬೇರೆ ಯಾರಿಗೋ ಅಲ್ಲ, ಹಳೆಯ ಸ್ನೇಹಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ
ತಮಗೆ ಅನಿಸಿದ್ದನ್ನು ನೇರಾನೇರವಾಗಿ ಹೇಳುವಂತಹ ವ್ಯಕ್ತಿತ್ವ ಜಿಗಜಿಣಗಿ ಸಾಹೇಬ್ರು ಅವರದ್ದು, ಸ್ವಪಕ್ಷೀಯರಾಗಲಿ, ಅಥವಾ ಬೇರೆ ಯಾರೇ ಯಾರೇ ಆಗಿರಲಿ. ಖಡಕ್ ಮಾತು. ಇಂಥ ಜಿಗಜಿಣಗಿ ಅವರು ಪಕ್ಷ ಬೇರೆಯಾದ್ರೂ ಸಿದ್ದರಾಮಯ್ಯ ಅವರ ಜೊತೆ ಈಗಲೂ ಆತ್ಮೀಯತೆ, ಗೌರವ ಇಟ್ಟುಕೊಂಡಿದ್ದಾರೆ. ಇಬ್ಬರೂ ಒಂದು ಕಾಲದ ಜನತಾ ಪರಿವಾರಕ್ಕೆ ಸೇರಿದವರೇ ಆಗಿರುವುದರಿಂದ ಇಂತಹ ಸ್ನೇಹ ಈಗಲೂ ಇದೇ.
ಇಷ್ಟಕ್ಕೂ ಈ ರೀತಿಯ ಮಾತು ಹೇಳಲು ಕಾರಣ ಕಾಂಗ್ರೆಸ್ ಸರ್ಕಾರದಲ್ಲಿ ಹಾಲಿ ನಡೆಯುತ್ತಿರುವ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆ.
ಇತ್ತೀಚೆಗೆ ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಜಿಗಜಿಣಗಿ ಅವರಿಗೆ ಪತ್ರಕರ್ತರೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಇಳಿಸಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ವದಂತಿ ಇದೆ. ನೀವು ಸಿದ್ದರಾಮಯ್ಯನವರಿಗೆ ಮೊದಲಿನಿಂದಲೂ ಆಪ್ತರು. ಹಾಗಾಗಿ ನಿಮಗೆ ಯಾರು ಮುಖ್ಯಮಂತ್ರಿ ಇದ್ದರೆ ಚೆನ್ನ ಎಂದು ಕೇಳಿದರು.
ಸ್ನೇಹಿತರಾದ ಸಿದ್ದರಾಮಯ್ಯ ಅವರ ಬಗ್ಗೆ ಕೇಳಿದರೆ ಸುಮ್ಮನಿರಲು ಸಾಧ್ಯವೇ? ಉಹುಂ.. ತುಸು ಉತ್ಸಾಹದಿಂದಲೇ ಮಾತನಾಡಿದ ಜಿಗಜಿಗಣಿ ಸಾಹೇಬ್ರು, ಸಿದ್ರಾಮಣ್ಣ ಮೊದಲಿನಿಂದಲೂ ನನಗೆ ಬಾಳ ಆತ್ಮೀಯ. ಭಯಂಕರ ಚೊಲೋ ಇದ್ದರು. ನಾ ಮಂತ್ರಿ ಆಗಿದ್ದಾಗ ಅವರು ಏನೂ ಇರಲಿಲ್ಲ. ನಮ್ಮ ಜೊತೆಗೆ ಇದ್ದಾಗ ಬಹಳ ಒಳ್ಳೆಯವ ಇದ್ದರು. ಯಾವತ್ತು ಕಾಂಗ್ರೆಸ್‌ಗೆ ಹೋದ್ರೋ ಆವಾಗಿನಿಂದ ಭಯಂಕರವಾಗಿ ಕೆಟ್ಟು ಬಿಟ್ರು ಎಂದು ನಗುತ್ತಾ ಹೇಳಿದಾಗ, ನಗುವ ಸರದಿ ಸುದ್ದಿ ಮಂದಿಯದ್ದಾಗಿತ್ತು.
ಕೊನೆಯಲ್ಲಿ ಮಾತನಾಡುವಾಗ ರಾಜ್ಯದಲ್ಲಿ ಮುಖ್ಯಮಂತ್ರಿ ಯಾರಾದರೂ ಆಗಲಿ, ನಮಗೆ ಕೇಂದ್ರದಲ್ಲಿ ಮೋದಿ ಪ್ರಧಾನಮಂತ್ರಿ ಆಗಿರಬೇಕು ಎಂದು ಸುದ್ದಿಗೋಷ್ಠಿ ಮುಗಿಸಿದರು.
ಸನ್ಮಾನವೆಂಬ ಪ್ರಹಸನದಲ್ಲಿ ಪುನರಪಿ ಸ್ಮರಣಿಕೆ ಅರ್ಪಣೆ
ಕೊನೇ ಕ್ಷಣದಲ್ಲಿ ಸನ್ಮಾನಿಸುವ ಸಾಧಕರ ಸಂಖ್ಯೆ ಹೆಚ್ಚಾದರೆ ಕಾರ್ಯಕ್ರಮಗಳಲ್ಲಿ ನಡೆಯುವ ಪಡಿಪಾಟಲು ಒಂದಲ್ಲ, ಎರಡಲ್ಲ... ಸಾಧಕರನ್ನು ಸನ್ಮಾನಿಸಿ ಸ್ಮರಣಿಕೆ ನೀಡಿ, ಶಾಲು, ಪೇಟ, ಹಣ್ಣಿನ ಬುಟ್ಟಿ ನೀಡಿ ಸನ್ಮಾನಿಸಿ ಪಕ್ಕಕ್ಕೆ ಹೊರಡುತ್ತಿದ್ದಂತೆ ಅವರಿಂದ ಸ್ಮರಣಿಕೆ, ಹಣ್ಣಿನ ಬುಟ್ಟಿ ಪಡೆದು ಆಮೇಲೆ ಕೊಡುತ್ತೇವೆ ಅಂತ ಹೇಳಿದಾಗ ಸನ್ಮಾನಿತರಿಗೆ ಖುಷಿಪಡಬೇಕೋ. ನಗಬೇಕೋ ಎಂಬಂತಹ ಸ್ಥಿತಿ!
ಇಂಥದ್ದೊಂದು ಸ್ಥಿತಿಗೆ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕಾರ್ಯಕ್ರಮವೊಂದು ಸಾಕ್ಷಿಯಾಯಿತು. ಖಾಸಗಿ ಸಂಸ್ಥೆಯೊಂದು 20ಕ್ಕೂ ಹೆಚ್ಚುವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಿತ್ತು. ಸಾಧಕರ ಸಂಖ್ಯೆಗೆ ತಕ್ಕಂತೆ ಸ್ಮರಣಿಕೆ, ಶಾಲು ಇತ್ಯಾದಿಗಳನ್ನು ತಂದಿಡಲಾಗಿತ್ತು. ಆದರೆ ಕೊನೇ ಘಳಿಗೆಯಲ್ಲಿ ಸಂಘಟಕರು 30ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಕ್ಕಾಗಿ ಆಹ್ವಾನಿಸಿದ್ದರು. ಹೀಗಾಗಿ ಎಲ್ಲ ಸಾಧಕರು ಸಕುಟುಂಬ ಸಹಿತ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಭರ್ಜರಿಯಾಗಿ ಸಾಧಕರಿಗೆ ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಸನ್ಮಾನಗೊಂಡವರು ನೀಡಿದ್ದ ಸ್ಮರಣಿಕೆ ಮುಂತಾದವುಗಳನ್ನು ಪಡೆದುಕೊಂಡು ಕೂತು ಬಿಟ್ಟರು. ಆದರೆ ಹೆಚ್ಚುವರಿ ಸಾಧಕರಿಗೆ ನೀಡಲು ಸ್ಮರಣಿಕೆ, ಹಣ್ಣಿನ ಬುಟ್ಟಿ, ಪೇಟ ಇಲ್ಲದಾಗ ಸಂಘಟಕರೊಬ್ಬರು ಬುದ್ದಿವಂತಿಕೆ ಓಡಿಸಿ, ಸನ್ಮಾನಗೊಂಡವರ ಬಳಿ ಹೋಗಿ, ತಪ್ಪು ತಿಳಿಯಬೇಡಿ, ನಿಮ್ಮ ಸ್ಮರಣಿಕೆ, ಹಣ್ಣಿನ ಬುಟ್ಟಿ ಕೊಡಿ ಆಮೇಲೆ ಕೊಡುತ್ತೇವೆ ಎಂದು ಪಡೆದುಕೊಂಡು ಹೋಗಿ ಸಾಧಕರಿಗೆ ಸನ್ಮಾನಿಸಿ ಫೋಟೋಗೆ ಫೋಸ್ ಕೊಟ್ಟರು.

