ಒಬ್ಬ ಕೆಲಸ ಮಾಡುವವ, ಮತ್ತೊಬ್ಬ ಲಾಭ ಪಡೆವವ: ಡಿಕೆಶಿ ಮಾರ್ಮಿಕ ಹೇಳಿಕೆ

| Published : Nov 20 2025, 12:45 AM IST

ಒಬ್ಬ ಕೆಲಸ ಮಾಡುವವ, ಮತ್ತೊಬ್ಬ ಲಾಭ ಪಡೆವವ: ಡಿಕೆಶಿ ಮಾರ್ಮಿಕ ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತಿನಲ್ಲಿ ಎರಡು ರೀತಿಯ ಜನ ಇದ್ದಾರೆ. ಒಬ್ಬ ಕೆಲಸ ಮಾಡುವವನು, ಮತ್ತೊಬ್ಬ ಅದರ ಲಾಭ ಪಡೆದುಕೊಳ್ಳುವವನು. ನೀವು ಮೊದಲ ಗುಂಪಿಗೆ ಸೇರಿ ಎಂದು ಇಂದಿರಾ ಗಾಂಧಿ ಹೇಳಿದ್ದರು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾರ್ಮಿಕವಾಗಿ ತಿಳಿಸಿದ್ದಾರೆ.

- ಇಂದಿರಾ ಜನ್ಮದಿನ ಕಾರ್‍ಯಕ್ರಮದಲ್ಲಿ ಡಿಕೆ ಮಾರ್ಮಿಕ ನುಡಿ

- ಕೆಪಿಸಿಸಿ ಅಧ್ಯಕ್ಷರ ಹುದ್ದೆಯಲ್ಲಿ ಶಾಶ್ವತ ಇರಲು ಸಾಧ್ಯವಿಲ್ಲ

---ಕನ್ನಡಪ್ರಭ ವಾರ್ತೆ ಬೆಂಗಳೂರು

ಜಗತ್ತಿನಲ್ಲಿ ಎರಡು ರೀತಿಯ ಜನ ಇದ್ದಾರೆ. ಒಬ್ಬ ಕೆಲಸ ಮಾಡುವವನು, ಮತ್ತೊಬ್ಬ ಅದರ ಲಾಭ ಪಡೆದುಕೊಳ್ಳುವವನು. ನೀವು ಮೊದಲ ಗುಂಪಿಗೆ ಸೇರಿ ಎಂದು ಇಂದಿರಾ ಗಾಂಧಿ ಹೇಳಿದ್ದರು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾರ್ಮಿಕವಾಗಿ ತಿಳಿಸಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ ಇಂದಿರಾ ಗಾಂಧಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸವಾಲುಗಳು ನಮ್ಮ ಮನೆ ಬಾಗಿಲ ಮುಂದೆ ಕಾದು ಕುಳಿತಿರುತ್ತವೆ. ನಾವು ಪರ್ವತಗಳನ್ನು ಏರಬೇಕಿಲ್ಲ, ಸಾಗರಗಳನ್ನು ದಾಟಬೇಕಿಲ್ಲ. ನಮ್ಮ ಹಳ್ಳಿಗಳಲ್ಲಿ ಬಡತನ, ಪ್ರತಿ ಮನೆಯಲ್ಲಿ ಜಾತೀಯತೆ ಇದೆ. ನಾವು ಏರಬೇಕಾಗಿರುವುದು ದಾಟಬೇಕಾಗಿರುವುದು ಇವುಗಳನ್ನು. ಎದುರಾಳಿ ನಿನ್ನನ್ನು ನಿಯಂತ್ರಿಸುವ ಮುನ್ನ, ನೀನು ನಿನ್ನನ್ನು ನಿಯಂತ್ರಿಸಬೇಕು. ಗೌರವ ಎಂಬುದು ಕೇಳಿ ಪಡೆಯುವಂತಹುದಲ್ಲ, ಗಳಿಸುವಂತಹದ್ದು. ಪ್ರೀತಿ ಕೊಡುವಂತಹದ್ದು, ಬಲವಂತವಾಗಿ ಪಡೆಯುವಂತಹದ್ದಲ್ಲ. ಜೀವನ ಅನುಭವಿಸುವಂತಹದ್ದು, ವಿವರಿಸುವಂತಹದ್ದಲ್ಲ ಎಂದು ಇಂದಿರಾ ಗಾಂಧಿ ಹೇಳಿದ್ದರು ಎಂದರು.

ಅಧ್ಯಕ್ಷ ಹುದ್ದೆ ಬಿಡಲು ನಿರ್ಧರಿಸಿದ್ದೆ;

ಉಪ ಮುಖ್ಯಮಂತ್ರಿಯಾದ ದಿನವೇ ಅಧ್ಯಕ್ಷ ಹುದ್ದೆ ಬಿಡಬೇಕು ಎಂದು ನಿರ್ಧರಿಸಿದ್ದೆ. ಪಕ್ಷದ ವರಿಷ್ಠರು ಇನ್ನಷ್ಟು ದಿನ ಮುಂದುವರೆಯುವಂತೆ ಸೂಚಿಸಿದ್ದರಿಂದ ನಾನು ನನ್ನ ಕರ್ತವ್ಯ ನಿಭಾಯಿಸುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ನಾನು ಈ ಹುದ್ದೆಯಲ್ಲಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಈಗಾಗಲೇ ಐದೂವರೆ ವರ್ಷವಾಗಿದೆ, ಮಾರ್ಚ್ ಬಂದರೆ ಆರು ವರ್ಷ. ಬೇರೆಯವರಿಗೆ ಅವಕಾಶ ನೀಡಬೇಕು. ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಇನ್ನು ಸ್ವಲ್ಪ ದಿನ ಮುಂದುವರಿಯಲು ಸೂಚಿಸಿದ್ದರಿಂದ ರಾಜ್ಯಾಧ್ಯಕ್ಷನಾಗಿ ಕರ್ತವ್ಯ ನಿಭಾಯಿಸುತ್ತಿದ್ದೇನೆ ಎಂದರು.

ಸದ್ಯದಲ್ಲಿ ನೂರು ಕಾಂಗ್ರೆಸ್‌ ಕಚೇರಿ ಶಂಕುಸ್ಥಾಪನೆ ಹಮ್ಮಿಕೊಂಡಿದ್ದೇವೆ. ಇದಕ್ಕೆ ಯಾರು ಸಹಕಾರ ನೀಡಿಲ್ಲ, ಯಾರು ಆಸಕ್ತಿ ತೋರಿದ್ದಾರೆ ಎಂಬುದರ ಪಟ್ಟಿ ಕೊಡುವಂತೆ ಎಐಸಿಸಿ ನಾಯಕರು ತಿಳಿಸಿದ್ದಾರೆ. ಕೆಲವರು ಆಸಕ್ತಿ ತೋರಿದ್ದಾರೆ, ಇನ್ನು ಕೆಲವರು ಇಲ್ಲ. ಕೆಲವರಿಗೆ ಕೇವಲ ಅಧಿಕಾರ ಮಾತ್ರ ಬೇಕು. ಈ ಕಾಂಗ್ರೆಸ್ ಕಚೇರಿ ದೇವಾಲಯ ಎಂಬುದನ್ನು ಕೆಲವರು ಮರೆತಿದ್ದಾರೆ. ಇದಕ್ಕೆ ನಾನು ಉತ್ತರ ನೀಡುವುದಿಲ್ಲ. ದೆಹಲಿ ನಾಯಕರು ಸರಿಯಾದ ಸಮಯದಲ್ಲಿ ಉತ್ತರ ನೀಡುತ್ತಾರೆ ಎಂದು ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್‌, ಪಕ್ಷ ಏನು ಹೇಳುತ್ತದೆಯೋ ಅದನ್ನು ನಾನು ಪಾಲಿಸುತ್ತೇನೆ. ಪಕ್ಷದ ಅಧ್ಯಕ್ಷರಾದವರು ಹೇಗೆ ಕೆಲಸ ಮಾಡಬೇಕೆಂಬುದಕ್ಕೆ ನಾನು ಉದಾಹರಣೆಯಾಗಬೇಕು, ಪಕ್ಷದಲ್ಲಿ ನಮ್ಮ ಗುರುತು ಬಿಟ್ಟುಹೋಗಬೇಕು. ನಾನು ಈ ವಿಚಾರವಾಗಿ ಮಾತನಾಡುತ್ತಿದ್ದೇನೆ ಹೊರತು, ತ್ಯಾಗ ಅಥವಾ ಓಡಿ ಹೋಗುವ ಬಗ್ಗೆ ಮಾತನಾಡುತ್ತಿಲ್ಲ. ನಾನು ಓಡಿ ಹೋಗುವ ಮನುಷ್ಯನಲ್ಲ. ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಅಧ್ಯಕ್ಷರು ಎಲ್ಲಿಯವರೆಗೂ ಜವಾಬ್ದಾರಿ ನಿಭಾಯಿಸಲು ಸೂಚಿಸುತ್ತಾರೋ ಅಲ್ಲಿಯವರೆಗೂ ನಾನು ಕರ್ತವ್ಯ ನಿಭಾಯಿಸುತ್ತೇನೆ ಎಂದರು.

ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ:

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ನೀವು ನಿಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ. ಅನೇಕ ನಿಗಮ-ಮಂಡಳಿ ನಿರ್ದೇಶಕರ ಪಟ್ಟಿ ಸಿದ್ಧವಾಗಿದ್ದು, ಮರುಪರಿಶೀಲನೆ ಮಾಡಿಸಿ, ಬ್ಲಾಕ್ ಅಧ್ಯಕ್ಷರಿಗೆ ಅಧಿಕಾರ ಕೊಡಬೇಕಾಗಿದೆ. ಪಕ್ಷದ ಸದಸ್ಯತ್ವ ನೋಂದಣಿಯಲ್ಲಿ ಹೆಚ್ಚು ಸದಸ್ಯತ್ವ ಮಾಡಿಸಿದ ಹೊಳಲ್ಕೆರೆಯ ಸವಿತಾ ಎಂಬಾಕೆಗೆ ಅಧ್ಯಕ್ಷ ಸ್ಥಾನ ಕೊಡಿಸಿದ್ದೆ. ಆಕೆ ಅಧಿಕಾರವನ್ನು ತನ್ನ ಗಂಡನಿಗೆ ಬಿಟ್ಟುಕೊಟ್ಟಿದ್ದಾಳೆ. ಅದಕ್ಕಾಗಿ ಎನ್ಎಸ್‌ಯುಐ, ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದವರಿಗೆ ಅವಕಾಶ ನೀಡಿದ್ದೇವೆ. ಕಾರ್ಯಕರ್ತರಿಗೆ ಅಧಿಕಾರ ನೀಡಿದ್ದೇವೆ. ಗ್ಯಾರಂಟಿ ಸಮಿತಿಗಳ ಮೂಲಕ ಪ್ರತಿ ಸಮಿತಿಯಲ್ಲಿ 15 ಕಾರ್ಯಕರ್ತರಿಗೆ ಅಧಿಕಾರ ನೀಡಿದ್ದೇವೆ. ಇಡೀ ದೇಶದಲ್ಲಿ ಕಾರ್ಯಕರ್ತರಿಗೆ ಈ ರೀತಿ ಅಧಿಕಾರ ನೀಡಿರುವುದು ನಮ್ಮಲ್ಲಿ ಮಾತ್ರ ಎಂದು ಹೇಳಿದರು.