ಸಾರಾಂಶ
ಪಹಲ್ಗಾಂ, ಸಿಂದೂರ, ಟ್ರಂಪ್, ಏರಿಂಡಿಯಾ ಸೇರಿ ಹಲವು ವಿಚಾರ ಚರ್ಚೆ
ಸರ್ಕಾರದ ಮೇಲೆ ಮುಗಿಬೀಳಲು ವಿಪಕ್ಷ ಸಜ್ಜು । ಸರ್ಕಾರದ ಪ್ರತಿತಂತ್ರನವದೆಹಲಿ: ಒಂದು ತಿಂಗಳ ಕಾಲ ನಡೆಯುಲಿರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಜು.21ರ ಸೋಮವಾರ ಚಾಲನೆ ಸಿಗಲಿದೆ. ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಪಹಲ್ಗಾಂ ದಾಳಿಯ ಬಳಿಕದ ಮೊದಲ ಸಂಸತ್ ಅಧಿವೇಶನ ಇದಾಗಿದೆ. ಒಂದೆಡೆ ಪಹಲ್ಗಾಂ ದಾಳಿ, ಬಳಿಕದ ಅಪರೇಷನ್ ಸಿಂದೂರ, ಭಾರತ- ಪಾಕ್ ಯುದ್ಧ ಸ್ಥಗಿತ ಕುರಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ, ಇತ್ತೀಚಿನ ಏರಿಂಡಿಯಾ ವಿಮಾನ ಪತನ, ಬಿಹಾರದಲ್ಲಿನ ವಿಶೇ಼ಷ ಮತಪಟ್ಟಿ ಪರಿಷ್ಕರಣೆ ಮೊದಲಾದ ವಿಷಯ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ.
ಇನ್ನೊಂದೆಡೆ ಸರ್ಕಾರ ಕೂಡಾ ಪ್ರತಿಪಕ್ಷಗಳನ್ನು ಹಣಿಸಲು ತನ್ನದೇ ಆದ ಪ್ರತಿತಂತ್ರ ರೂಪಿಸಿದೆ. ಮೇಲ್ಕಂಡ ವಿಷಯಗಳ ಕುರಿತು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉತ್ತರಕ್ಕೆ ವಿಪಕ್ಷಗಳು ಪಟ್ಟುಹಿಡಿಯುವ ಸಾಧ್ಯತೆ ಇದೆಯಾದರೂ, ಮೋದಿ ಉತ್ತರದ ಸಾಧ್ಯತೆ ಇಲ್ಲ. ಅವರ ಬದಲಾಗಿ ವಿದೇಶಾಂಗ ಸಚಿವ ಎಸ್.ಜೈಶಂಕರ್. ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ವಿಪಕ್ಷಗಳ ಏಟಿಗೆ ಎದಿರೇಟು ನೀಡುವ ಸಾಧ್ಯತೆ ದಟ್ಟವಾಗಿದೆ.ಸರ್ವಪಕ್ಷ ಸಭೆ:
ಈ ನಡುವೆ ಸುಗಮ ಕಲಾಪಕ್ಕೆ ಸಹಕಾರ ಕೋರುವ ನಿಟ್ಟಿನಲ್ಲಿ ಸರ್ಕಾರ, ಭಾನುವಾರ ಸರ್ವಪಕ್ಷ ಸಭೆ ಆಯೋಜಿಸಿತ್ತು. ಅದರಲ್ಲಿ ವಿಪಕ್ಷಗಳು, ಪಹಲ್ಗಾಂ, ಸಿಂದೂರ, ಬಿಹಾರ ಮತಪಟ್ಟಿ, ಏರಿಂಡಿಯಾ ಘಟನೆ ಕುರಿತು ವಿಸ್ತೃತ ಚರ್ಚೆಗೆ ಒತ್ತಾಯಿಸಿವೆ. ಸರ್ಕಾರ ಕೂಡಾ ವಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ತಾನು ಸಿದ್ಧ ಎಂಬ ಭರವಸೆ ನೀಡಿದೆ.ಜು.21ರಂದು ಆರಂಭವಾಗುವ ಅಧಿವೇಶನ ಆ.21ರವರೆಗೆ ನಡೆಯಲಿದೆ.
==ನಿಯೋಗಗಳ ವಿದೇಶ
ಭೇಟಿ ಯಶಸ್ಸು ಚರ್ಚೆ?ಪಹಲ್ಗಾಂ ದಾಳಿ, ಆಪರೇಷನ್ ಸಿಂದೂರದ ಬಗ್ಗೆ ಮುಂಗಾರು ಅಧಿವೇಶನದಲ್ಲಿ ವಿಪಕ್ಷಗಳು ಚರ್ಚೆ ನಡೆಸಲು ಸಿದ್ಧತೆ ನಡೆಸಿರುವ ನಡುವೆ ಬಿಜೆಪಿ ಮಿತ್ರಪಕ್ಷಗಳು ಸರ್ವಪಕ್ಷ ನಿಯೋಗದ ವಿದೇಶ ಭೇಟಿ ಯಶಸ್ಸನ್ನು ಸಂಸತ್‌ನಲ್ಲಿ ಆಚರಿಸಲು ನಿರ್ಧರಿಸಿವೆ.
ಸರ್ವಪಕ್ಷ ಸಭೆಯಲ್ಲಿ ಟಿಡಿಪಿಯ ಲಾವು ಶ್ರೀಕೃಷ್ಣ ದೇವರಾಯುಲು, ಜೆಡಿಯುನ ಸಂಜಯ್ ಝಾ ಮತ್ತು ಶಿವಸೇನೆಯ ಶ್ರೀಕಾಂತ ಶಿಂಧೆ ಅವರು ಈ ಬಗ್ಗೆ ಪ್ರಸ್ತಾಪಿಸಿದರು. ‘ಸರ್ವಪಕ್ಷ ನಿಯೋಗದ ವಿದೇಶ ಭೇಟಿಯು ಸಂಪೂರ್ಣವಾಗಿ ಯಶವಾಗಿದೆ. ಇದನ್ನು ಸಂಸತ್‌ನಲ್ಲಿ ಸಂಭ್ರಮಾಚರಿಸಬೇಕು’ ಎಂಬ ಪ್ರಸ್ತಾವವನ್ನು ಮುಂದಿಟ್ಟರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ‘ಈ ಯಶಸ್ಸನ್ನು ದೇಶದ ಮುಂದಿಡಬೇಕು. ಸರ್ವಪಕ್ಷಗಳ 50ಕ್ಕೂ ಹೆಚ್ಚು ಸಂಸದರು ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ’ ಎಂದು ಹೇಳಿದರು.==
ನ್ಯಾ। ವರ್ಮಾ ವಾಗ್ದಂಡನೆಗೆ 100 ಸಂಸದರ ಸಹಿ: ಸಚಿವ ರಿಜಿಜುನವದೆಹಲಿ: ಮನೆಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆ ಪ್ರಕರಣದಲ್ಲಿ ಕಾನೂನು ತನಿಖೆ ಎದುರಿಸುತ್ತಿರುವ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ವಾಗ್ದಂಡನೆಗೆ 100 ಸಂಸದರು ಸಹಿ ಹಾಕಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಸೋಮವಾರದಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನಕ್ಕೂ ಮುನ್ನ ಈ ಕುರಿತು ಪ್ರತಿಕ್ರಿಯಿಸಿರುವ ರಿಜಿಜು, ‘ಈಗಾಗಲೇ 100ಕ್ಕೂ ಹೆಚ್ಚು ಸಂಸದರು ಸಹಿ ಹಾಕಿದ್ದಾರೆ’ ಎಂದಿದ್ದಾರೆ. ವಾಗ್ದಂಡನೆ ಅಂಗೀಕಾರವಾಗಬೇಕಾದರೆ ಲೋಕಸಭೆಯಲ್ಲಿ ಕನಿಷ್ಟ 100, ರಾಜ್ಯಸಭೆಯಲ್ಲಿ ಕನಿಷ್ಠ 50 ಸದಸ್ಯರು ಸಹಿ ಹಾಕಬೇಕು. ಒಂದು ವೇಳೆ ನ್ಯಾ। ವರ್ಮಾ ವಿರುದ್ಧ ವಾಗ್ದಂಡನೆ ಮಂಡನೆಯಾದರೆ, ಇದು ದೇಶದ ಇತಿಹಾಸದಲ್ಲಿ ಮೊದಲ ಪ್ರಕರಣವಾಗಿರಲಿದೆ.