ಸಾರಾಂಶ
ವಿಧಾನಸಭೆ : 2025-26ನೇ ಸಾಲಿಗೆ ಐದು ಲಕ್ಷ ಕೋಟಿ ರು.ತೆರಿಗೆಯನ್ನು ರಾಜ್ಯದಿಂದ ಪಾವತಿಸಲಾಗುತ್ತಿದೆ. ಆದರೆ, ಕೇಂದ್ರದಿಂದ ರಾಜ್ಯಕ್ಕೆ ಕೇವಲ ಅಂದಾಜು 51 ಸಾವಿರ ಕೋಟಿ ರು.ಮಾತ್ರ ವಾಪಸ್ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸೋಮವಾರ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿ, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 11 ವರ್ಷಗಳಾದರೂ ಕೇಂದ್ರ ಸರ್ಕಾರ ವಿಧವಾ ವೇತನ, ಅಂತ್ಯೋದಯ ಯೋಜನೆ, ವೃದ್ಧಾಪ್ಯ ವೇತನವನ್ನು ಒಂದು ರುಪಾಯಿಯನ್ನೂ ಹೆಚ್ಚಿಸಿಲ್ಲ. ವಸತಿ ಯೋಜನೆಗಳಿಗೆ ಅನುದಾನವನ್ನು ಸಹ ಹೆಚ್ಚಳ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ 2,70,695 ಕೋಟಿ ರು.ಕಾಮಗಾರಿಗಳನ್ನು ಅನುದಾನ ಒದಗಿಸದೇ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದ ಮೂಲಕ 1,66,426 ಕೋಟಿ ರು.ನೀಡಲಾಗಿದೆ. 36 ಸಾವಿರ ಕೋಟಿ ಬಾಕಿ ಬಿಲ್ಲುಗಳು ಬಿಜೆಪಿಯ ಬಳುವಳಿಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ರೈಲ್ವೆ ಕೇಂದ್ರ ಸರ್ಕಾರದ ಸುಪರ್ದಿಗೆ ಬರುತ್ತದೆ. ಆದರೂ, ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರ ಉಚಿತ ಸ್ಥಳವನ್ನು ಒದಗಿಸುತ್ತದೆ. ಶೇ.50ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ವಹಿಸಿಕೊಳ್ಳುತ್ತದೆ. ರಾಜ್ಯಕ್ಕೆ ಅನ್ಯಾಯ ಮಾಡಬೇಡಿ ಎಂದು ನಿರ್ಮಲಾ ಸೀತಾರಾಮನ್ ಅವರ ಬಳಿ ಮೂರು ಬಾರಿ ಹೋಗಿ ಮನವಿ ಮಾಡಿದೆವು. ಆದರೂ ನ್ಯಾಯ ಸಿಗಲಿಲ್ಲ. ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರು. ಘೋಷಿಸಿದ್ದರೂ ಒಂದು ರುಪಾಯಿ ಬರಲಿಲ್ಲ. ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲಿಲ್ಲ. ಬಿಜೆಪಿಯವರು ಅದರ ಬಗ್ಗೆ ಒಂದು ಮಾತೂ ಆಡಲಿಲ್ಲ. ರಾಜ್ಯಕ್ಕೆ ಅನ್ಯಾಯವಾಗುತ್ತಿರುವಾಗ ಧ್ವನಿ ಎತ್ತಲಿಲ್ಲ ಎಂದು ಕಿಡಿಕಾರಿದರು.