ಅಭಿವೃದ್ಧಿ, ಪಾರದರ್ಶಕತೆ ಮತ್ತು ಬಡವರ ಸಬಲೀಕರಣ - ಈ ಮೂರೂ ಅಂಶಗಳು ಕಾಂಗ್ರೆಸ್‌ ಪಕ್ಷಕ್ಕೆ ಎಂದಿಗೂ ಅಲರ್ಜಿ. ದಶಕಗಳ ಕಾಲ ಬಡವರ ಹೆಸರಿನಲ್ಲಿ ಅಧಿಕಾರ ಅನುಭವಿಸಿ, ಅವರನ್ನೇ ವಂಚಿಸಿದ ಇತಿಹಾಸ ಕಾಂಗ್ರೆಸ್ಸಿಗರದ್ದು

ಲೇಖನ: ಡಾ। ಕೆ.ಸುಧಾಕರ್, ಸಂಸದರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ.

ಅಭಿವೃದ್ಧಿ, ಪಾರದರ್ಶಕತೆ ಮತ್ತು ಬಡವರ ಸಬಲೀಕರಣ - ಈ ಮೂರೂ ಅಂಶಗಳು ಕಾಂಗ್ರೆಸ್‌ ಪಕ್ಷಕ್ಕೆ ಎಂದಿಗೂ ಅಲರ್ಜಿ. ದಶಕಗಳ ಕಾಲ ಬಡವರ ಹೆಸರಿನಲ್ಲಿ ಅಧಿಕಾರ ಅನುಭವಿಸಿ, ಅವರನ್ನೇ ವಂಚಿಸಿದ ಇತಿಹಾಸ ಕಾಂಗ್ರೆಸ್ಸಿಗರದ್ದು. ಇಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ‘ವಿಕಸಿತ್ ಭಾರತ್ – ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಆಜೀವಿಕಾ ಮಿಷನ್ (ಗ್ರಾಮೀಣ)’ (ವಿಬಿ-ಜಿ ರಾಮ್‌ ಜಿ) ಕಾಯ್ದೆಯ ವಿರುದ್ಧ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಅಪಪ್ರಚಾರವು ಅದರ ರಾಜಕೀಯ ಹತಾಶೆಯ ಪರಮಾವಧಿಯೇ ಹೊರತು ಬಡವರ ಮೇಲಿನ ಕಾಳಜಿಯಲ್ಲ. ಈ ಕಾಯ್ದೆ ಗ್ರಾಮೀಣ ಭಾರತದ ಬದುಕನ್ನು ರೂಪಾಂತರಗೊಳಿಸುವ ಶಕ್ತಿ ಹೊಂದಿರುವುದರಿಂದಲೇ ಕಾಂಗ್ರೆಸ್‌ನ ನಕಲಿ ನೈತಿಕತೆ ಇಂದು ರಾಜ್ಯದ ಜನರೆದುರು ಬೆತ್ತಲಾಗುತ್ತಿದೆ.

ಕಾಂಗ್ರೆಸ್ ಬೂಟಾಟಿಕೆಗೆ ಕನ್ನಡಿ: ‘ಗಾಂಧಿ’ ಹೆಸರಲ್ಲೇ ಗ್ರಾಮೀಣ ಲೂಟಿ!:

ಮಹಾತ್ಮ ಗಾಂಧೀಜಿಯವರ ಹೆಸರನ್ನು ಕೇವಲ ಮತಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಂಡ ಕಾಂಗ್ರೆಸ್‌ಗೆ, ಈಗ ಆ ಹೆಸರಿನ ನೆರಳಲ್ಲೇ ನಡೆಯುತ್ತಿದ್ದ ಲೂಟಿಯ ದಾರಿಗಳು ಬಂದ್ ಆಗಲಿವೆ ಎಂಬ ಭೀತಿ ಶುರುವಾಗಿದೆ. ಮನರೇಗಾ ಯೋಜನೆಯಲ್ಲಿ ಕಾಂಗ್ರೆಸ್ ಹತ್ತಾರು ವರ್ಷಗಳಿಂದ ಸೃಷ್ಟಿಸಿದ್ದ ನಕಲಿ ಜಾಬ್ ಕಾರ್ಡ್‌ಗಳು, ಸತ್ತವರ ಹೆಸರಲ್ಲಿ ಹಣ ಹೊಡೆಯುವ ದಂಧೆ ಮತ್ತು ಪಂಚಾಯಿತಿ ಮಟ್ಟದ ಮಧ್ಯವರ್ತಿಗಳ ಮಾಫಿಯಾಕ್ಕೆ ವಿಬಿ ಜಿ ರಾಮ್‌ ಜಿ ಅಂತ್ಯ ಹಾಡಲಿದೆ.

ಕಾಂಗ್ರೆಸ್ ನಾಯಕರು ಇಂದು ಬೀದಿಗೆ ಇಳಿದು ಬೊಬ್ಬೆ ಹೊಡೆಯುತ್ತಿರುವುದು ಬಡವರಿಗಾಗಿ ಅಲ್ಲ; ಬದಲಿಗೆ ಹಳ್ಳಿ ಹಳ್ಳಿಗಳಲ್ಲಿ ತಮ್ಮ ಏಜೆಂಟುಗಳಿಗೆ ಸಿಗುತ್ತಿದ್ದ 40% ಕಮಿಷನ್ ದಂಧೆ ನಿಂತುಹೋಗುತ್ತದೆ ಎಂಬ ಆತಂಕದಿಂದ. ‘ಗಾಂಧೀಜಿಯವರ ಹೆಸರು ತೆಗೆದಿದ್ದಾರೆ’ ಎಂದು ಮೊಸಳೆ ಕಣ್ಣೀರು ಸುರಿಸುವವರು ಒಂದನ್ನು ನೆನಪಿಸಿಕೊಳ್ಳಲಿ - ಗಾಂಧೀಜಿಯವರ ಆಶಯ ‘ಗ್ರಾಮ ಸ್ವರಾಜ್ಯ’ವಾಗಿತ್ತೇ ಹೊರತು, ಕಾಂಗ್ರೆಸ್ಸಿಗರ ‘ಗ್ರಾಮ ಲೂಟಿ’ ಆಗಿರಲಿಲ್ಲ. ವಿಕಸಿತ ಭಾರತದ ಕನಸನ್ನು ನನಸು ಮಾಡಲು ಹಳ್ಳಿಗಳು ಸ್ವಾವಲಂಬಿಯಾಗಬೇಕು, ಅಲ್ಲಿನ ಪ್ರತಿಯೊಂದು ರುಪಾಯಿ ನೇರವಾಗಿ ಬಡವನ ಕೈ ಸೇರಬೇಕು ಎನ್ನುವುದು ಪ್ರಧಾನಿ ಮೋದಿಯವರ ಸಂಕಲ್ಪ.

ತಂತ್ರಜ್ಞಾನದ ಬಳಕೆ: ಭ್ರಷ್ಟಾಚಾರದ ಬೇರುಗಳಿಗೆ ಡಿಜಿಟಲ್ ಪೆಟ್ಟು:

ಈ ಹೊಸ ಕಾಯ್ದೆಯು ಗ್ರಾಮೀಣ ಭಾರತದಲ್ಲಿ ತಂತ್ರಜ್ಞಾನದ ಕ್ರಾಂತಿಯನ್ನೂ ತಂದಿದೆ. ಕಾಂಗ್ರೆಸ್ ಕಾಲದ ಹಳೇ ವ್ಯವಸ್ಥೆಯಲ್ಲಿ ಕಾಮಗಾರಿಗಳು ಎಲ್ಲಿ ನಡೆಯುತ್ತಿವೆ, ಎಷ್ಟು ಕೆಲಸವಾಗಿದೆ ಎಂದು ತಿಳಿಯಲು ಯಾವುದೇ ನಿಖರ ಮಾರ್ಗವಿರಲಿಲ್ಲ. ಇದರಿಂದಾಗಿ ಕಾಗದದ ಮೇಲೆ ಮಾತ್ರ ರಸ್ತೆಗಳಾಗುತ್ತಿದ್ದವು, ಹಣ ಮಾತ್ರ ನಾಯಕರ ಜೇಬಿಗೆ ಸೇರುತ್ತಿತ್ತು. ಆದರೆ ಈಗ ಮೋದಿಯವರ ವಿಬಿ ಜಿ ರಾಮ್‌ ಜಿ ಯೋಜನೆಯಲ್ಲಿ ಪ್ರತಿಯೊಂದು ಕೆಲಸಕ್ಕೂ ಜಿಯೋ-ಟ್ಯಾಗಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ. ಪ್ರತಿಯೊಂದು ಕಾಮಗಾರಿಯ ಆರಂಭ, ಮಧ್ಯದ ಹಂತ ಮತ್ತು ಮುಕ್ತಾಯದ ಫೋಟೋಗಳನ್ನು ಉಪಗ್ರಹ ಆಧಾರಿತ ತಂತ್ರಜ್ಞಾನದ ಮೂಲಕ ದಾಖಲಿಸುವುದರಿಂದ, ಕೆಲಸ ಮಾಡದೆ ಹಣ ಪಡೆಯುವ ‘ಘೋಸ್ಟ್ ವರ್ಕ್’ ಸಂಸ್ಕೃತಿಗೆ ಶಾಶ್ವತವಾಗಿ ಎಳ್ಳುನೀರು ಬಿಡಲಾಗಿದೆ.

ಇನ್ನು ಉದ್ಯೋಗಿಗಳ ಹಾಜರಾತಿಯಲ್ಲಿ ನಡೆಯುತ್ತಿದ್ದ ವಂಚನೆಗೆ ಎನ್‌ಎಂಎಂಎಸ್‌ (ನ್ಯಾಷನಲ್‌ ಮೊಬೈಲ್‌ ಮಾನಿಟರಿಂಗ್‌ ಸಿಸ್ಟಮ್‌) ಮೂಲಕ ಕಡಿವಾಣ ಹಾಕಲಾಗಿದೆ. ಕೆಲಸದ ಸ್ಥಳದಲ್ಲೇ ಕಾರ್ಮಿಕರ ಫೋಟೋ ಮತ್ತು ಸಮಯವನ್ನು ಡಿಜಿಟಲ್ ರೂಪದಲ್ಲಿ ದಾಖಲಿಸುವುದರಿಂದ, ನಕಲಿ ಹೆಸರುಗಳನ್ನು ಸೇರಿಸಿ ಹಣ ಲೂಟಿ ಮಾಡುವ ಕಾಂಗ್ರೆಸ್ ಏಜೆಂಟರ ಆಟ ನಡೆಯುವುದಿಲ್ಲ. ಇದರ ಜೊತೆಗೆ, ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯು (ಎಬಿಪಿಎಸ್‌) ಪ್ರತಿಯೊಬ್ಬ ಬಡವನ ಬೆವರಿನ ಹನಿಗೂ ತಕ್ಕ ಪ್ರತಿಫಲ ಸಿಗುವಂತೆ ಮಾಡುತ್ತಿದೆ. ಹಣವು ಯಾವುದೇ ಮಧ್ಯವರ್ತಿಗಳ ಕೈಗೆ ಹೋಗದೆ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ತಂತ್ರಜ್ಞಾನದ ಈ ಕವಚವು ಬಡವರ ಪಾಲಿನ ಹಣವನ್ನು ರಕ್ಷಿಸುತ್ತಿದ್ದರೆ, ಹೈಟೆಕ್ ಕಳ್ಳತನಕ್ಕೆ ದಾರಿ ಕಾಣದ ಕಾಂಗ್ರೆಸ್ ನಾಯಕರು ‘ತಂತ್ರಜ್ಞಾನದ ಹೆಸರಲ್ಲಿ ಬಡವರಿಗೆ ತೊಂದರೆ ನೀಡಲಾಗುತ್ತಿದೆ’ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ವಾಸ್ತವದಲ್ಲಿ ಅವರಿಗೆ ತೊಂದರೆ ಆಗುತ್ತಿರುವುದು ತಂತ್ರಜ್ಞಾನದಿಂದಲ್ಲ, ತಮ್ಮ ಕಳ್ಳದಾರಿಗಳು ಮುಚ್ಚಿಹೋಗುತ್ತಿರುವುದರಿಂದ!

‘ರಾಮ್ ಜಿ’ ಕಾಯ್ದೆಯ ಕ್ರಾಂತಿಕಾರಿ ಬದಲಾವಣೆಗಳು:

ಹಳೆಯ ಯೋಜನೆಯಲ್ಲಿ ಬಡವರಿಗೆ ಕೇವಲ 100 ದಿನಗಳ ಉದ್ಯೋಗ ಭರವಸೆ ಇತ್ತು. ಆದರೆ ಮೋದಿಯವರ ಸರ್ಕಾರ ಇದನ್ನು 125 ದಿನಗಳಿಗೆ ಹೆಚ್ಚಿಸಿದೆ.

*ನೈಜ ಆಸ್ತಿ ಸೃಜನೆ: ಕಾಂಗ್ರೆಸ್ ಕಾಲದ ನರೇಗಾ ಅಂದರೆ ಕೇವಲ ಗುಂಡಿ ತೆಗೆದು ಮುಚ್ಚುವುದು ಎನ್ನುವ ಹಾಸ್ಯಾಸ್ಪದ ಸ್ಥಿತಿ ಇತ್ತು. ಆದರೆ ಈಗ, ಶಾಲಾ ಕೊಠಡಿಗಳು, ಅಂಗನವಾಡಿ ಕೇಂದ್ರಗಳು ಮತ್ತು ಶಾಶ್ವತ ಮೂಲಸೌಕರ್ಯಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.

*ಗ್ರಾಮ ಸಭೆಗಳ ಸಬಲೀಕರಣ: ದೆಹಲಿಯಿಂದ ಯೋಜನೆಯನ್ನು ಹೇರುವ ಬದಲು, ಗ್ರಾಮದ ಜನರೇ ತಮಗೆ ಬೇಕಾದ ಕೆಲಸವನ್ನು ಗ್ರಾಮ ಸಭೆಗಳ ಮೂಲಕ ನಿರ್ಧರಿಸುವ ಅಧಿಕಾರವನ್ನು ನೀಡಲಾಗಿದೆ.

*ಡ್ರೋನ್ ಸರ್ವೇ:

ಪ್ರತಿ ಪಂಚಾಯಿತಿಯ ಅಭಿವೃದ್ಧಿ ಕಾಮಗಾರಿಗಳನ್ನು ಡ್ರೋನ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಸಂಪೂರ್ಣ ಪಾರದರ್ಶಕತೆಯನ್ನು ತರಲಾಗಿದೆ.

ರಾಜ್ಯ ಸರ್ಕಾರದ ಖಾಲಿ ಖಜಾನೆ: ಇದು ಕಾಂಗ್ರೆಸ್ನಾಯಕರ ಅಸಲಿ ಭಯ:

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರೋಧದ ಹಿಂದೆ ಮತ್ತೊಂದು ಅಸಹ್ಯಕರ ಸತ್ಯ ಅಡಗಿದೆ. ಕೇಂದ್ರದ ಈ ಯೋಜನೆಯಡಿ ರಾಜ್ಯ ಸರ್ಕಾರ ನೀಡಬೇಕಾದ ಶೇಕಡ 40ರಷ್ಟು ಪಾಲಿನ ಅನುದಾನವನ್ನು ಒದಗಿಸಲು ಕಾಂಗ್ರೆಸ್ ಸರ್ಕಾರ ಶಕ್ತವಾಗಿಲ್ಲ. ‘ಗ್ಯಾರಂಟಿ’ಗಳ ನೆಪದಲ್ಲಿ ರಾಜ್ಯದ ಖಜಾನೆಯನ್ನು ದಿವಾಳಿ ಮಾಡಿರುವ ಕಾಂಗ್ರೆಸ್‌ ಸರ್ಕಾರ, ಈಗ ಬಡವರ ಉದ್ಯೋಗದ ಪಾಲಿನ ಹಣ ಕೊಡಲು ಹಣವಿಲ್ಲದೆ ಕಂಗಾಲಾಗಿದೆ. ಈ ಯೋಜನೆಯಡಿ ರಾಜ್ಯದಲ್ಲಿ ಸಾವಿರಾರು ಹೊಸ ಶಾಲಾ ಕೊಠಡಿಗಳು ನಿರ್ಮಾಣವಾಗುವ ಅವಕಾಶವಿದ್ದರೂ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದರೆ, ಇವರಿಗೆ ಮಕ್ಕಳ ಶಿಕ್ಷಣಕ್ಕಿಂತ ತಮ್ಮ ರಾಜಕೀಯ ಅಸ್ತಿತ್ವವೇ ಮುಖ್ಯವಾಗಿದೆ.

ಕಾಂಗ್ರೆಸ್‌ಗೆ ನನ್ನ ನೇರ ಸವಾಲು:

ಈ ಯೋಜನೆಯನ್ನು ‘ಸಂವಿಧಾನ ವಿರೋಧಿ’ ಎಂದು ಕರೆಯುವ ಮೂಲಕ ಕಾಂಗ್ರೆಸ್ ನಾಯಕರು ಸಂವಿಧಾನ ಶಿಲ್ಪಿ ಡಾ। ಬಿ.ಆರ್.ಅಂಬೇಡ್ಕರ್ ಅವರ ಆಶಯಗಳಿಗೂ ಅವಮಾನ ಮಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ‘ರಾಮ್ ಜಿ’ ಎಂಬ ಹೆಸರನ್ನು ಕಂಡರೆ ಅಸಹನೆ. ಗಾಂಧೀಜಿಯವರು ಪ್ರತಿಪಾದಿಸಿದ ‘ರಾಮರಾಜ್ಯ’ ಎಂದರೆ ಶೋಷಣೆಯಿಲ್ಲದ, ಭ್ರಷ್ಟಾಚಾರ ಮುಕ್ತವಾದ ಬದುಕು. ಆ ರಾಮರಾಜ್ಯದ ಕನಸನ್ನು ಸಾಕಾರಗೊಳಿಸುವುದು ಈ ಕಾಯ್ದೆಯ ಮೂಲ ಉದ್ದೇಶ.

ನಾನು ರಾಜ್ಯದ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕುತ್ತೇನೆ:

ನಿಮಗೆ ನಿಜವಾಗಿಯೂ ಬಡವರ ಬಗ್ಗೆ ಕಾಳಜಿ ಇದ್ದರೆ, ವಿಧಾನಸಭೆಯ ಅಧಿವೇಶನದಲ್ಲಿ ನಿಮ್ಮ ಹೈಕಮಾಂಡನ್ನು ಮೆಚ್ಚಿಸಲು ಸುಳ್ಳು ಭಾಷಣಗಳನ್ನು ಮಾಡಬೇಡಿ. ಬದಲಾಗಿ ಕೇಂದ್ರದ ಈ ಕ್ರಾಂತಿಕಾರಿ ಕಾಯ್ದೆಯನ್ನು ಜಾರಿಗೆ ತರಲು ಪೂರ್ಣ ಸಹಕಾರ ನೀಡಿ. ನಿಮ್ಮ ರಾಜಕೀಯ ಲಾಭಕ್ಕಾಗಿ ಜನರನ್ನು ದಾರಿ ತಪ್ಪಿಸುವ ಅಪಪ್ರಚಾರ ಬಿಟ್ಟು, ಗ್ರಾಮೀಣ ಭಾರತದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ.

ವಿಕಸಿತ ಭಾರತದ ಹಾದಿಯಲ್ಲಿ ವಿಬಿ-ಜಿ ರಾಮ್‌ ಜಿ ಕೇವಲ ಒಂದು ಯೋಜನೆಯಲ್ಲ, ಅದು ಪ್ರತಿ ಗ್ರಾಮದ ಪಾಲಿನ ಆಶಾಕಿರಣ. ಕಾಂಗ್ರೆಸ್‌ನ ಸುಳ್ಳಿನ ಕೋಟೆಗಳು ಬಹಳ ದಿನ ಉಳಿಯುವುದಿಲ್ಲ. ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಈ ಜನವಿರೋಧಿ ಸರ್ಕಾರಕ್ಕೆ ನಾಡಿನ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ.