ಸಾರಾಂಶ
ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ‘ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ 2024’ ಪ್ರತಿಪಕ್ಷಗಳಿಗೆ ಬಹುಮತವಿದ್ದರೂ ಮೇಲ್ಮನೆಯಲ್ಲಿ ಅಂಗೀಕಾರಗೊಂಡು ಬಿಜೆಪಿ-ಜೆಡಿಎಸ್ ತೀವ್ರ ಮುಖಭಂಗ ಎದುರಿಸಬೇಕಾಯಿತು.
ಸುವರ್ಣ ವಿಧಾನ ಪರಿಷತ್ : ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ‘ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ 2024’ ಪ್ರತಿಪಕ್ಷಗಳಿಗೆ ಬಹುಮತವಿದ್ದರೂ ಮೇಲ್ಮನೆಯಲ್ಲಿ ಅಂಗೀಕಾರಗೊಂಡು ಬಿಜೆಪಿ-ಜೆಡಿಎಸ್ ತೀವ್ರ ಮುಖಭಂಗ ಎದುರಿಸಬೇಕಾಯಿತು. ವಿಧೇಯಕವನ್ನು ಬಲವಾಗಿ ವಿರೋಧಿಸಿದ್ದ ಬಿಜೆಪಿ-ಜೆಡಿಎಸ್ ಕೇವಲ ಒಂದು ಮತದಿಂದ ಸೋಲೊಪ್ಪಿಕೊಳ್ಳಬೇಕಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಮಂಡಿಸಿದ ಈ ವಿಧೇಯಕಕ್ಕೆ ಬಿಜೆಪಿ-ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಬಳಿಕ ವಿಧೇಯಕವನ್ನು ಮತಕ್ಕೆ ಹಾಕಲಾಯಿತು. ಈ ವೇಳೆ ವಿಧೇಯಕದ ಪರ 26 ಮತ್ತು ವಿರುದ್ಧ 25 ಮತಗಳು ಬಿದ್ದವು. ಹೀಗಾಗಿ ವಿಧೇಯಕ ಒಂದು ಮತದಿಂದ ಮೇಲ್ಮನೆಯಲ್ಲಿ ಅಂಗೀಕಾರಗೊಂಡಿತು.
ವಿಧೇಯಕ ಮಂಡಿಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯಕ್ಕೆ ಪ್ರಸ್ತುತ ರಾಜ್ಯಪಾಲರು ಕುಲಾಧಿಪತಿಯಾಗಿದ್ದಾರೆ. ಈ ವಿಶ್ವವಿದ್ಯಾಲಯವನ್ನು ಮತ್ತಷ್ಟು ಅಭಿವೃದ್ಧಿ ಹಾಗೂ ಕಾರ್ಯ ನಿರ್ವಹಣೆ ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯಪಾಲರ ಬದಲಾಗಿ ಮುಖ್ಯಮಂತ್ರಿಯನ್ನು ಈ ವಿಶ್ವವಿದ್ಯಾಲಯದ ಕುಲಾಧಿಪತಿ ಮಾಡಲು ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯಪಾಲರ ದ್ವೇಷದ ಬಿಲ್:
ವಿಧೇಯಕದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಜೆಡಿಎಸ್ ಸದಸ್ಯ ಟಿ.ಎ.ಶರವಣ, ಈ ವಿಧೇಯಕ ರಾಜ್ಯಪಾಲರ ಮೇಲಿನ ದ್ವೇಷದ ಬಿಲ್ ಅನಿಸುತ್ತದೆ. ಈ ವಿಶ್ವವಿದ್ಯಾಲಯಕ್ಕೆ ರಾಜ್ಯಪಾಲರ ಬದಲಾಗಿ ಮುಖ್ಯಮಂತ್ರಿಯನ್ನು ಕುಲಾಧಿಪತಿಯಾಗಿ ನೇಮಿಸುವುದರಿಂದ ಸಾಂವಿಧಾನಿಕ ಪೀಠಕ್ಕೆ ಧಕ್ಕೆಯಾಗುತ್ತದೆ. ರಾಜ್ಯಪಾಲರನ್ನು ದೂರ ಇಡುವುದರಿಂದ ಸರ್ಕಾರಕ್ಕೆ ಲಾಭ ಏನು ಎಂದು ಪ್ರಶ್ನಿಸಿದರು. ವಿಶ್ವವಿದ್ಯಾಲಯಗಳನ್ನು ರಾಜಕೀಯದಿಂದ ದೂರು ಇಡಬೇಕು ಎಂಬುದು ಎಲ್ಲರ ಬಯಕೆ. ಸದಾ ಕಾರ್ಯದೊತ್ತಡದಲ್ಲಿರುವ ಮುಖ್ಯಮಂತ್ರಿಗಳು ಈ ಜವಾಬ್ದಾರಿ ನಿರ್ವಹಿಸುವುದು ಕಷ್ಟ. ಹೀಗಾಗಿ ಈ ವಿಧೇಯಕ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸದಸ್ಯ ನವೀನ್ ಮಾತನಾಡಿ, ವಿಶ್ವವಿದ್ಯಾಲಯಕ್ಕೆ ರಾಜಕೀಯ ಲೇಪನ ಹಾಕಬಾರದು. ಮುಖ್ಯಮಂತ್ರಿಗಳನ್ನು ಕುಲಾಧಿಪತಿಯಾಗಿ ನೇಮಿಸುವುದರಿಂದ ವಿಶ್ವವಿದ್ಯಾಲಯದ ಮೂಲತತ್ವ ಕಲುಷಿತಗೊಳ್ಳಲಿದೆ. ವಿಶ್ವವಿದ್ಯಾಲಯದಲ್ಲಿ ರಾಜಕೀಯ ಹಸ್ತಕ್ಷೇಪ ಸರಿಯಲ್ಲ ಎಂದು ವಿಧೇಯಕವನ್ನು ವಿರೋಧಿಸಿದರು.
ಸಿ.ಟಿ.ರವಿ ಮಾತನಾಡಿ, ಬಹುತೇಕ ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರೇ ಕುಲಾಧಿಪತಿಗಳಾಗಿದ್ದಾರೆ. ರಾಜ್ಯಪಾಲರದ್ದು ಸಾಂವಿಧಾನಿಕ ಹುದ್ದೆ. ಮುಖ್ಯಮಂತ್ರಿ ಕುಲಾಧಿಪತಿಯಾದರೆ, ಕುಲಪತಿಗಳ ನೇಮಕಕ್ಕೆ ಶೋಧನಾ ಸಮಿತಿ ಯಾರು ನೇಮಿಸುತ್ತಾರೆ. ಹೀಗಾಗಿ ವಿಧೇಯಕಕ್ಕೆ ತಿದ್ದುಪಡಿ ಅಗತ್ಯವಿಲ್ಲ ಎಂದರು.
ಬಿಜೆಪಿಯ ಕೇಶವಪ್ರಸಾದ್ ಮಾತನಾಡಿ, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದಕ್ಕಾಗಿ ಈ ವಿಧೇಯಕದ ಮೂಲಕ ರಾಜ್ಯಪಾಲರನ್ನು ಕುಲಾಧಿಪತಿ ಸ್ಥಾನದಿಂದ ಬದಲಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ಅದೇ ರೀತಿ ಬಿಜೆಪಿ-ಜೆಡಿಎಸ್‌ನ ಎಲ್ಲ ಸದಸ್ಯರು ಈ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಮಾತನಾಡಿ, ರಾಜ್ಯಪಾಲರ ಹುದ್ದೆ ಸಾಂವಿಧಾನಿಕ ಹುದ್ದೆ. ಆದರೆ ರಾಜ್ಯಪಾಲರು ಬಿಳಿಯಾನೆ ಇದ್ದಂತೆ. ಮುಖ್ಯಮಂತ್ರಿ ಕುಲಾಧಿಪತಿಯಾದರೆ, ಸರ್ಕಾರದ ಗಮನ ಸೆಳೆಯಬಹುದು. ಹೋರಾಟ ಮಾಡಿಯಾದರೂ ಬೇಡಿಕೆ ಈಡೇರಿಸಿಕೊಳ್ಳಬಹುದು. ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರು, ಕುಲಪತಿಗಳು ಹಾಗೂ ಕುಲಸಚಿವರ ನೇಮಕಕ್ಕೆ ಏಜೆಂಟರು ಹುಟ್ಟಿಕೊಂಡಿದ್ದಾರೆ. ಈ ವ್ಯವಸ್ಥೆ ಸರಿ ಹೋಗಬೇಕಾದರೆ, ಮುಖ್ಯಮಂತ್ರಿಗಳೇ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಬೇಕು ಎಂದು ಪ್ರತಿಪಾದಿಸಿದರು.
ವಿಧೇಯಕ ಕುರಿತು ಸದಸ್ಯರ ಪರ-ವಿರೋಧ ಚರ್ಚೆ ಬಳಿಕ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಈ ವಿಧೇಯಕದ ಹಿಂದೆ ಯಾವುದೇ ರಾಜಕೀಯ, ದ್ವೇಷದ ಉದ್ದೇಶವಿಲ್ಲ. ರಾಜ್ಯಪಾಲರ ಜತೆಗೆ ಸಂಘರ್ಷವೂ ಇಲ್ಲ. ರಾಜ್ಯಪಾಲರ ಹುದ್ದೆ ಬಗ್ಗೆ ಗೌರವವಿದೆ. ರಾಜ್ಯಪಾಲರು ಸಹಕಾರ ನೀಡುತ್ತಿಲ್ಲ ಎಂದು ಎಲ್ಲೂ ಹೇಳಿಲ್ಲ. ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಪರಿಣಾಮಕಾರಿ ನಿರ್ವಹಣೆ, ಗುಣಮಟ್ಟದ ಶಿಕ್ಷಣ, ಸಂಶೋಧನೆ, ತರಬೇತಿ ಉದ್ದೇಶದಿಂದ ವಿಧೇಯಕಕ್ಕೆ ತಿದ್ದುಪಡಿ ಮಾಡಿದ್ದೇವೆ ಎಂದರು.
ಸಂವಿಧಾನದಲ್ಲಿ ಇಲ್ಲ:
ವಿಶ್ವವಿದ್ಯಾಲಯಗಳಿಗೆ ಕೇವಲ ರಾಜ್ಯಪಾಲರೇ ಕುಲಾಧಿಪತಿ ಆಗಬೇಕು ಎಂದು ಸಂವಿಧಾನದಲ್ಲಿ ಇಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವ ಉತ್ತರಪ್ರದೇಶ, ಅರುಣಾಚಲಪ್ರದೇಶ ಸೇರಿ ಕೆಲ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಮುಖ್ಯಮಂತ್ರಿಗಳೇ ಕುಲಾಧಿಪತಿಯಾಗಿದ್ದಾರೆ. ಹೀಗಾಗಿ ಇದರಲ್ಲಿ ರಾಜಕೀಯ ಪ್ರೇರಿತ ಇಲ್ಲ. ಪ್ರಗತಿಪರ ಹಾದಿಯಲ್ಲಿ ನಾವೂ ಹೋಗುತ್ತಿದ್ದೇವೆ. ಹೀಗಾಗಿ ವಿಪಕ್ಷಗಳಿಗೆ ಈ ದ್ವಂದ್ವ ನಿಲುವು ಇರಬಾರದು ಎಂದು ವಿಧೇಯಕವನ್ನು ಸಮರ್ಥಿಸಿಕೊಂಡು ಅನುಮೋದನೆಗೆ ಕೋರಿದರು.
ಈ ವೇಳೆ ವಿಪಕ್ಷಗಳು ವಿಧೇಯಕವನ್ನು ಮತಕ್ಕೆ ಹಾಕುವಂತೆ ಪೀಠಕ್ಕೆ ಮನವಿ ಮಾಡಿದರು. ಅದರಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಮತಕ್ಕೆ ಹಾಕಿದರು. ಈ ವೇಳೆ ವಿಧೇಯಕದ ವಿರುದ್ಧ 25 ಮತಗಳು ಹಾಗೂ ಪರ 26 ಮತಗಳು ಬಿದ್ದವು. ಹೀಗಾಗಿ ಒಂದು ಮತದಿಂದ ವಿಧೇಯಕ ಅಂಗೀಕಾರಗೊಂಡಿತು. ಮತಕ್ಕೆ ಆಗ್ರಹಿಸಿದ್ದ ಬಿಜೆಪಿ-ಜೆಡಿಎಸ್ ಸದಸ್ಯರು ಪೆಚ್ಚಾದರು.