ಕಾಂಗ್ರೆಸ್‌ ಸಂವಿಧಾನ ವಿರೋಧಿ: ಶಾ

| Published : Dec 18 2024, 12:47 AM IST

ಕಾಂಗ್ರೆಸ್‌ ಸಂವಿಧಾನ ವಿರೋಧಿ: ಶಾ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಪಕ್ಷವು ಭಾರತದ ಸಂವಿಧಾನವನ್ನು ಒಂದು ಕುಟುಂಬದ ‘ಖಾಸಗಿ ಆಸ್ತಿ’ ಎಂದು ಪರಿಗಣಿಸಿದೆ. ಚುನಾವಣೆಯಲ್ಲಿ ಸೋಲುವ ಭಯದಿಂದಾಗಿ 42ನೇ ಸಂವಿಧಾನ ತಿದ್ದುಪಡಿ ತರುವ ಮೂಲಕ ಲೋಕಸಭೆಯ ಅವಧಿಯನ್ನು ಹೆಚ್ಚಿಕೊಂಡಿತು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ: ಕಾಂಗ್ರೆಸ್‌ ಪಕ್ಷವು ಭಾರತದ ಸಂವಿಧಾನವನ್ನು ಒಂದು ಕುಟುಂಬದ ‘ಖಾಸಗಿ ಆಸ್ತಿ’ ಎಂದು ಪರಿಗಣಿಸಿದೆ. ಚುನಾವಣೆಯಲ್ಲಿ ಸೋಲುವ ಭಯದಿಂದಾಗಿ 42ನೇ ಸಂವಿಧಾನ ತಿದ್ದುಪಡಿ ತರುವ ಮೂಲಕ ಲೋಕಸಭೆಯ ಅವಧಿಯನ್ನು ಹೆಚ್ಚಿಕೊಂಡಿತು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಂವಿಧಾನ ಅಳವಡಿಸಿಕೊಂಡ 75 ವರ್ಷಗಳ ಕುರಿತ ಚರ್ಚೆಗೆ ಉತ್ತರಿಸಿದ ಅವರು, ‘ಸಂವಿಧಾನವು ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸುತ್ತದೆ. ರಕ್ತಪಾತವಿಲ್ಲದೆ ಅಧಿಕಾರದ ಹಸ್ತಾಂತರಕ್ಕೆ ಸಹಕಾರಿಯಾಗಿದೆ. ಬಿಜೆಪಿ 16 ವರ್ಷದಲ್ಲಿ 22 ಸಾಂವಿಧಾನಿಕ ತಿದ್ದುಪಡಿ ಮಾಡಿತು. ಆದರೆ ಕಾಂಗ್ರೆಸ್‌ 55 ವರ್ಷದಲ್ಲಿ 77 ತಿದ್ದುಪಡಿ ಮಾಡಿತ್ತು’ ಎಂದರು.

‘ಕಾಂಗ್ರೆಸ್‌ ಸಂವಿಧಾನದ ಖಾಲಿ ಹಾಳೆಯ ನಕಲಿ ಪ್ರತಿಗಳನ್ನು ತೋರಿಸುತ್ತಿರುವುದು ಜನರಿಗೆ ತಿಳಿದಿದ್ದರಿಂದಲೇ ಅವರು (ಕಾಂಗ್ರೆಸ್‌) ಸೋತರು’ ಎಂದು ಲೇವಡಿ ಮಾಡಿದರು.

ಕುಟುಂಬ ರಾಜಕೀಯ:

ಈ ವೇಳೆ ಕಾಂಗ್ರೆಸ್‌ನ ಕುಟುಂಬ ರಾಜಕಾರಣವನ್ನು ಟೀಕಿಸಿದ ಶಾ, ‘ಆ ಪಕ್ಷದವರು ನೆಹರು-ಗಾಂಧಿ ಕುಟುಂಬದ ಸುತ್ತ ಸುತ್ತುವುದು ಬಿಟ್ಟರೆ ಬೇರೇನೂ ಮಾಡಲಿಲ್ಲ. ಹಿಂದುಳಿದ ವರ್ಗದ ಜನರಿಗಾಗಿ ಕಾಂಗ್ರೆಸ್‌ ಏನೂ ಮಾಡಲಿಲ್ಲ. ಮೋದಿ ಸರ್ಕಾರ ಅವರ ಏಳಿಗೆಗಾಗಿ ಶ್ರಮಿಸುತ್ತಿದ್ದು, ದೇಶವನ್ನು ಗುಲಾಮಗಿರಿ ಮನಸ್ಥಿತಿಯಿಂದ ಮುಕ್ತಗೊಳಿಸಿದೆ. ಇಂದು ಎಲ್ಲಾ ಮಕ್ಕಳಿಗೂ ತುರ್ತು ಸ್ಥಿತಿಯ ಬಗ್ಗೆ ತಿಳಿಸುವುದು ಅವಶ್ಯಕ. ಆಗ ಯಾರೂ ಅದನ್ನು ಇನ್ನೊಮ್ಮೆ ಜಾರಿ ಮಾಡುವ ಧೈರ್ಯ ತೋರುವುದಿಲ್ಲ’ ಎಂದರು.

‘370 ವಿಧಿಯನ್ನು ತೆಗೆದುಹಾಕಲು ಕಬ್ಬಿಣದಂತಹ ಹೃದಯ ಬೇಕು. ಅದು ರದ್ದಾದ ಬಳಿಕ ಕಳೆದ 5 ವರ್ಷಗಳಲ್ಲಿ ಜಮ್ಮು ಕಾಶ್ಮೀರ 1.19 ಲಕ್ಷ ಕೋಟಿರು. ಮೌಲ್ಯದ ಹೂಡಿಕೆಯನ್ನು ಆಕರ್ಶಿಸಿದೆ’ ಎಂದರು.

ಮೀಸಲು ವಿರೋಧಿ ಕಾಂಗ್ರೆಸ್‌:

ಮೀಸಲಾತಿಯ ಬಗ್ಗೆ ಮಾತನಾಡಿದ ಶಾ, ‘ಇಂದು ಶೇ.50ಕ್ಕಿಂತ ಹೆಚ್ಚು ಮೀಸಲು ಬಯಸುತ್ತಿರುವ ಕಾಂಗ್ರೆಸ್‌, 1955ರ ಒಬಿಸಿ ಸಮಿತಿ ವರದಿಯನ್ನೇ ನಾಪತ್ತೆ ಮಾಡಿತ್ತು. ಅದು ಹೇಳುವುದಕ್ಕೂ ಮಾಡುವುದಕ್ಕೂ ಸಂಬಂಧವೇ ಇಲ್ಲ’ ಎನ್ನುತ್ತಾ, ಬಿಜೆಪಿ ಸರ್ಕಾರವು ಎಲ್ಲಾ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ತರುತ್ತದೆ ಎಂಬ ಭರವಸೆ ನೀಡಿದರು.

ಮುಸ್ಲಿಂ ವೈಯಕ್ತಿಕ ಕಾನೂನನ್ನು ತರುವುದೇ ದೇಶದಲ್ಲಿ ತುಷ್ಟೀಕರಣ ರಾಜಕಾರಣದ ಆರಂಭವಾಗಿದೆ ಎಂದ ಶಾ, ‘ಕಾಂಗ್ರೆಸ್‌ ಮುಸ್ಲಿಂ ವೈಯಕ್ತಿಕ ಕಾನೂನನ್ನು ಬೆಂಬಲಿಸುತ್ತದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದರು. ಜತೆಗೆ, ಬಿಜೆಪಿಯ ಬಳಿ ಕೇವಲ ಒಂದು ಸಂಸದ ಸ್ಥಾನವಿದ್ದರೂ ಅದು ಧರ್ಮಾಧಾರಿತ ಮೀಸಲಾತಿ ಕೊಡಲು ಬಿಡುವುದಿಲ್ಲ ಎಂದು ಸಾರಿದರು. ‘ರಾಹುಲ್‌ಗೆ 54 ಆದರೂ ಇನ್ನೂ ಯುವಕ!’

ಈ ವೇಳೆ ರಾಹುಲ್‌ ಗಾಂಧಿಯವರ ಮೇಲೆ ವೈಯಕ್ತಿಕ ದಾಳಿ ನಡೆಸಿದ ಶಾ, ‘ಅವರಿಗೀಗ 54 ವರ್ಷವಾದರೂ ತಮ್ಮನ್ನು ತಾವು ಯುವಕ ಎಂದು ಕರೆದುಕೊಳ್ಳುತ್ತಾರೆ’ ಎಂದು ಹೇಳಿದರು.