ಗೋವಿಂದ್ ಪನ್ಸಾರೆ, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್‌ರ ಯೋಚನೆ ಕೊಲ್ಲಲು ಆಗಲ್ಲ: ಪ್ರಕಾಶ್ ರೈ

| Published : Nov 10 2024, 02:05 AM IST / Updated: Nov 10 2024, 04:32 AM IST

ಸಾರಾಂಶ

ಗೋವಿಂದ್ ಪನ್ಸಾರೆ, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್‌ರ ಯೋಚನೆ, ಸ್ಫೂರ್ತಿಯನ್ನು ಎಂದಿಗೂ ಕೊಲ್ಲಲು ಸಾಧ್ಯವಿಲ್ಲ. ಇಂತಹ ಧ್ವನಿ ಅಡಗಿಸಲು ಪ್ರಯತ್ನ ಮಾಡಿದಷ್ಟು ಮತ್ತೊಂದು ಧ್ವನಿ ದೊಡ್ಡದಾಗಿ ಹುಟ್ಟಿ ಕೊಳ್ಳುತ್ತಲೇ ಇರುತ್ತದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.

 ಬೆಂಗಳೂರು : ಗೋವಿಂದ್ ಪನ್ಸಾರೆ, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್‌ರ ಯೋಚನೆ, ಸ್ಫೂರ್ತಿಯನ್ನು ಎಂದಿಗೂ ಕೊಲ್ಲಲು ಸಾಧ್ಯವಿಲ್ಲ. ಇಂತಹ ಧ್ವನಿ ಅಡಗಿಸಲು ಪ್ರಯತ್ನ ಮಾಡಿದಷ್ಟು ಮತ್ತೊಂದು ಧ್ವನಿ ದೊಡ್ಡದಾಗಿ ಹುಟ್ಟಿ ಕೊಳ್ಳುತ್ತಲೇ ಇರುತ್ತದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.

ಶನಿವಾರ ಚಿತ್ರಕಲಾ ಪರಿಷತ್‌ನಲ್ಲಿ ಬಹುರೂಪಿ ಹಾಗೂ ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದಿಂದ ಮಲಯಾಳಂ ಲೇಖಕಿ ಕೆ.ಆರ್.ಮೀರಾ ಬರೆದ, ಕನ್ನಡಕ್ಕೆ ವಿಕ್ರಂ ಕಾಂತಿಕೆರೆ ಅನುವಾದಿಸಿದ ‘ಭಗವಂತನ ಸಾವು’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.

ಪ್ರಸ್ತುತ ದೇಶ ಸಂತೋಷವಾಗಿಲ್ಲ. ನಮ್ಮನ್ನು ಘಾಷಿಗೊಳಿಸಿದವರ ಬಗ್ಗೆ ಮಾತನಾಡದಷ್ಟು ಅಸಹಾಯಕತೆ ನೋವು ನಮ್ಮನ್ನು ಕಾಡುತ್ತಿದೆ. ಸಹಜವಾಗಿ ನಿಧನವಾಗದೆ ಕೊಲ್ಲಲ್ಪಟ್ಟ ದಾಬೋಲ್ಕರ್, ಸ್ಟ್ಯಾನ್‌ ಸ್ವಾಮಿಯಂತವರ ಆಲೋಚನೆಗಳನ್ನು ಕೊಲ್ಲಲು ಆಗುವುದಿಲ್ಲ. ಜೈಲಿಗೆ ತಳ್ಳಲ್ಪಟ್ಟವರ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಹಲವು ವೇದಿಕೆಗಳು, ಕೃತಿಗಳು, ನಮ್ಮಂತವರು ಅವರನ್ನು ಸಾರಿ ಹೇಳುತ್ತಲೇ ಇರುತ್ತೇವೆ ಎಂದರು.

ಪ್ರಸ್ತುತ ನ್ಯಾಯಮೂರ್ತಿಯೊಬ್ಬರು ತೀರ್ಪು ಕೊಡುವ ಮುನ್ನ ಭಗವಂತನ ಮುಂದೆ ಹೋಗುತ್ತಾರೆ ಎಂದು ಕೇಳಿದ್ದೇವೆ. ಅವರು ಭಗವಂತನ ಮಾತು ಕೇಳಿಸಿಕೊಳ್ಳುತ್ತಾರೋ, ಇಲ್ಲವೇ ಭಗವಾನ್ ಮಾತು ಕೇಳುತ್ತಾರೋ ಗೊತ್ತಿಲ್ಲ. ಈ ರೀತಿಯ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಕ್ರೌರ್ಯದ ವಿರುದ್ಧ ನಮ್ಮ ಪ್ರತಿರೋಧ ಹೂವು ದಿನವೂ ಸೂರ್ಯನನ್ನು ಎದುರಿಸುವ ರೀತಿಯಂತಿರಬೇಕು. ನಮ್ಮ ಸಹನೆ, ಪ್ರೀತಿಯೆದುರು ಯಾವುದೇ ಕ್ರೌರ್ಯ ನಿಲ್ಲುವುದಿಲ್ಲ ಎಂದು ಹೇಳಿದರು.

‘ಭಗವಂತನ ಸಾವು’ ಕೃತಿಯಲ್ಲಿ ಮನುಷ್ಯನ ಊಹೆಗೂ ನಿಲುಕದಂತ ಕ್ರೌರ್ಯ ಇದೆ. ಇಲ್ಲಿಯ ಕಥೆಗಳನ್ನು ನಾವು ಓದಿದರೆ ನಾವು ಬದುಕುತ್ತಿರುವ ಕಾಲಘಟ್ಟ ಯಾವುದು ಎಂಬುವುದು ನಮಗೆ ಗೊತ್ತಾಗುತ್ತೆ ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕಿ ಕೆ.ಆರ್‌.ಮೀರಾ, ಬೌದ್ಧಿಕ ಪ್ರಪಂಚ ವಿಸ್ತಾರವಾಗಬೇಕು. ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್‌ ಹತ್ಯೆ ಸಮಾಜದ ಪ್ರಜ್ಞೆಯನ್ನು ಸಾಕಷ್ಟು ಅಲುಗಾಡಿಸಿವೆ. ಅದರ ಬಳಿಕವೂ ಸಮಾಜ ಪಾಠ ಕಲಿತಂತಿಲ್ಲ. ಕಲಬುರ್ಗಿ ನಿಧನದ ಬಳಿಕ ನಾನು ವಚನದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಕಲೆ, ಸಾಂಸ್ಕೃತಿಕ ವಲಯದಲ್ಲಿ ಪ್ರಕಾಶ್‌ ರೈ ರೀತಿ ಪ್ರಗತಿಪರ ಚಿಂತನೆ ಹೆಚ್ಚಬೇಕು ಎಂದರು.

ಎಂ.ಎಂ ಕಲಬುರಗಿ ಅವರ ಪುತ್ರ ಶ್ರೀ ವಿಜಯ ಕಲಬುರ್ಗಿ ಮಾತನಾಡಿ, ತಂದೆಯವರು ತಮ್ಮ ಮಕ್ಕಳಿಗಿಂತಲೂ ಹೆಚ್ಚಾಗಿ ಶಿಷ್ಯರಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟವರು. ಅವರ ಹತ್ಯೆ ಬಳಿಕ ಬಂದ ಮೊದಲ ಕೃತಿ ಈಗ ಕನ್ನಡಕ್ಕೆ ಅನುವಾದ ಆಗಿರುವುದಕ್ಕೆ ನಮ್ಮ ಕುಟುಂಬ ಚಿರಋಣಿ. ನಮ್ಮ ತಂದೆಯ ಬಗ್ಗೆ ಕೃತಿಗಳನ್ನು ಅನುವಾದಿಸುವವರೂ ಎಚ್ಚರಿಕೆಯಿಂದ ಇರಬೇಕಾದ ಸನ್ನಿವೇಶದಲ್ಲಿದ್ದೇವೆ ಎಂಬುದನ್ನು ಮರೆಯಬಾರದು ಎಂದು ವ್ಯಂಗ್ಯವಾಡಿದರು.

ಅನುವಾದಕ ವಿಕ್ರಂ ಕಾಂತಿಕೆರೆ ಮಾತನಾಡಿದರು. ನವಕರ್ನಾಟಕ ಪಬ್ಲಿಕೇಷನ್ಸ್‌ನ ಸಿದ್ದನಗೌಡ ಪಾಟೀಲ್‌, ಬಹುರೂಪಿಯ ಜಿ.ಎನ್‌.ಮೋಹನ್‌ ಇದ್ದರು.