ತಮ್ಮ ಸ್ವಕೇತ್ರದಲ್ಲಿಯೇ ರಾಜಿನಾಮೆ ಮಾತುಗಳನ್ನು ಆಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ : ಭಾರಿ ಸಂಚಲನ

| N/A | Published : Feb 24 2025, 12:32 AM IST / Updated: Feb 24 2025, 05:03 AM IST

Dr G parameshwar

ಸಾರಾಂಶ

ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು ಭಾನುವಾರ ತಮ್ಮ ಸ್ವಕೇತ್ರದಲ್ಲಿಯೇ ರಾಜಿನಾಮೆ ಮಾತುಗಳನ್ನು ಆಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

 ತುಮಕೂರು : ಅಧಿಕಾರ ಹಂಚಿಕೆ ಒಪ್ಪಂದದ ಹಿನ್ನೆಲೆಯಲ್ಲಿ ಬರುವ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಬದಲಾಗಲಿದ್ದಾರೆಂಬ ಪ್ರತಿಪಕ್ಷ ಬಿಜೆಪಿ ಭವಿಷ್ಯ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಕೆಲ ಕಾಂಗ್ರೆಸ್‌ ಹಿರಿಯ ನಾಯಕರು ದೆಹಲಿ ಯಾತ್ರೆ ಕೈಗೊಂಡಿರುವ ಬೆನ್ನಲ್ಲೇ, ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು ಭಾನುವಾರ ತಮ್ಮ ಸ್ವಕೇತ್ರದಲ್ಲಿಯೇ ರಾಜಿನಾಮೆ ಮಾತುಗಳನ್ನು ಆಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಭಾನುವಾರ ತುಮಕೂರು ಜಿಲ್ಲೆ ಕೊರಟಗೆರೆ ರಾಜೀವ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಡಾ.ಪರಮೇಶ್ವರ್, ‘ಇತ್ತೀಚೆಗೆ ಕ್ಷೇತ್ರದ ಕಾರ್ಯಕರ್ತರೊಂದಿಗೆ ಬೆರೆಯಲು ಆಗುತ್ತಿಲ್ಲ. ನಿಮ್ಮ ಮನಸ್ಸಿನ ಆಕಾಂಕ್ಷೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಯಕರ್ತರ ಕ್ಷಮೆ ಕೇಳಿದರು. ನೀವು ಹೇಳಿದರೆ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ’ ಎಂದು ಹೇಳಿದರು.

ಪರಂರ ಈ ಅಚ್ಚರಿಯ ಹೇಳಿಕೆಯಿಂದ ಕಾರ್ಯಕರ್ತರಲ್ಲೇ ಗೊಂದಲ ನಿರ್ಮಾಣವಾಯಿತು. ಕೂಡಲೇ ಕಾರ್ಯಕರ್ತರು ‘ರಾಜೀನಾಮೆ ಬೇಡ. ನೀವು ಮುಖ್ಯಮಂತ್ರಿ ಆಗಿ’ ಎಂದು ಘೋಷಣೆ ಕೂಗಿದರು.

ಇತ್ತೀಚೆಗೆ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ರಾಜಣ್ಣ ಅವರು ದೆಹಲಿಗೆ ಭೇಟಿ ನೀಡಿ ಹಲವು ನಾಯಕರ ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿದ್ದರು. ಇದರ ನಡುವೆಯೇ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಬಗ್ಗೆ ಸುಳಿವು ನೀಡಿದ್ದರು. ಇದರ ಬೆನ್ನಲ್ಲೇ ಡಾ. ಜಿ. ಪರಮೇಶ್ವರ್ ಅವರು ದೆಹಲಿ ಭೇಟಿ ಕೈಗೊಂಡು ವಾಪಸ್ಸಾಗಿ ಖಾಸಗಿ ಕೆಲಸದ ನಿಮಿತ್ತ ಹೋಗಿದ್ದು, ಯಾವುದೇ ರಾಜಕೀಯ ಅಡೆಂಡಾ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅದರ ನಡುವೆಯೇ ಪರಂ ನೀಡಿರುವ ಹೇಳಿಕೆ ನಾನಾ ವಿಶ್ಲೇಷಣೆಗೆ ನಾಂದಿ ಹಾಡಿದೆ.