ಸಾರಾಂಶ
ಮೈಸೂರು: ಪ್ರಸ್ತುತ ಸಂಸತ್, ಶಾಸನ ಸಭೆಗಳಿಗೆ ಕಳಪೆ ಸಾಮಗ್ರಿ ಕಳುಹಿಸುತ್ತಿದ್ದೇವೆ. ಹೀಗಾಗಿ, ಅನುಭವ ಮಂಟಪದಂಥ ಚರ್ಚೆಗಳು ನಡೆಯುತ್ತಿಲ್ಲ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿಷಾದ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ನಡೆದ ಶರಣ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ದೇಶದ ಸಂಸತ್ ಹಾಗೂ ರಾಜ್ಯದ ಶಾಸನಸಭೆಯನ್ನು 12ನೇ ಶತಮಾನದ ಅನುಭವ ಮಂಟಪಕ್ಕೆ ಹೋಲಿಕೆ ಮಾಡುತ್ತಾರೆ. ಅನುಭವ ಮಂಟಪದ ಪ್ರೇರಣೆಯಿಂದಲೇ ಶಾಸನ ಸಭೆಗಳು ರೂಪುಗೊಂಡಿವೆ ಎನ್ನುತ್ತಾರೆ. ಆದರೆ, ಈಗ ಸಂಸತ್ ಹಾಗೂ ಶಾಸನ ಸಭೆಯಲ್ಲಿ ಅಂತಹ ಚರ್ಚೆಗಳು ಆಗುತ್ತಿಲ್ಲ ಎಂದರು. ಅನುಭವ ಮಂಟಪದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮನಂತ ಶರಣರು ಈಗಿನ ಶಾಸನಸಭೆಗಳಲ್ಲಿ ಇಲ್ಲ. ಹಿಂದಿನ ದಶಕಗಳಲ್ಲಿ ಅಂತಹ ರಾಜಕಾರಣಿಗಳು, ರಾಜಕೀಯ ನಾಯಕರು ಇದ್ದರು. ಆದರೆ, ಈಗ ಮೌಲ್ಯ ಕುಸಿಯುತ್ತಿದ್ದು, ಸಾಂಸ್ಕೃತಿಕ ದಿವಾಳಿತನವನ್ನು ಕಾಣುತ್ತಿದ್ದೇವೆ ಎಂದರು.
ಮತ್ತೊಮ್ಮೆ ಶರಣ ಸಾಹಿತ್ಯ ಚಳವಳಿ:
ಪ್ರಸ್ತುತ ಬಸವಣ್ಣ ಹೇಳಿದ ಕಾಯಕ ತತ್ವ ಕಾಣುತ್ತಿಲ್ಲ. ಜಾತಿ ಶ್ರೇಷ್ಠತೆಯಿಂದ ಹೊರ ಬರಬೇಕಿದೆ. ಸ್ವಾತಂತ್ರ್ಯ ಚಳವಳಿಗಿಂತ ಶಕ್ತಿಯುತವಾದ ಶರಣ ಸಾಹಿತ್ಯ ಚಳವಳಿಯನ್ನು ಹಳ್ಳಿ-ಹಳ್ಳಿಗಳಲ್ಲಿ ಹುಟ್ಟು ಹಾಕಬೇಕಿದೆ. ನಾಡಿನಲ್ಲಿ ಸುಖೀ ರಾಜ್ಯದ ಕಲ್ಪನೆಯ ಸಾಕರ, ಸಮ ಸಮಾಜ ನಿರ್ಮಾಣ, ಮಾನವೀಯತೆಯ ವಾತಾವರಣ ಸೃಷ್ಟಿಯಾಗಬೇಕಾದರೆ ಇಂತಹ ಚಳವಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.