ಕೈತಪ್ಪಿರುವ ಬ್ಯಾಕ್‌ಲಾಗ್‌ ಹುದ್ದೆಗಳ ಪತ್ತೆಗೆ 5 ತಂಡ ರಚನೆ : ಡಾ.ಎಚ್.ಸಿ.ಮಹದೇವಪ್ಪ

| N/A | Published : Mar 13 2025, 09:34 AM IST

HC Mahadevappa

ಸಾರಾಂಶ

ರಾಜ್ಯದ ವಿವಿಧ ಇಲಾಖೆ, ನಿಗಮ-ಮಂಡಳಿ, ವಿಶ್ವವಿದ್ಯಾಲಯಗಳಲ್ಲಿ ತಪ್ಪಿ ಹೋಗಿರುವ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಪತ್ತೆ ಮಾಡಿ, ವರದಿ ನೀಡುವ ಸಲುವಾಗಿ ಐದು ತಂಡ ರಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

ವಿಧಾನಸಭೆ : ರಾಜ್ಯದ ವಿವಿಧ ಇಲಾಖೆ, ನಿಗಮ-ಮಂಡಳಿ, ವಿಶ್ವವಿದ್ಯಾಲಯಗಳಲ್ಲಿ ತಪ್ಪಿ ಹೋಗಿರುವ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಪತ್ತೆ ಮಾಡಿ, ವರದಿ ನೀಡುವ ಸಲುವಾಗಿ ಐದು ತಂಡ ರಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ಬ್ಯಾಕ್‌ಲಾಗ್‌ ಹುದ್ದೆ ನೇಮಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಅಬ್ಬಯ್ಯ ಪ್ರಸಾದ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ.ಮಹದೇವಪ್ಪ, ರಾಜ್ಯದಲ್ಲಿ 2001ರ ನಂತರದಲ್ಲಿ 16,413 ಪರಿಶಿಷ್ಟ ಜಾತಿ ಮತ್ತು 4,963 ಪರಿಶಿಷ್ಟ ಪಂಗಡ ಸೇರಿದಂತೆ ಒಟ್ಟು 21,376 ಹುದ್ದೆಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಈವರೆಗೆ 15,286 ಪರಿಶಿಷ್ಟ ಜಾತಿ ಮತ್ತು 4,379 ಪರಿಶಿಷ್ಟ ಪಂಗಡಕ್ಕೆ ಸೇರಿದ ಒಟ್ಟು 19,665 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಸದ್ಯ 916 ಹುದ್ದೆಗಳನ್ನು ಬ್ಯಾಕ್‌ಲಾಗ್‌ ಹುದ್ದೆಗಳೆಂದು ಗುರುತಿಸಿ, ಭರ್ತಿ ಮಾಡುವುದು ಬಾಕಿ ಉಳಿದಿದೆ ಎಂದರು.

ಬಾಕಿ ಇರುವ ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸಚಿವ ಸಂಪುಟ ಉಪ ಸಮಿತಿಯೂ ನಿರ್ಧಾರ ತೆಗೆದುಕೊಂಡಿದ್ದು, ಅದನ್ನು ಸಚಿವ ಸಂಪುಟದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ. ಅದರ ಜತೆಗೆ ಯಾವುದಾದರೂ ಇಲಾಖೆ, ನಿಗಮ-ಮಂಡಳಿ, ವಿಶ್ವವಿದ್ಯಾಲಯದಲ್ಲಿ ಬ್ಯಾಕ್‌ಲಾಗ್‌ ಹುದ್ದೆ ತಪ್ಪಿದರೆ ಅದನ್ನು ಗುರುತಿಸಿ ಪಟ್ಟಿ ನೀಡಲು 5 ತಂಡಗಳನ್ನು ರಚಿಸಲಾಗಿದೆ. ಆ ತಂಡಗಳು ಶೀಘ್ರದಲ್ಲಿ ಸರ್ಕಾರಿ ಕಚೇರಿಗಳಿಗೆ ತೆರಳಿ ಬ್ಯಾಕ್‌ಲಾಗ್‌ ಹುದ್ದೆಗಳ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಲಿವೆ ಎಂದು ವಿವರಿಸಿದರು.