ಪ್ರಧಾನಿ ನರೇಂದ್ರ ಮೋದಿ ಸಾಲ ಮಾಡಿದ್ದಕ್ಕೆ ಜನರ ಚಪ್ಪಾಳೆ ! ಭಾಷಣ ಮಾಡುವ ನಾಯಕರಿಗೆ ಮುಜುಗರ

| Published : Jan 20 2025, 12:15 PM IST / Updated: Jan 20 2025, 12:16 PM IST

narendra modi

ಸಾರಾಂಶ

‘ಮೋದಿ ಸರ್ಕಾರ ಲಕ್ಷಾಂತರ ಕೋಟಿ ರು. ಸಾಲ ಮಾಡಿ ನಮ್ಮ ತಲೆಗಳನ್ನು ಅಡ ಇಟ್ಟಿದೆ ಅಂತಾ ನಾನು ಹೇಳಿದರೆ, ನೀವು ಚಪ್ಪಾಳೆ ಮತ್ತು ಶಿಳ್ಳೆ ಹೊಡೆಯುತ್ತೀರಾ! ನಿಮಗೆ ಸ್ವಲ್ಪ ಬುದ್ಧಿ ಬೇಡ್ವಾ?’ ಎಂದು ಜೋರು ಮಾಡಿದರು. ಆಗ ಸಭಾಂಗಣ ನಗೆಗಡಲಲ್ಲಿ ತೇಲಿತು.

ಮೋದಿ ಸಾಲ ಮಾಡಿದ್ದಕ್ಕೆ ಜನರ ಚಪ್ಪಾಳೆ!

-ಎಲ್ಲದ್ದಕ್ಕೂ ಜನರ ಚಪ್ಪಾಳೆ ತಟ್ಟುವ ಜನರಿಂದ ಭಾಷಣ ಮಾಡುವ ನಾಯಕರಿಗೆ ಮುಜುಗರ

‘ಮೋದಿ ಸರ್ಕಾರ ಲಕ್ಷಾಂತರ ಕೋಟಿ ರು. ಸಾಲ ಮಾಡಿ ನಮ್ಮ ತಲೆಗಳನ್ನು ಅಡ ಇಟ್ಟಿದೆ ಅಂತಾ ನಾನು ಹೇಳಿದರೆ, ನೀವು ಚಪ್ಪಾಳೆ ಮತ್ತು ಶಿಳ್ಳೆ ಹೊಡೆಯುತ್ತೀರಾ! ನಿಮಗೆ ಸ್ವಲ್ಪ ಬುದ್ಧಿ ಬೇಡ್ವಾ?’ ಎಂದು ಜೋರು ಮಾಡಿದರು. ಆಗ ಸಭಾಂಗಣ ನಗೆಗಡಲಲ್ಲಿ ತೇಲಿತು.

ಅನೇಕ ಬಾರಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಷಣಕಾರರ ಮಾತುಗಳನ್ನು ಸಭಿಕರು ‘ಅಪಾರ್ಥ’ ಮಾಡಿಕೊಂಡು ಭಾಷಣಕಾರರು ಮುಜುಗರಕ್ಕೆ ಒಳಗಾಗುವ ಪ್ರಸಂಗಗಳು ನಡೆಯುತ್ತಿರುತ್ತವೆ. ಅಂಥದ್ದೇ ಪ್ರಸಂಗ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು.

ಕೃಷಿ ಸಮಸ್ಯೆಗಳು, ಬೇಡಿಕೆಗಳ ಕುರಿತು ಚರ್ಚಿಸಿ ರೈತರು, ಮುಖಂಡರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಿದ್ದ ಸಭೆಯಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ಕೇಂದ್ರ ಸರ್ಕಾರದ ನೀತಿಗಳನ್ನು ಭರ್ಜರಿಯಾಗಿಯೇ ಖಂಡಿಸುತ್ತಿದ್ದರು.

ತಮ್ಮದೇ ಧಾಟಿಯಲ್ಲಿ ‘ರೈತರನ್ನು ನಿರ್ಲಕ್ಷ್ಯಿಸಿ, ಅದಾನಿ, ಅಂಬಾನಿಯಂಥ ಉದ್ಯಮಿಗಳ ಪರವಾಗಿರುವ ಕೇಂದ್ರ ಸರ್ಕಾರ ನಮ್ಮ ದೇಶದ ಸಾಲವನ್ನು ನೂರಾ ಎಪ್ಪತ್ತೊಂದು ಲಕ್ಷ ಕೋಟಿ ರುಪಾಯಿಗೆ ತಂದು ನಿಲ್ಲಿಸಿದೆ’ ಎಂದರು. ತಕ್ಷಣವೇ ಸಭಾಂಗಣದಲ್ಲಿದ್ದ ಹಲವು ರೈತರು, ಮುಖಂಡರು ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿಬಿಟ್ಟರು!

ಇದರಿಂದ ಇರಿಸು ಮುರಿಸುಗೊಂಡ ಚಂದ್ರಶೇಖರ್, ‘ಮೋದಿ ಸರ್ಕಾರ ಲಕ್ಷಾಂತರ ಕೋಟಿ ರು. ಸಾಲ ಮಾಡಿ ನಮ್ಮ ತಲೆಗಳನ್ನು ಅಡ ಇಟ್ಟಿದೆ ಅಂತಾ ನಾನು ಹೇಳಿದರೆ, ನೀವು ಚಪ್ಪಾಳೆ ಮತ್ತು ಶಿಳ್ಳೆ ಹೊಡೆಯುತ್ತೀರಾ! ನಿಮಗೆ ಸ್ವಲ್ಪ ಬುದ್ಧಿ ಬೇಡ್ವಾ?’ ಎಂದು ಜೋರು ಮಾಡಿದರು. ಆಗ ಸಭಾಂಗಣ ನಗೆಗಡಲಲ್ಲಿ ತೇಲಿತು.

ಫ್ಲೈ ಓವರ್‌ ಮೇಲೆ ‌ ಹೀಗೊಂದು ‘ಲವ್‌ ಬ್ರೇಕ್‌ ಅಪ್..!!!’

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಂಡ್ಯ-ಬಿ.ಸಿ.ರೋಡ್‌ ನಡುವೆ ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಇನ್ನೂ ನಡೆಯುತ್ತಲೇ ಇರುವುದರಿಂದ ಪ್ರತಿನಿತ್ಯ ಟ್ರಾಫಿಕ್‌ ಜಾಮ್‌ ಸಾಮಾನ್ಯ. ಇಂತಹ ನಿಧಾನಗತಿಯ ಸಂಚಾರ ಲವ್ ಬ್ರೇಕಪ್ಪಿಗೂ ಕಾರಣವಾದ ವಿಚಿತ್ರ ಪರಿಸ್ಥಿತಿ ಇದು...

ಆ ದಿನ ಬೆಳಗ್ಗೆ 9.15ಕ್ಕೆ ಪುತ್ತೂರಿನ ಮುರದಲ್ಲಿ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸನ್ನೇರಿದ ಯುವಕನ‌ ಮುಖದಲ್ಲಿ ಏನೋ ಒದ್ದಾಟವಿತ್ತು.‌ ಮಂಗಳೂರಿಗೆ ಟಿಕೆಟ್ ತೆಗೆದ ಯುವಕ, ಬಸ್ಸು ವೇಗವಾಗಿ ಚಲಿಸುತ್ತಿದ್ದಂತೆಯೇ ಆಗಾಗ್ಗೆ ಬರುತ್ತಿದ್ಧ ಫೋನ್‌ ಕರೆಗೂ ಸಮಜಾಯಿಷಿ ಉತ್ತರ ನೀಡುತ್ತಿದ್ದ...

‘ಇಲ್ಲ ಪುಟ್ಟ ಬಂದೆ.. ಸ್ಸಾರಿ...ಇನ್ನು ಹತ್ತೇ ನಿಮಿಷ...’ ಎಂದಷ್ಟೇ ಹೇಳುತ್ತಿದ್ದ. ಬೆಳಗ್ಗಿನ ಪೀಕ್ ಅವರ್ ಬೇರೆ.. ತುಂಬಿ‌ ತುಳುಕುತ್ತಿದ್ದ‌ ಬಸ್ಸು ಕಬಕ, ಮಿತ್ತೂರು, ಮಾಣಿ ಹೀಗೆ ಸಾಗಿ‌ ಕಲ್ಲಡ್ಕದವರೆಗೂ ಬರುವಾಗ ಮತ್ತೆ ಫೋನ್.. ಗಡಿಬಿಡಿಯಲ್ಲಿ ಲೌಡ್ ಸ್ಪೀಕರ್ ಒತ್ತಿಬಿಟ್ಟಿದ್ದ ಅವನಿಗೆ ಆ‌ ಕಡೆಯಿಂದ‌ ಬೈಗುಳದ ಸುರಿಮಳೆಯೇ ಕೇಳುತ್ತಿತ್ತು... ‘ನೀವು ಯಾವಾಗ್ಲೂ‌ ಹೀಗೆಯೇ, ರಾತ್ರಿ ನಿಮ್ಮತ್ರ ಹೇಳಿದ್ದೆ ಅಲ್ವಾ.. ಬೆಳಗ್ಗೆ 7.30ಗೆ ಹೊರಡಿ ಅಂತ, ನಾನು ಪಾಣೆಮಂಗಳೂರು ಗುಡಿ ಹತ್ರ ಇದ್ದೇನೆ.. ಎಂಟೂ ಕಾಲಿಗೆ ಬಂದಿದ್ದೇನೆ..‌ ಹೋಗ್ಬೇಡ್ವಾ ಮಂಗಳೂರಿಗೆ’ ಎನ್ನುವ ಸಿಡಿಲಿನ ಮಾತಿಗೆ ಈ ಕಡೆಯಿಂದ, ಅಷ್ಟೇ ವಿನಯದ ಉತ್ತರ... ‘ಸ್ಸಾರಿ ಪುಟ್ಟಾ... ಬಂದೆ‌ ಬಂದೆ.. ನಾ‌ ಬಂದೆ..ನರಹರಿ ಪರ್ವತ ಪಾಸ್...’ ಎಂದಾಗ.. ಆ ಕಡೆಯಿಂದ ಮತ್ತೆ ಫೋನ್ ಕಟ್..

ಮುಂದೆ ಮೆಲ್ಕಾರ್‌ನಲ್ಲಿ ಜನ‌ ಇಳಿಸಿ.. ಹತ್ತಿಸಿ.. 9.50 ರ ಹೊತ್ತಿಗೆ ಮೆಲ್ಕಾರ್ ನಿಂದ ಹೊರಟಾಗ... ಈ ಕಡೆಯಿಂದ ಯುವಕನ ಸಮಾಜಾಯಿಷಿ ‘ಇನ್ನು ಮೂರೇ ನಿಮಿಷ.. ಸೀಟ್ ಇಲ್ಲ.. ಫ್ರಂಟಿಂದ ಹತ್ತಿ.. ಬ್ಯಾಕ್ ಬನ್ನಿ.. ನಾನೂ ಸ್ಟ್ಯಾಂಡಿಂಗ್...’ ಎಂದಾಗ ಆ ಕಡೆಯಿಂದ ಫೋನ್ ಕಟ್.. ‌

ಆ ಹೊತ್ತಿಗಾಗಲೇ ನಿರ್ವಾಹಕ ಹೇಳತೊಡಗಿದ... ‘ಪಾಣೆಮಂಗಳೂರು‌ ಹೋಗೋರು ಇಲ್ಲೇ ಇಳ್ಕೊಳ್ಳಿ.. ಬಸ್ ಫ್ಲೈಓವರ್ ಮೇಲೆ ಹೋಗುತ್ತೆ...’ ಅಂತ.. ಹೆದ್ದಾರಿಯಲ್ಲಿ ಒಮ್ಮೆ‌ನಿಂತ ಬಸ್ ಪಾಣೆಮಂಗಳೂರಿಗೆ ಹೋಗಬೇಕಿದ್ದವರನ್ನು ಇಳಿಸಿ.. ಫ್ಲೈ ಓವರ್‌ಗೆ ಎಂಟ್ರಿಕೊಟ್ಟಿತು... ಆಗಲೇ ಈ ಯುವಕನ ಹೃದಯ ಬಡಿತ ಜೋರಾದದ್ದು.. ಆ ಕಡೆಯಿಂದ ಫೋನು ಬಂತು... ‘ಎಲ್ಲಿದ್ದೀರಿ...?’ ಎಂಬ ಗಂಭೀರ ಧ್ವನಿ ಕೇಳಿತು. ಹೌಹಾರಿದ ಯುವಕ.. ‘ಅಯ್ಯೋ‌ ನಂಗೆ ಗೊತ್ತಾಗಲಿಲ್ಲ.. ಬಸ್ಸು ಫ್ಲೈ ಓವರ್ ಮೇಲಿಂದ‌ ಹೋಗ್ತಾ ಇದೆ.. ನೀನು, ಫ್ಲೈಓವ್ರ್ ಕೆಳಗಿದ್ದೀಯ... ಸೀದಾ ಮಂಗಳೂರು ಬರ್ತೀಯಾ..? ನಾನು ಬಿ.ಸಿ ರೋಡು ಇಳಿಬೇಕಾ‌‌‌..?’ ಎಂದ..

ಅಷ್ಟೇ ಖಾರವಾದ ಪ್ರತಿಕ್ರಿಯೆ ಅತ್ತ ಕಡೆಯಿಂದ ಬಂತು..‘ಯಾವುದೂ ಬೇಡ.. ಬ್ರೇಕ್ ಅಪ್... ಗುಡ್ ಬೈ’ಎಂದು ಫೋನ್ ಕಟ್ ಆದಾಗ.. ಯುವಕ ಬಸ್ಸೊಳಗೆ ನಿಂತಲ್ಲೇ ಕುಸಿದ..!‌ ನೀವೇ ಹೇಳಿ ಇದಕ್ಕೆ ಯಾರು ಹೊಣೆ..?

-ಮಂಜುನಾಥ್‌ ನಾಗಲೀಕರ್‌

-ಮೌನೇಶ್‌ ವಿಶ್ವಕರ್ಮ